ಐಎಂಎ ಕೇಸ್ ನಲ್ಲಿ ರಾಜಕಾರಣಿಗಳ ಕೈವಾಡ!

ಐಎಂಎ ಕೇಸ್ ನಲ್ಲಿ ರಾಜಕಾರಣಿಗಳ ಕೈವಾಡ!

ಬೆಂಗಳೂರು, ಜು.24 : ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಲವು ರಾಜಕಾರಣಿಗಳು ಹಾಗೂ ಉದ್ಯಮಿಗಳು ಪರೋಕ್ಷವಾಗಿ ಭಾಗಿಯಾಗಿದ್ದಾರೆ ಎಂಬ ವಿವರ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾನೆ. ಆರೋಪಿ ಐಎಂಎ ಕಂಪನಿ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ಭಾನುವಾರ ಹೊಸ ಬಾಂಬ್ ಸಿಡಿಸಿದ್ದಾನೆ. ದುಬೈನಿಂದ ವಿಡಿಯೋ ರಿಲೀಸ್ ಮಾಡಿರುವ ಮನ್ಸೂರ್, ರಾಜ್ಯಸಭಾ ಮಾಜಿ ಸದಸ್ಯ ಕೆ. ರೆಹಮಾನ್ ಖಾನ್, ಪಾಸ್​ಬನ್ ಪತ್ರಿಕೆ ಸಂಪಾದಕ ಶರೀಫ್, ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ, ರಿಯಲ್ ಎಸ್ಟೇಟ್ ಉದ್ಯಮಿ ಫೈರೋಜ್ ಅಬ್ದುಲ್ಲಾ, ಪ್ರೆಸ್ಟೀಜ್ ಗ್ರೂಪ್ ಇರ್ಫಾನ್, ಟಾಡಾ ಟೆರರಿಸ್ಟ್ ಮುಕ್ತಾರ್ ಅಹಮದ್ ಸೇರಿ ಐಎಂಎ ಕಂಪನಿಯನ್ನು ಮುಳುಗಿಸಿದ್ದಾರೆ. ಇವರೆಲ್ಲರಿಗೂ ಧನ್ಯವಾದಗಳು ಎಂದು ವಿಡಿಯೋದಲ್ಲಿ ಮನ್ಸೂರ್ ಖಾನ್ ಮಾರ್ವಿುಕವಾಗಿ ಹೇಳಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ‘ರಾಜಕಾರಣಿಗಳು, ಹೂಡಿಕೆದಾರರು ನನ್ನ ಕುತ್ತಿಗೆ ಮೇಲೆ ಕುಳಿತಿದ್ದರು. ನನ್ನ ಸಹಾಯಕ್ಕೆ ಯಾರೂ ಇಲ್ಲದ ಕಾರಣ ಕುಟುಂಬದ ಜತೆ ವಿದೇಶಕ್ಕೆ ಹೊರಡಬೇಕಾಯಿತು. ಜೂ.14ರಂದು ವಾಪಸ್ ಬರಲು ವಿಮಾನ ನಿಲ್ದಾಣಕ್ಕೆ ಬಂದಿದ್ದೆ. ಆದರೆ, ವಿಮಾನ ಟಿಕೆಟ್ ಮತ್ತು ಪಾಸ್​ಪೋರ್ಟ್ ತಡೆಹಿಡಿದಿದ್ದರಿಂದ ಭಾರತಕ್ಕೆ ಬರಲು ಸಾಧ್ಯವಾಗಿಲ್ಲ’ ಎಂದು ಆತ ಹೇಳಿದ್ದಾನೆ.

ಜೀವ ಬೆದರಿಕೆ: ‘ಭಾರತಕ್ಕೆ ಬರಲು ಜೀವ ಬೆದರಿಕೆಯಿದೆ. ಪೊಲೀಸ್ ಕಸ್ಟಡಿಯಲ್ಲಿ ನನ್ನನ್ನು ಮುಗಿಸಲು ಕೆಲವರು ಸಂಚು ರೂಪಿಸಿದ್ದರು. ಹೀಗಾಗಿ ಕುಟುಂಬ ಸಮೇತ ಬೆಂಗಳೂರು ಬಿಟ್ಟು ಬಂದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದರೆ ಎದುರಿಸಲು ಸಿದ್ಧನಿದ್ದೇನೆ. ನಾನು ಅಪರಾಧಿ ಎನ್ನುವುದಾದರೆ ನನ್ನ ಹಿಂದೆ ಅನೇಕರು ಇದ್ದಾರೆ. ಅವರಿಗೂ ಶಿಕ್ಷೆಯಾಗಲಿ’ ಎಂದು ಮನ್ಸೂರ್ ಒತ್ತಾಯಿಸಿದ್ದಾನೆ. ಐಎಂಎ ನೈಜ ಉದ್ಯಮವಾಗಿತ್ತು. ಕಿಡಿಗೇಡಿಗಳು ದುರುದ್ದೇಶದಿಂದ ಇದನ್ನು ಹಾಳು ಮಾಡುತ್ತಿದ್ದಾರೆ. ಐಎಂಎ ಮುಳುಗಿಸಲು ಯಾರು ಪ್ರಯತ್ನ ಪಟ್ಟಿದ್ದಾರೋ ಅವರ ಪಟ್ಟಿ ನನ್ನ ಬಳಿಯಿದೆ. ಎಲ್ಲರ ಹೆಸರು ಬಹಿರಂಗಪಡಿಸುವೆ. ಇದರಲ್ಲಿ ಭಾಗಿಯಾದವರು ಸಣ್ಣಪುಟ್ಟವರಲ್ಲ. ಈ ಕಂಪನಿ ದೊಡ್ಡ ದೊಡ್ಡವರ ಹೆಸರುಗಳಲ್ಲಿ ನಡೆಯುತ್ತಿತ್ತು. ಅವರ ಹೆಸರುಗಳನ್ನು ಬಹಿರಂಗಪಡಿಸಿದರೆ ನನ್ನ ಕುಟುಂಬಕ್ಕೆ ಆಪತ್ತು ಎದುರಾಗಲಿದೆ. ನಾನು ಭಾರತಕ್ಕೆ ಬಂದರೆ ನನ್ನನ್ನು ಮುಗಿಸುವ ಸಾಧ್ಯತೆಯಿದೆ. ಬಾಯಿಮುಚ್ಚಿಸಲು ಎಲ್ಲ ಪ್ಲಾನ್ ಮಾಡಲಾಗಿದೆ. ಜನರಿಗೆ ನ್ಯಾಯ ಕೊಡಿಸಲು ಬರುತ್ತಿದ್ದೇನೆ. ಪೊಲೀಸ್ ಕಸ್ಟಡಿಯಲ್ಲಿ ಇದ್ದರೂ ನನ್ನನ್ನು ಹೊಡೆಯುತ್ತಾರೆ. ನನಗೆ ಗೊತ್ತಿದೆ. ನಾನು ಸಾಯುತ್ತೇನೆ ಅಂತ. ಆದರೂ ಹೆದರುತ್ತಿಲ್ಲ. ನ್ಯಾಯಾಲಯಕ್ಕೆ ಹಾಜರುಪಡಿಸಿದರೂ ಅಲ್ಲೂ ನನಗೆ ರಕ್ಷಣೆ ಸಿಗಲ್ಲ. ಜಾಮೀನು ತೆಗೆದುಕೊಂಡು ಬಂದರೆ ರಸ್ತೆಯಲ್ಲಿ ಹೊಡೆಯುತ್ತಾರೆ. ಇದು ಜನರ ಹಣ. ನಾನು ಮರಳಿಸುತ್ತೇನೆ’ ಎಂದು ಮನ್ಸೂರ್ ಹೇಳಿದ್ದಾನೆ.

ಆಸ್ತಿ ಮಾರಿ, ಹಣ ಕೊಡ್ತೀನಿ

ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೂ ವಿಡಿಯೋ ಮೂಲಕ ಮನ್ಸೂರ್ ಮನವಿ ಮಾಡಿದ್ದಾನೆ. ‘ಹಗರಣದ ಹಿಂದಿನ ಸತ್ಯಾಸತ್ಯತೆ ಬಿಚ್ಚಿಡುತ್ತೇನೆ. ನ್ಯಾಯಾಲಯ ಯಾವ ಕ್ರಮ ಕೈಗೊಂಡರೂ ತಲೆ ಬಾಗುತ್ತೇನೆ. ಯಾರನ್ನು ಭೇಟಿ ಮಾಡಬೇಕು ಎಂದು ಹೇಳಿದರೆ ಆ ಅಧಿಕಾರಿ ಮುಂದೆ ಎಲ್ಲ ದಾಖಲೆಗಳ ಸಮೇತ ಹಾಜರಾಗಿ ಹೇಳಿಕೆ ದಾಖಲಿಸುತ್ತೇನೆ. ಕಳೆದ 13 ವರ್ಷಗಳಿಂದ 21 ಸಾವಿರ ಹೂಡಿಕೆದಾರರಿಗೆ ಹಣ ನೀಡಿದ್ದೇನೆ. ನನ್ನ ಬಳಿ 1235 ಕೋಟಿ ರೂ. ಆಸ್ತಿ ಇದೆ. ಮಾರಾಟ ಮಾಡಿ ಜನರಿಗೆ ಹಣ ಕೊಡುತ್ತೇನೆ’ ಎಂದು ಮನ್ಸೂರ್ ಹೇಳಿಕೊಂಡಿದ್ದಾನೆ. ‘ನಾನು ಯಾರಿಗೂ ಮೋಸ ಮಾಡಿಲ್ಲ. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದೇನೆ. 7 ಸಾವಿರ ಮನೆಗಳಿಗೆ ಪಡಿತರ ಕೊಡುತ್ತಿದ್ದೆ. ಇಷ್ಟು ಸಹಾಯ ಮಾಡಿದರೂ ನನಗೆ ಕರುಣೆ ತೋರಿಲ್ಲ. ಇದು ನನಗೆ ಬೇಸರ ತಂದಿದೆ. ಐಎಂಎ 13 ವರ್ಷದಿಂದ 12 ಸಾವಿರ ಕೋಟಿ ರೂ. ಲಾಭಗಳಿಸಿದೆ. 2 ಸಾವಿರ ಕೋಟಿ ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಕೊಟ್ಟಿದ್ದೇವೆ’ ಎಂದು ಕಂಪನಿ ಕುರಿತು ವಿವರ ನೀಡಿದ್ದಾನೆ.600 ಕೋಟಿ ರೂ. ಬ್ಯಾಂಕ್ ಸಾಲ ಪಡೆಯುವ ಉದ್ದೇಶಕ್ಕಾಗಿ ಐಎಂಎ ಕಂಪನಿಗೆ ಎನ್​ಒಸಿ (ನಿರಾಕ್ಷೇಪಣಾ ಪತ್ರ) ಬೇಕಾಗಿತ್ತು. ಅದನ್ನು ಕೊಡಲು ಒಬ್ಬ ಐಎಎಸ್ ಅಧಿಕಾರಿ 10 ಕೋಟಿ ರೂ. ಕೇಳಿದ್ದರು. ಹಣ ನೀಡಲು ನಾನು ತಯಾರಾಗಿದ್ದೆ. ಸ್ವಲ್ಪ ತಡವಾಯಿತು ಎಂದು ಖಾನ್ ತಿಳಿಸಿದ್ದಾನೆ.

ಐಎಂಎ ಕಂಪನಿ ಮತ್ತು ಮನ್ಸೂರ್ ಖಾನ್ ವಿರುದ್ಧ ಹೂಡಿಕೆದಾರರ ಹಿತ್ತರಕ್ಷಣಾ ಕಾಯ್ದೆ-2004 (ಕೆಐಎಡಿ) ಅಡಿ ವಿಶೇಷ ತನಿಖಾ ತಂಡ(ಎಸ್​ಐಟಿ) ಪ್ರಕರಣ ದಾಖಲಿಸಿದೆ. ಲಿಮಿಟೆಡ್ ಲಿಯಾಬಲಿಟಿ ಪಾಟರ್°ರ್​ಶಿಪ್(ಎಲ್​ಎಲ್​ಪಿ) ಹೆಸರಿನಲ್ಲಿ ತೋರಿಕೆಗಾಗಿ ನೋಂದಣಿ ಮಾಡಿಕೊಂಡ ಐಎಂಎ ಕಂಪನಿ, ಕಾನೂನು ಬಾಹಿರವಾಗಿ ಠೇವಣಿ ಸಂಗ್ರಹಿಸಿ ಕರಾರು ಪತ್ರ ಮಾಡಿಕೊಂಡಿದೆ. ಒಪ್ಪಂದದಂತೆ ಹೂಡಿಕೆದಾರರಿಗೆ ಲಾಭಾಂಶ ನೀಡದೆ ಠೇವಣಿ ಸಹ ಹಿಂದಿರುಗಿಸದೆ ಮೋಸ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಅದಕ್ಕಾಗಿ ಕೆಐಎಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಎಸ್​ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ದುಬೈಗೆ ತೆರಳಿರುವ ಆರೋಪಿ ಮಹಮ್ಮದ್ ಮನ್ಸೂರ್ ಖಾನ್​ನ ಪಾಸ್​ಪೋರ್ಟ್​ನ್ನು ಪ್ರಾದೇಶಿಕ ರಹದಾರಿ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಜತೆಗೆ ಈತನ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದಾರೆ.

500 ಕೋಟಿ ಮೌಲ್ಯದ ಚಿನ್ನ

ಭಾರತ ಬಿಟ್ಟು ಬರುವಾಗ ಜ್ಯುವೆಲರಿ ಅಂಗಡಿಯಲ್ಲಿ 150 ಕೆಜಿ ಚಿನ್ನ ಸೇರಿ 500 ಕೋಟಿ ರೂ. ಮೌಲ್ಯದ ಲೋಹವಿತ್ತು. ಆದರೆ, ಇದೀಗ ಸಹೋದರ ಮತ್ತು ನಿರ್ದೇಶಕರು ಲಾಕರ್ ಓಪನ್ ಮಾಡಿ ದೋಚಿರುವುದು ಗೊತ್ತಾಗಿದೆ. ಕೆಲವರು ಕಪು್ಪಹಣವನ್ನು ಹೂಡಿಕೆ ಮಾಡಿ ಬಿಲ್ ಪಡೆದು ವೈಟ್​ವುನಿ ಮಾಡಿಕೊಂಡಿದ್ದಾರೆ. ಅವರ ಪಟ್ಟಿಯೂ ಇದೆ ಎಂದು ಮನ್ಸೂರ್ ಹೇಳಿಕೊಂಡಿದ್ದಾನೆ. ಸಚಿವ ಜಮೀರ್ ಅಹ್ಮದ್ ಸಹಾಯ ಮಾಡುವುದಾಗಿ ನನ್ನ ಕರೆದಿದ್ದರು. ಅವರ ಹೇಳಿಕೆ ಮೇಲೆ ಮೊದಲು ನಂಬಿಕೆ ಇತ್ತು. ಆ ನಂತರ ಅವರ ಹೇಳಿಕೆ ಹಿಂದೆ ಬೇರೆಯೇ ಉದ್ದೇಶ ಇರುವುದು ಗೊತ್ತಾಯಿತು. ಜಮೀರ್ ಮೇಲೂ ನಂಬಿಕೆ ಇಲ್ಲ ಎಂದು ಮನ್ಸೂರ್ ವಿಡಿಯೋದಲ್ಲಿ ಹೇಳಿದ್ದಾನೆ.

 

 

ಫ್ರೆಶ್ ನ್ಯೂಸ್

Latest Posts

Featured Videos