ಭಾರತೀಯ ಮಾಧ್ಯಮಗಳು ಜನರನ್ನು ಪ್ರಚೋದಿಸುತ್ತಿವೆ: ಅಭಿನಂದನ್

ಭಾರತೀಯ ಮಾಧ್ಯಮಗಳು ಜನರನ್ನು ಪ್ರಚೋದಿಸುತ್ತಿವೆ: ಅಭಿನಂದನ್

ನವದೆಹಲಿ, ಮಾ.2, ನ್ಯೂಸ್‍ ಎಕ್ಸ್‍ ಪ್ರೆಸ್‍: ಭಾರತೀಯ ಪೈಲಟ್ ಅಭಿನಂದನ್ ಪಾಕಿಸ್ತಾನದ ಸೇನಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾದ ವೀಡಿಯೊವೊಂದನ್ನು ಪಾಕಿಸ್ತಾನದ ಮಾಧ್ಯಮ ‘ಡಾನ್’ ಪ್ರಸಾರ ಮಾಡಿದೆ. ಇದು ಶುಕ್ರವಾರ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಲ್ಲ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಪಾಕಿಸ್ತಾನ, ಅಭಿನಂದನ್ ಮೇಲೆ ಒತ್ತಡ ಹಾಕಿ ಈ ವೀಡಿಯೋ ಚಿತ್ರೀಕರಣ ಮಾಡಿಸಿದೆ. ಇದರಲ್ಲಿ ಹಲವಾರು ಕಡೆ ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ ಎಂದು ಭಾರತೀಯ ರಕ್ಷಣಾ ಪಡೆಯ ಮೂಲಗಳು ‘ದಿ ಪ್ರಿಂಟ್’ ವೆಬ್ ಸೈಟ್ ಗೆ ತಿಳಿಸಿವೆ.

ಅಭಿನಂದನ್‍ ಮಾತಾಡಿರುವ ವೀಡಿಯೊದಲ್ಲಿ ಏನಿದೆ?

“ನನ್ನ ಹೆಸರು ವಿಂಗ್ ಕಮಾಂಡರ್ ಅಭಿನಂದನ್. ಭಾರತೀಯ ವಾಯುಪಡೆಯ ಯುದ್ಧವಿಮಾನದ ಪೈಲಟ್. ನಾನು ನನ್ನ ಗುರಿಗಾಗಿ (ಎದುರಾಳಿ ವಿಮಾನ) ಹುಡುಕಾಡುತ್ತಿದ್ದಾಗ ನಿಮ್ಮ (ಪಾಕಿಸ್ತಾನದ) ವಾಯುಪಡೆ, ನನ್ನ ವಿಮಾನವನ್ನು ಹೊಡೆದುರುಳಿಸಿತು. ನಾನು ವಿಮಾನದಿಂದ ‘ಇಜೆಕ್ಟ್’ ಆದೆ. ಪ್ಯಾರಾಚೂಟ್ ಮೂಲಕ ನೆಲಕ್ಕಿಳಿದೆ. ಆಗ ನನ್ನ ಕೈಯಲ್ಲಿ ಪಿಸ್ತೂಲು ಇತ್ತು. ಅಲ್ಲಿ ತುಂಬಾ ಜನರಿದ್ದರು. ನಾನು ಪಿಸ್ತೂಲನ್ನು ಕೆಳಗಿಳಿಸಿ ಅಲ್ಲಿಂದ ಓಡಿದೆ. ನನ್ನನ್ನು ನಾನು ರಕ್ಷಿಸಿಕೊಳ್ಳಲು ನನಗಿದ್ದದ್ದು ಅದೊಂದೆ ದಾರಿ. ಆ ಜನರು ನನ್ನನ್ನು ಅಟ್ಟಿಸಿಕೊಂಡು ಬಂದರು. ಅವರು ತೀರಾ ಉದ್ವೇಗದಲ್ಲಿದ್ದರು. ಆಗ ಪಾಕಿಸ್ತಾನ ಸೇನೆಯ ಇಬ್ಬರು ಅಧಿಕಾರಿಗಳು ಬಂದು ಆ ಗುಂಪಿನಿಂದ ನನ್ನನ್ನು ರಕ್ಷಿಸಿದರು. ಆ ಜನರು ನನಗೆ ಏನೂ ಮಾಡದಂತೆ ತಡೆದರು” ಎಂದಿದ್ದಾರೆ.

“ಅಲ್ಲಿಂದ ನನ್ನನ್ನು ಅವರು ತಮ್ಮ ಪೋಸ್ಟ್‌ ಗೆ ಕರೆದುಕೊಂಡು ಹೋದರು. ಅಲ್ಲೇ ನನಗೆ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ನನಗೆ ಮತ್ತಷ್ಟು ಚಿಕಿತ್ಸೆ ನೀಡಲಾಯಿತು. ಪಾಕಿಸ್ತಾನದ ಸೇನೆ ಅತ್ಯಂತ ವೃತ್ತಿಪರವಾಗಿ ನಡೆದುಕೊಂಡಿತು. ಅವರಲ್ಲಿ ನಾನು ಶಾಂತಿಯನ್ನು ಕಂಡೆ. ಅವರ ಜತೆ ನಾನು ಸ್ವಲ್ಪ ಸಮಯ ಕಳೆದಿದ್ದೇನೆ. ಅವರಿಂದ ನಾನು ಪ್ರಭಾವಿತನಾಗಿದ್ದೇನೆ” ಎಂದು ಹೇಳಿದ್ದಾರೆ.

“ಭಾರತೀಯ ಮಾಧ್ಯಮಗಳು ಸತ್ಯವನ್ನು ಅತ್ತಿತ್ತ ಎಳೆದಾಡುತ್ತವೆ. ಸಣ್ಣ-ಸಣ್ಣ ಸಂಗತಿಗಳಿಗೂ ಬೆಂಕಿ ಹಚ್ಚಿ, ಉಪ್ಪುಖಾರ ಬೆರೆಸಿ ಜನರನ್ನು ಪ್ರಚೋದಿಸುತ್ತಾರೆ” ಎಂದು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos