ಬರಪೀಡಿತ ತಾಲೂಕು ಪಟ್ಟಿಗೆ ಸೇರದ ಸಿರಾ

ಬರಪೀಡಿತ ತಾಲೂಕು ಪಟ್ಟಿಗೆ ಸೇರದ ಸಿರಾ

ಸಿರಾ, ಮಾ. 18: ಬೇಸಿಗೆಯ ಬೇಗೆಗೆ ದಿನೇ ದಿನೆ ಹೆಚ್ಚುತ್ತಿದ್ದು, ತಾಲೂಕಿನ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತತ್ವಾರ ಎದುರಾಗಿದೆ. ಆದರೆ ಬೇಸಿಗೆಯಲ್ಲಿ ಉದ್ಭವಿಸುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆಗೆ ಸರಕಾರದ ಅನುದಾನವೂ ಲಭ್ಯವಾಗುವುದು ಅನುಮಾನ. ಏಕೆಂದರೆ ಸಿರಾ ಬರಪೀಡಿತ ತಾಲೂಕುಗಳ ಪಟ್ಟಿಯಲಗ್ಲಿ ಇಲ್ಲ. ಹಾಗಾಗಿ ಸರಕಾರ ನೀಡುವ ಅನುದಾನದಲ್ಲಿ ನಮಗೆ ಅದರ ಪಾಲು ಸಿಗುವುದಿಲ್ಲ.

ದಾರಿ ತೋಚದಾಗಿವೆ ಗ್ರಾಪಂಗಳಿಗೆ

ಇನ್ನೂ ಬೇಸಿಗೆಯ ಪ್ರಾರಂಭದಲ್ಲಿಯೇ ತಾಲೂಕಿನ 18 ಗ್ರಾಮ ಪಂಚಾಯಿತಿಗಳ ಮಾನಂಗಿ, ಮಾನಂಗಿ ತಾಂಡ, ಕಡವಿಗೆರೆ, ಕಾರ್ಪೆಹಳ್ಳಿ, ದೇವರಹಳ್ಳಿ, ದೇವರಹಳ್ಳಿ ಹೊಸಬಡಾವಣೆ, ಉದ್ದಯ್ಯನಪಾಳ್ಯ, ಹೊನ್ನಗೊಂಡನಹಳ್ಳಿ, ಅಪ್ಪಿಹಳ್ಳಿ, ಹನುಮಂತನಗರ, ರತ್ನಸಂದ್ರ ಗೊಲ್ಲರಹಟ್ಟಿ, ಮೂಗನಹಳ್ಳಿ, ರಂಗಾಪುರ, ಉದ್ದಯ್ಯನಚಿಕ್ಕನಹಟ್ಟಿ, ನೇಜಂತಿ, ಗುಜ್ಜಾರಪ್ಪನಪಾಳ್ಯ, ಯಾದಲಡಕು ಜಿ. ಹಟ್ಟಿ ಗ್ರಾಮಗಳನ್ನು ಈಗಾಗಲೇ ಸಮಸ್ಯಾತ್ಮಕ ಗ್ರಾಮಗಳೆಂದು ಪಟ್ಟಿ ಮಾಡಲಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಎಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಡುವುದೋ ತಿಳಿದಿಲ್ಲ. ಹೀಗಿರುವಾಗ ಈ ಗ್ರಾಮಗಳಿಗೆ ಕುಡಿಯುವ ನೀರೊದಗಿಸಲು ಏನು ಮಾಡಬೇಕು ಎಂಬುದೇ ಗ್ರಾಮ ಪಂಚಾಯಿತಿಗಳಿಗೆ ತೋಚುತ್ತಿಲ್ಲ.

ಬರಪೀಡಿತ ತಾಲೂಕು ಪಟ್ಟಿಯಿಂದ ಕೈ ಬಿಡಲಾಗಿದೆ

ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 42,355 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದು, ಇದರಲ್ಲಿ ಸುಮಾರು 30,793 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಸುಮಾರು 14.81 ಕೋಟಿ ರೂ.ಗಳಷ್ಟು ಬೆಳೆ ನಷ್ಟವಾಗಿದೆ ಎಂದು ಕೃಷಿ ಮತ್ತು ಕಂದಾಯ ಇಲಾಖೆಯವರು ಜಂಟಿ ಸಮೀಕ್ಷೆ ಮಾಡಿ ಈ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಆದರೂ ಸಿರಾ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಡಲಾಗಿದೆ.

ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಗ್ರಾಮಗಳಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿಯ 14ನೇ ಹಣಕಾಸಿನಲ್ಲೇ ಶೇ. 50 ರಷ್ಟು ಹಣ ಮೀಸಲಿಟ್ಟು ಖರ್ಚು ಮಾಡಬೇಕೆಂದು ಅಧಿಕಾರಿಗಳು ತಿಳಿಸುತ್ತಾರೆ. ಆದರೆ 14ನೇ ಹಣಕಾಸಿನಲ್ಲಿ ಸುಮಾರು ಒಂದು ಪಂಚಾಯಿತಿಗೆ 10 ರಿಂದ 16 ಲಕ್ಷ ರೂ. ಬಿಡುಗಡೆಯಾಗುತ್ತದೆ. ಈ ಹಣದಲ್ಲಿ ಶೇ. 5 ರಷ್ಟು ಅಂಗವಿಕಲರಿಗೆ, ಶೇ. 25ರಷ್ಟು ವಿದ್ಯುತ್ ಬಿಲ್, ಶೇ. 2ರಷ್ಟು ಕ್ರೀಡಾ ಸಾಮಗ್ರಿಗಳಿಗೆ ಮೀಸಲಿಡಬೇಕು. ಅಲ್ಲದೆ ಪೈಪ್‌ಲೈನ್, ಪಂಪು ಮೋಟಾರ್ ಬದಲಾವಣೆ, ರಿಪೇರಿ, ದುರಸ್ತಿ, ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬೇಕು. ಇದೇ ಹಣದಲ್ಲಿ ಕುಡಿಯುವ ನೀರಿಗೂ ಮೀಸಲಿಡಬೇಕೆಂದರೆ ಹಣವೆಲ್ಲಿ ಉಳಿಯುತ್ತದೆ ಎಂಬುದೆ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos