ಮೂಲಸೌಕರ್ಯ ವಂಚಿತ ವೈಟ್ ಕಾಲರ್ ಕ್ರೈಮ್ ಠಾಣೆ

ಮೂಲಸೌಕರ್ಯ ವಂಚಿತ ವೈಟ್ ಕಾಲರ್ ಕ್ರೈಮ್ ಠಾಣೆ

ಬೆಂಗಳೂರು, ಅ. 24: ರಾಜ್ಯದ ರಾಜಧಾನಿ, ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ, ಬಹುತೇಕ ಇಲಾಖೆಗಳು ಕಾರ್ಯನಿರ್ವಹಣೆ ಮಾಡುವ ಬಹುಮಹಡಿ ಕಟ್ಟಡ ವ್ಯಾಪ್ತಿಯಲ್ಲಿನ ಹೈ ಪ್ರೊಫೈಲ್ ಪ್ರಕರಣಗಳು ದಾಖಲಾಗುವಂತಹ ವಿಧಾನಸೌಧ ಪೊಲೀಸ್ ಠಾಣೆಯ ಮೂಲಭೂತ ಸೌಲಭ್ಯ ವಂಚಿತ ನೈಜ ಕಥೆಯಿದು.

ಅಪರಾಧ ಪ್ರಕರಣಗಳ ಕಡತಗಳನ್ನು ಇಡಲು ಪ್ರತ್ಯೇಕ ಕೊಠಡಿಯಿಲ್ಲ. ಆರೋಪಿಗಳನ್ನು ಠಾಣೆಗೆ ಕರೆತಂದರೆ ಬಂಧಿಸಿಲು ಸೆಲ್ ಮಾತ್ರ ಕೇಳಲೇ ಬೇಡಿ. ಠಾಣಾ ಸಿಬ್ಬಂದಿಗೆ ಉತ್ತಮ ಕೊಠಡಿ, ಶೌಚಾಲಯ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲ. ಇಲ್ಲೊಂದು ಪೊಲೀಸ್ ಠಾಣೆ ಇದೆ ನೋಡಿ. ಕಳೆದ 10 ವರ್ಷಗಳಿಂದ ಬಹುಮಹಡಿ ಕಟ್ಟಡಗಳ ನೆಲಮಹಡಿಯಲ್ಲಿ ಕಿಷ್ಕಿಂದೆಯಂತಹ ಜಾಗದಲ್ಲಿ ವಿಧಾನಸೌಧ ಪೊಲೀಸ್ ಠಾಣೆ ತನ್ನ ಕಾಯಕದಲ್ಲಿ ತೊಡಗಿದೆ. ಇರುವಷ್ಟರಲ್ಲಿಯೇ ದೂರುದಾರರ ಅಹವಾಲು ಕೇಳುವುದು, ಪ್ರಕರಣದ ತನಿಖೆಯ ಅಧ್ಯಯನ ಸೇರಿ ಮತ್ತಿತರ ಕಾರ್ಯಗಳನ್ನು ತೂಗಿಸಿಕೊಂಡು ಬರುತ್ತಿದೆ.

ಖೈದಿಗಳಿಗಿಲ್ಲ ಸೆಲ್

ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಆರೋಪಿಗಳನ್ನು ಠಾಣೆಯಲ್ಲಿ ಕೂಡಿಹಾಕಲು ಪ್ರತ್ಯೇಕ ಸೆಲ್ ವ್ಯವಸ್ಥೆ ಇಲ್ಲ. ಒಬ್ಬ ಆರೋಪಿ ಬಂಧಿಸಿ, ಅದೇ ಸಮಯಕ್ಕೆ ಮತ್ತೊಂದು ಪ್ರಕರಣದ ಆರೋಪಿಗಳನ್ನು ಬಂಧಿಸಿ ಕರೆತಂದರೆ, ಠಾಣೆಯ ಒಳ ಆವರಣದಲ್ಲಿ ಇರಿಸಬೇಕು. ಇಲ್ಲವೇ ಪೊಲೀಸ್ ಸಿಬ್ಬಂದಿಯ ಕೊಠಡಿಯಲ್ಲಿಟ್ಟು ಕಾಯಬೇಕಾದ ಪರಿಸ್ಥಿತಿಯಿದೆ.

 ಪಾರ್ಕಿಂಗ್ ಇಲ್ಲ

ಠಾಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಯ ವಾಹನ ನಿಲುಗಡೆಗೂ ಜಾಗವಿಲ್ಲ. ಬಹುಮಹಡಿ ಕಟ್ಟಡದ ನೆಲಮಹಡಿಯಲ್ಲಿ ಪಾರ್ಕಿಂಗ್‌ನ್ನು ಸರ್ಕಾರ ಟೆಂಡರ್ ನೀಡಿದೆ. ಸಾರ್ವಜನಿಕರ ವಾಹನ ನಿಲುಗಡೆಯಿಂದಾಗಿ ಪೊಲೀಸ್ ಸಿಬ್ಬಂದಿ ವಾಹನ ನಿಲ್ಲಿಸಲು ಆಗುತ್ತಿಲ್ಲ. ಅಪರಾಧ ಪ್ರಕರಣಗಳಲ್ಲಿ ಜಪ್ತಿಯಾದ ಬೈಕ್‌ಗಳನ್ನು ಠಾಣಾ ಆವರಣದ ಮೆಟ್ಟಿಲು ಬಳಿ ನಿಲ್ಲಿಸಲಾಗಿದೆ.

ಒಂದೇ ಶೌಚಾಲಯ

ಠಾಣೆಯ ಅಧಿಕಾರಿಗಳು, ಪುರುಷ ಸಿಬ್ಬಂದಿ, ಮಹಿಳಾ ಸಿಬ್ಬಂದಿ ಎಲ್ಲರಿಗೂ ಸೇರಿ ಇರುವುದು ಏಕೈಕ ಶೌಚಾಲಯ. ಬಂಧಿತ ಆರೋಪಿಗಳಿಗೂ ಅದೇ ಶೌಚಾಲಯ ಬಳಕೆಗೆ ನೀಡಬೇಕು. ಮಹಿಳಾ ಸಿಬ್ಬಂದಿ ಅದೇ ಕಟ್ಟಡದಲ್ಲಿರುವ ಇತರೆ ಶೌಚಾಲಯಗಳನ್ನು ಅವಲಂಬಿಸಬೇಕಾದ ದುಃಸ್ಥಿತಿಯಿದೆ. ಅಧಿಕಾರಿಗಳದ್ದೂ ಇದೇ ಸ್ಥಿತಿಯಾಗಿದೆ.

ಸಿಬ್ಬಂದಿ ಕೊರತೆ ಹೆಚ್ಚಿದ ಹೊರೆ

ಮೂಲಭೂತಸೌಲಭ್ಯಗಳ ಸಮಸ್ಯೆ ಒಂದೆಡೆಯಾದರೆ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಿಬ್ಬಂದಿಗೆ ಕೆಲಸದೊತ್ತಡದ ಹೊರೆ ಹೆಚ್ಚುತ್ತಿದೆ.ಠಾಣೆಗೆ ಮಂಜೂರಾಗಿರುವ ಹುದ್ದೆಗಳ ಸಂಖ್ಯೆ ಠಾಣಾಧಿಕಾರಿ ಸೇರಿ 69 ಕರ್ತವ್ಯ ನಿರ್ವಹಿಸುತ್ತಿರುವುದು 40 ಮಾತ್ರ. ತಿಂಗಳಲ್ಲಿ ಕನಿಷ್ಠ 20 ದಿನ ಪ್ರತಿಭಟನೆ, ‍ರ್ಯಾಲಿಯ ಬಿಗಿ ಬಂದೋಬಸ್ತ್ ಕಾರ್ಯನಿರ್ವಹಣೆ ಭಾರ ಇರಲಿದೆ.

ವಿವಿಐಪಿ ಭದ್ರತೆಯ ಜವಾಬ್ದಾರಿಯೂ ನಿರ್ವಹಿಸಬೇಕು. ಸಿಬ್ಬಂದಿ ಮೇಲೆ ಅಧಿಕ ಕಾರ್ಯದ ಒತ್ತಡ ಜೊತೆಗೆ ಪ್ರಕರಣದ ತನಿಖೆಗಳ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ. ಬಹುತೇಕ ವೈಟ್‌ಕಾಲರ್ ಪ್ರಕರಣಗಳೆ ದಾಖಲಾಗುತ್ತವೆ. ಪ್ರತಿಯೊಂದು ಪ್ರಕರಣಕ್ಕೂ ಹೆಚ್ಚಿನ ಸಮಯ ನೀಡಿ ತನಿಖೆ ನಡೆಸಬೇಕಾಗುತ್ತದೆ. ಸಿಬ್ಬಂದಿ ಕೊರತೆ ಹಾಗೂ ಹೆಚ್ಚು ಕೆಲಸದೊತ್ತಡದಿಂದ ದಾಖಲಾದ ಪ್ರಕರಣಗಳು, ಕೇಸುಗಳು ಸಿಸಿಬಿ, ಕಬ್ಬನ್ ಪಾರ್ಕ್ ಠಾಣೆಗೆ ಹಸ್ತಾಂತರಗೊಂಡಿವೆ. ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ತಮ್ಮ ಅಸಾಹಾಯಕತೆಯನ್ನು ತೋಡಿಕೊಂಡರು.

ಕಾಯಕಲ್ಪ ಎಂದು

ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿರುವ ಹಾಗೂ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ವಿಧಾನಸೌಧ ಠಾಣೆಗೆ ಪ್ರತ್ಯೇಕ ಕಟ್ಟಡ, ಅಗತ್ಯ ಸಿಬ್ಬಂದಿ ಮಂಜೂರಾದರೆ ಮತ್ತಷ್ಟು ಚುರುಕಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗಲಿದೆ ಇಲ್ಲಿನ ಅಧಿಕಾರಿಗಳ ಆಶಯ.

 

ಫ್ರೆಶ್ ನ್ಯೂಸ್

Latest Posts

Featured Videos