ಮಾಜಿ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಚಿಂಚೋಳಿ ಬಿಜೆಪಿ ಅಭ್ಯರ್ಥಿ

ಮಾಜಿ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಚಿಂಚೋಳಿ ಬಿಜೆಪಿ ಅಭ್ಯರ್ಥಿ

ಬೆಂಗಳೂರು, ಏ. 22, ನ್ಯೂಸ್ ಎಕ್ಸ್ ಪ್ರೆಸ್:  ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ಬಿಜೆಪಿ ಅಭ್ಯರ್ಥಿಯಾಗಿ ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಮುಖ್ಯ ಕಾರ್ಯದರ್ಶಿಯಾಗಿದ್ದಾಗ ಸಾಕಷ್ಟು ಸುದ್ದಿ ಮಾಡಿದ್ದ ರತ್ನಪ್ರಭ ಅವರು ಪ್ರಧಾನಿ ನರೇಂದ್ರ ಮೋದಿ ಗಮನವನ್ನೂ ಸೆಳೆದಿದ್ದರು. ಹಾಗಾಗಿ ಅವರು ಐಎಎಸ್ ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ ಕೇಂದ್ರ ಸರಕಾರದಲ್ಲಿ ಯಾವುದಾದರೂ ಹುದ್ದೆ ಗಿಟ್ಟಿಸಿಕೊಳ್ಳಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಲೋಕಸಭೆ ಚುನಾವಣೆ ಘೋಷಣೆ ಬೆನ್ನಿಗೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿರುವ ಅವರು ನೇರವಾಗಿ ರಾಜಕಾರಣ ಪ್ರವೇಶಿಸಿದ್ದಾರೆ. ಐಎಎಸ್ ಅಧಿಕಾರಿಯಾಗಿ ಕಲಬುರಗಿ, ಬೀದರ್, ರಾಯಚೂರು ಭಾಗದಲ್ಲಿ ಹೆಚ್ಚು ಸಮಯ ಕೆಲಸ ಮಾಡಿದ್ದ ರತ್ನಪ್ರಭ ಅವರಿಗೆ ಹೈದರಾಬಾದ್ ಕರ್ನಾಟಕದ ಮೇಲೆ ವಿಶೇಷ ವ್ಯಾಮೋಹವಿದೆ. ಇದೇ ಕಾರಣದಿಂದ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ರತ್ನಪ್ರಭ ಅವರೇ ಕಣಕ್ಕಿಳಿಯಬಹುದು ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ನಡೆದಿತ್ತು. ಪಾರ್ಲಿಮೆಂಟ್ ಗೆ ಹೋಗುವ ಆಕಾಂಕ್ಷೆ ರತ್ನಪ್ರಭ ಅವರಿಗೂ ಇದೆ. ಆದರೆ, ಅಷ್ಟೊತ್ತಿಗಾಗಲೇ ಡಾ. ಉಮೇಶ್ ಜಾಧವ್ ಅವರನ್ನು ಕಾಂಗ್ರೆಸ್ ನಿಂದ ಸೆಳೆದು ಖರ್ಗೆ ವಿರುದ್ಧ ನಿಲ್ಲಿಸಲು ಬಿಜೆಪಿ ನಿರ್ಧರಿಸಿಯಾಗಿತ್ತು. ಹಾಗಾಗಿ ಜಾಧವ್ ಅವರಿಂದ ತೆರವಾಗಿರುವ ಚಿಂಚೋಳಿ ಕ್ಷೇತ್ರದಿಂದ ವಿಧಾನಸಭೆ ಉಪ ಚುನಾವಣೆಗೆ ಸ್ಪರ್ಧಿಸಲು ರತ್ನಪ್ರಭ ಒಪ್ಪಿಕೊಂಡಿದ್ದಾರೆ. ಈ ಪ್ರಸ್ತಾವಕ್ಕೆ ಬಿಜೆಪಿ ವರಿಷ್ಠರೂ ಸಮ್ಮತಿಸಿದ್ದಾರೆ ಎನ್ನಲಾಗಿದೆ. ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಮುತುವರ್ಜಿ ವಹಿಸಿದ್ದರಿಂದ ಖರ್ಗೆ ಅವರಿಗೂ ರತ್ನಪ್ರಭ ಆಪ್ತರಾಗಿದ್ದರು. ರತ್ನಪ್ರಭ ಮುಖ್ಯ ಕಾರ್ಯದರ್ಶಿಯಾಗಿ ಬಡ್ತಿ ಹೊಂದಲು ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಖರ್ಗೆ ಶಿಫಾರಸು ಮಾಡಿದ್ದೂ ಕಾರಣವಾಗಿತ್ತು ಎಂದು ಹೇಳಲಾಗಿತ್ತು. ಆದರೆ, ಈಗ ಖರ್ಗೆ ವಿರುದ್ಧವೇ ಕಲಬುರಗಿ ಆಖಾಡದಲ್ಲಿ ರತ್ನಪ್ರಭ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos