ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ವಂಚನೆ!

ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ವಂಚನೆ!

ಧಾರವಾಡ, ಮೇ.9, ನ್ಯೂಸ್ ಎಕ್ಸ್ ಪ್ರೆಸ್: ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ ಅಂತ ಹೋದವರಿಗೆ ಅಕ್ಷಯ ತೃತೀಯ ದಿನದಂದು ವಂಚಕರು ಉಂಡೆನಾಮ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಧಾರವಾಡದಲ್ಲಿ ಬಂಗಾರ ಖರೀದಿಸಲು ತೆರಳಿದ್ದವರು ಈಗ ಹಣವೂ ಇಲ್ಲ, ಚಿನ್ನವೂ ಇಲ್ಲ ಎನ್ನುತ್ತ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಅಕ್ಷಯ ತೃತೀಯ ದಿನದಂದು ಬಂಗಾರ ಕೊಡಿಸುವುದಾಗಿ ನಂಬಿಸಿ ಉಂಡೆನಾಮ ಹಾಕಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ರಜತಗಿರಿಯಲ್ಲಿ ಈ ವಂಚನೆ ಪ್ರಕರಣ ನಡೆದಿದ್ದು, ಚಿತ್ರದುರ್ಗ ಮೂಲದ ಜಿ.ಆರ್ ರವಿಕುಮಾರ್ ಮತ್ತು ಜಾಕೀರ್ ಹುಸೇನ್ ಎನ್ನುವವರಿಗೆ ಪ್ರತಿ ಗ್ರಾಂ ಗೆ 100 ರಿಂದ 200 ರೂಪಾಯಿ ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ವಂಚಕರು ತಾವಿದ್ದ ಬಾಡಿಗೆ ಮನೆಗೆ ಕರೆಸಿಕೊಂಡಿದ್ದರು. ಮೊದಲಿಗೆ ಸ್ಯಾಂಪಲ್ ಅಂತ ಅಸಲಿ ಚಿನ್ನದ ಬಿಸ್ಕೆಟ್ ತೋರಿಸಿದ್ದರಂತೆ. ನಂತರ ಚಾಕು ತೋರಿಸಿ ಬೆದರಿಸಿದ ಖದೀಮರು ಗ್ರಾಹಕರಾಗಿ ಬಂದಿದ್ದ ರವಿಕುಮಾರ್​ ಮತ್ತು ಜಾಕೀರ್​​ ಬಳಿಯಿದ್ದ 15 ಲಕ್ಷ ಹಣ ದೋಚಿಕೊಂಡು ಪರಾರಿಯಾಗಿದ್ದಾರಂತೆ. ಜಿ.ಆರ್ ರವಿಕುಮಾರ್​ಗೆ ದಾವಣಗೆರೆ ಮೂಲದ ವ್ಯಕ್ತಿವೋರ್ವನಿಂದ ಪರಿಚಯವಾಗಿದ್ದ ವಂಚಕರು ನಕಲಿ ಹೆಸರುಗಳಿಂದ ಪರಿಚಯಿಸಿಕೊಂಡಿದ್ದರಂತೆ. ಅಲ್ಲದೆ ಧಾರವಾಡದ ರಜತಗಿರಿಯಲ್ಲಿ ಮನೆ ಬಾಡಿಗೆ ಪಡೆಯುವಾಗಲೂ ನಕಲಿ ಹೆಸರಿನಿಂದ ಅಗ್ರೀಮೆಂಟ್ ಬಾಂಡ್ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಹಣ ಕಳೆದುಕೊಂಡವರು ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos