ಆಂಧ್ರದಲ್ಲಿ ಎಲ್ಲ ಪಕ್ಷಗಳೂ ಒಟ್ಟಾರೆ 10,000 ಕೋಟಿ ರೂ. ವಿನಿಯೋಗಿಸಿವೆ!

ಆಂಧ್ರದಲ್ಲಿ ಎಲ್ಲ ಪಕ್ಷಗಳೂ ಒಟ್ಟಾರೆ 10,000 ಕೋಟಿ ರೂ. ವಿನಿಯೋಗಿಸಿವೆ!

ಅನಂತಪುರ, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಆಂಧ್ರದಲ್ಲಿ ಟಿಡಿಪಿ ಸೇರಿದಂತೆ ಪ್ರತಿಯೊಂದು ರಾಜಕೀಯ ಪಕ್ಷವೂ ಮತಗಳ ಖರೀದಿ ಮಾಡಿವೆ. ಈ ಬಾರಿಯ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಒಂದು ಮತಕ್ಕೆ 2,500 ರೂ. ನೀಡಿ ವ್ಯಾಪಾರಕ್ಕಿಳಿದಿದ್ದವು. ಹೀಗೆ ಮತಗಳ ಖರೀದಿಗೆಂದು ಎಲ್ಲ ಪಕ್ಷಗಳೂ ಒಟ್ಟಾರೆ 10,000 ಕೋಟಿ ರೂ. ವಿನಿಯೋಗಿಸಿವೆ ಎಂದು ಆಂಧ್ರಪ್ರದೇಶದ ತೆಲುಗು ದೇಶಂ ಪಾರ್ಟಿಯ ಸಂಸದ ಜೆ.ಸಿ. ದಿವಾಕರ್ ರೆಡ್ಡಿ ಇಂದು ಹೇಳಿದ್ದಾರೆ. ಇದೇ ಏ. 11ರಂದು ಆಂಧ್ರಪ್ರದೇಶದಲ್ಲಿ ಚುನಾವಣೆ ನಡೆದಿತ್ತು. ಚುನಾವಣಾ ಪ್ರಚಾರಕ್ಕೆ ಹೋದಾಗ ಜನರೇ ಮತ ಹಾಕಲು ಹಣ ಕೇಳುತ್ತಿದ್ದರು. ಅಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಬೇರೆ ಪಕ್ಷಗಳು ನಮಗೆ ಮತ ಹಾಕಲು 2 ಸಾವಿರ ರೂ. ನೀಡಿದ್ದಾರೆ. ಹಾಗಾಗಿ, ನೀವು ಎರಡೂವರೆ ಸಾವಿರ ರೂ. ನೀಡಿದರೆ ಮಾತ್ರ ಮತ ಹಾಕುತ್ತೇವೆ ಎಂದು ಜನರೇ ಬ್ಲಾಕ್​ಮೇಲ್ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಪ್ರತಿಯೊಂದು ಪಕ್ಷಗಳೂ ಏನಿಲ್ಲವೆಂದರೂ 50 ಕೋಟಿ ರೂ. ಹಣವನ್ನು ಹಂಚಿವೆ. ಇದಕ್ಕೆ ಪ್ರತಿಯೊಬ್ಬರೂ ಹೊಣೆಗಾರರು. ಹಾಗಾದರೆ ಈ ಹಣವೆಲ್ಲ ಎಲ್ಲಿಂದ ಬರುತ್ತಿದೆ? ಎಂದು ನೋಡಿದರೆ ಇದೆಲ್ಲವೂ ಭ್ರಷ್ಟಾಚಾರದಿಂದ ಸಂಗ್ರಹಿಸಲಾಗಿರುವ ಹಣ ಎಂದು ದಿವಾಕರ್ ರೆಡ್ಡಿ ಹೇಳಿದ್ದಾರೆ. ಅನಂತ್​ಪುರದ ಸಂಸದರಾಗಿರುವ ದಿವಾಕರ್ ರೆಡ್ಡಿ ಅವರ ಮಗ ಜೆ.ಸಿ. ಪವನ್ ರೆಡ್ಡಿ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ನಾನು ಯಾವುದೇ ಪಕ್ಷವನ್ನು ದೂರುತ್ತಿಲ್ಲ. ಆದರೆ, ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಕಡಿಮೆಯೆಂದರೂ 50 ಕೋಟಿ ರೂ. ಹಂಚಲಾಗಿದೆ ಎಂದು ಹೇಳುತ್ತಿದ್ದೇನೆ ಅಷ್ಟೆ. ಬೇರೆ ರಾಜ್ಯಗಳಲ್ಲಿ ಹೇಗೋ ಗೊತ್ತಿಲ್ಲ. ಆದರೆ, ಆಂಧ್ರದಲ್ಲಂತೂ ಒಂದು ಮತದ ಬೆಲೆ 2ರಿಂದ 2,000 ರೂ. ಕೂಲಿಕಾರ್ಮಿಕರು, ಬಡವರ್ಗದವರು ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಒಂದು ಮತದ ಬೆಲೆ 5 ಸಾವಿರ ದಾಟಿದ್ದೂ ಇದೆ ಎಂದು ದಿವಾಕರ್ ರೆಡ್ಡಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos