ಜಯಲಲಿತಾ ಸಾವು ತನಿಖೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್

ಜಯಲಲಿತಾ ಸಾವು ತನಿಖೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ, ಏ. 26, ನ್ಯೂಸ್ ಎಕ್ಸ್ ಪ್ರೆಸ್:  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಮಾಜಿ ನಾಯಕಿ ಜೆ.ಜಯಲಲಿತಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆರ್ಮುಗಂ ಸಮಿತಿ ನಡೆಸುತ್ತಿದ್ದ ಜಯಲಲಿತಾ ಸಾವಿನ ತನಿಖೆಗೆ ತಡೆ ನೀಡುವಂತೆ ಅಪೋಲೋ ಆಸ್ಪತ್ರೆ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ, ತಡೆ ನೀಡಲಾಗಿದೆ. ಅನಾರೋಗ್ಯದ ಕಾರಣ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಅವರು, ಸುಮಾರು 70 ಕ್ಕೂ ಹೆಚ್ಚು ದಿನಗಳ ಆಸ್ಪತ್ರೆ ವಾಸದ ನಂತರ 2016 ರ ಡಿಸೆಂಬರ್ 5 ರಂದು ಕೊನೆಯುಸಿರೆಳೆದಿದ್ದರು. ಆದರೆ ಅವರ ಸಾವು ಆಕಸ್ಮಿಕವಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಸರ್ಕಾರ ಅವರ ಸಾವಿನ ತನಿಖೆಗೆಂದು ಆರ್ಮುಗಂ ಹೆಸರಿನ ಸಮಿತಿಯೊಂದನ್ನು ನೇಮಿಸಿತ್ತು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ಈ ಸಮಿತಿ ತನಿಖೆ ನಡೆಸಿದ್ದು, ಇದೀಗ ಸುಪ್ರೀಂ ಕೋರ್ಟ್ ತನಿಖೆಗೆ ತಡೆ ನೀಡಿದೆ. ತನಿಖೆಯ ಸಮಯದಲ್ಲಿಸಮಿತಿಯು ಅಪೋಲೋ ಆಸ್ಪತ್ರೆಯ ಬಳಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ನಟ ಎಂಜಿಆರ್ ಅವರ ಸಾವಿನ ಕುರಿತ ದಾಖಲೆಯನ್ನೂ ಕೇಳಿತ್ತು. ಆದರೆ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಮಾಡುತ್ತಿರುವಾಗ ಎಂಜಿಆರ್ ಅವರ ಸಾವಿನ ಕುರಿತ ದಾಖಲೆಗಳನ್ನು ಕೇಳುತ್ತಿರುವ ಸಮಿತಿಯ ಕ್ರಮವನ್ನು ವಿರೋಧಿಸಿ, ಅಪೋಲೋ ಆಸ್ಪತ್ರೆ ಸುಪ್ರೀಂ ಕೋರ್ಟ್ ಮೊರೆಹೋಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos