ಉಪನ್ಯಾಸಕರ ನೇಮಾತಿಗೆ ಒತ್ತಾಯ

ಉಪನ್ಯಾಸಕರ ನೇಮಾತಿಗೆ ಒತ್ತಾಯ

ಬೆಂಗಳೂರು, ಸೆ. 25: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪಿಯು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ ಮಾಡದೆ ತ್ವರಿತಗತಿಯಲ್ಲಿ ಮುಗಿಸಬೇಕೆಂದು ಆಕಾಂಕ್ಷಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೆಇಎ 2015ರಲ್ಲಿ 1,200 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿ, ಸ್ಪರ್ಧಾತ್ಮಕ ಪ್ರವೇಶ ಪ್ರಕ್ರಿಯೆ ನಡೆಸಿ ಹಂತಹಂತವಾಗಿ ಹಲವು ಪ್ರಕ್ರಿಯೆ ಮುಗಿಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹೆಸರಿಲ್ಲದವರು ನೇಮಕಾತಿ ಪ್ರಕ್ರಿಯೆಯಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ. ಕೆಇಎ ಬಿಡುಗಡೆ ಮಾಡಿದ ಕೀ-ಉತ್ತರಗಳಲ್ಲಿ ತಪ್ಪಿದೆ. ಯಾವುದೇ ಕಾರಣಕ್ಕೂ ಪ್ರಕ್ರಿಯೆ ಮುಂದುವರಿಸಬಾರದೆಂದು ಆರೋಪ ಮಾಡುತ್ತಿದ್ದಾರೆ. ಪ್ರಕ್ರಿಯೆ ದಿಕ್ಕು ತಪ್ಪಿಸುವ ಹುನ್ನಾರವಾಗಿದ್ದು, ಶಿಕ್ಷಣ ಸಚಿವರು ಮಣೆ ಹಾಕಬಾರದೆಂದು ಹುದ್ದೆ ನಿರೀಕ್ಷೆಯಲ್ಲಿರುವ ಅಕಾಂಕ್ಷಿಗಳು ಕೋರಿದ್ದಾರೆ.

ಹೆಚ್ಚುವರಿ ಹುದ್ದೆ ಆಸೆ

ತಾತ್ಕಾಲಿಕ ಹುದ್ದೆ ಪಟ್ಟಿಯಲ್ಲಿ ಹೆಸರಿಲ್ಲದವರು ಹೆಚ್ಚುವರಿ ಹುದ್ದೆ ಸೃಷ್ಟಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಸರ್ಕಾರ ಅವರ ಮನವಿ ತಳ್ಳಿಹಾಕಿತ್ತು. ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ರದ್ದು ಮಾಡುವ ಉದ್ದೇಶದಿಂದ ಸರಿ ಉತ್ತರ ಇದ್ದರೂ ತಪ್ಪೆಂದು ದೂರುತ್ತಿದ್ದಾರೆ. ಕೆಇಎ ಪಾರದರ್ಶಕ ನೇಮಕಾತಿ ನಡೆಸುತ್ತಿದ್ದು, ನೇಮಕಾತಿ ಮುಂದುವರಿಸಬೇಕೆಂದು ಭಾವಿ ಉಪನ್ಯಾಸಕರು ಆಗ್ರಹಿಸಿದ್ದಾರೆ.

ಸಮಿತಿಗಿಲ್ಲ ಬೆಲೆ

ತಾತ್ಕಾಲಿಕ ಉತ್ತರ ಬಿಡುಗಡೆ ಮಾಡುವಾಗ ಕೆಲ ತಪ್ಪು ಆಗುವುದು ಸಹಜ. ಇದಕ್ಕಾಗಿ ಆಕ್ಷೇಪಣೆ ಆಹ್ವಾನಿಸಿತ್ತು. 3 ಬಾರಿ ಆಕ್ಷೇಪಣೆ ಪಡೆದು ತಜ್ಞರ ಸಮಿತಿಯ ವರದಿ ಪಡೆದು ಕೆಲ ಪ್ರಶ್ನೆಗಳಿಗೆ ಕೃಪಾಂಕ ಮತ್ತು ಸರಿ ಉತ್ತರಗಳನ್ನು ಪ್ರಕಟಿಸಿದೆ. ಮುಂದೆ ಯಾವುದೇ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲವೆಂದು ಕೆಇಎ ಸ್ಪಷ್ಟವಾಗಿ ತಿಳಿಸಿತ್ತು. ಆ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸದ ಕೆಲವು ಅಭ್ಯರ್ಥಿಗಳು ತಾತ್ಕಾಲಿಕ ಪಟ್ಟಿ ಪ್ರಕಟವಾದ ನಂತರ ದೂರುವುದು ಎಷ್ಟು ಸರಿ ಎಂದು ನೊಂದ ಉಪನ್ಯಾಸಕರು ಪ್ರಶ್ನಿಸಿದ್ದಾರೆ.

ಕೆಲಸ ಇಲ್ಲ

ಅಧಿಸೂಚನೆ ಹೊರಡಿಸಿ 4 ವರ್ಷ ಕಳೆಯುತ್ತಿದೆ. ಇದೇ ಸಮಯದಲ್ಲಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗೂ ಕೆಇಎ ಪ್ರವೇಶ ಪ್ರಕ್ರಿಯೆ ಆರಂಭಿಸಿತ್ತು. ಸಹಾಯಕ ಪ್ರಾಧ್ಯಾಪಕರು ನೇಮಕಾತಿ ಪ್ರಕ್ರಿಯೆ ಮುಗಿಸಿ 2 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮ ಹುದ್ದೆಗಳು ಮಾತ್ರ ಪ್ರಕ್ರಿಯೆಯಲ್ಲಿವೆ. ಬೇರೆ ಕಡೆ ಕೆಲಸ ಇಲ್ಲ. ಸದ್ಯ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರಿರುವ ಬಹುತೇಕರು ವಯೋಮಿತಿ ಮೀರುವ ಅಂಚಿನಲ್ಲಿದ್ದಾರೆ. ಶಿಕ್ಷಣ ಸಚಿವರು ಕೂಡಲೇ ಎಲ್ಲಾ ಅಂಶಗಳನ್ನು ಗಮನಿಸಬೇಕೆಂಬುದು ನೊಂದ ಶಿಕ್ಷಕರ ಮನವಿ ಮಾಡಿದ್ದಾರೆ.

ವರ್ಗಾವಣೆ ಮಿತಿ ಹಚ್ಚಾಗಲಿ

ಪದವಿಪೂರ್ವ ಕಾಲೇಜುಗಳ ಉಪನ್ಯಾಸಕ ವೃಂದದ ಕೋರಿಕೆ ವರ್ಗಾವಣೆ ಮಿತಿಯನ್ನು ಶೇ.4ರಿಂದ ಶೇ.8ಕ್ಕೆ ಏರಿಕೆ ಮಾಡುವಂತೆ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಒತ್ತಾಯಿಸಿದೆ.

ನಿಯಮದ ಪ್ರಕಾರ ವರ್ಗಾವಣೆಗೆ ಮಿತಿ ನಿಗದಿಯಾಗಿದೆ. ಪದವಿಪೂರ್ವ ಕಾಲೇಜುಗಳ ವೃಂದ ನಿಯಮ 4ರಂತೆ ಹೆಚ್ಚುವರಿ ಉಪನ್ಯಾಸಕರ ವರ್ಗಾವಣೆ ಬೆರಳೆಣಿಗೆ ವಿಷಯಗಳ ಉಪನ್ಯಾಸಕರನ್ನು ಹೊರತು ಪಡಿಸಿ ಶೇ.1 ಮಿತಿ ದಾಟಿರುವುದಿಲ್ಲ.

ಪ್ರಸಕ್ತ ಸಾಲಿನ ಉಪನ್ಯಾಸಕ ವೃಂದದ ವರ್ಗಾವಣೆಯಲ್ಲಿ ನಿಯಮ 3 ರಲ್ಲಿ ವರ್ಗಾವಣೆ ಶೇ.4ರಿಂದ 8 ಹೆಚ್ಚಿಸಬೇಬೇಕೆಂದು ಪಿಯು ಇಲಾಖೆ ಜಂಟಿ ನಿರ್ದೇಶಕರಿಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಎಚ್. ನಿಂಗೇಗೌಡ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಶ್ರೀಕಂಠೇಗೌಡ ಮನವಿ ಪತ್ರ ಸಲ್ಲಿಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos