ಐಎಂಎ ಬಂಧಿತ ಆರೋಪಿಗಳಿಗೆ ಜಾಮೀನು ನಿರಾಕರಣೆ

ಐಎಂಎ ಬಂಧಿತ ಆರೋಪಿಗಳಿಗೆ ಜಾಮೀನು ನಿರಾಕರಣೆ

ಬೆಂಗಳೂರು, ಅ. 12:  ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪೈಕಿ ಐವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್  ಒಬ್ಬ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣ ಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾ. ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ. ಪ್ರಕರಣದಲ್ಲಿ ಜಾಮೀನು ಕೋರಿ ಮೌಲ್ವಿ ಹನೀಫ್ ಅಪ್ಸರ್ ಅಜೀಜಿ, ಮೊಹಮ್ಮದ್ ಅಕ್ಬರ್ ಷರೀಫ್ ಅಲಿಯಾಸ್ ಉಮರ್ ಶರೀಫ್, ಎ. ನಿಜಾಮುದ್ದೀನ್,  ಎ. ಅಪ್ಸರ್ ಪಾಷಾ ಹಾಗೂ ಸನಾವುಲ್ಲಾ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಪೀಠ,  ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಸೈಯದ್ ಮುಜಾಹಿದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿದೆ.

ವಿಚಾರಣೆ ವೇಳೆ ಸಿಬಿಐ ಪರ ವಕೀಲ  ಪಿ. ಪ್ರಸನ್ನಕುಮಾರ್ ವಾದ ಮಂಡಿಸಿ,  ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಕಾರ್ಪೋರೇಟರ್ ಸೈಯದ್ ಮುಜಾಹಿದ್,  ಪ್ರಮುಖ ಆರೋಪಿ ಮನ್ಸೂರ್ ಅಹ್ಮದ್ ಖಾನ್ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಸೇರಿದಂತೆ ಹಲವು ರಾಜಕಾರಣಿಗಳ ನಡುವೆ ಅಕ್ರಮ ಹಣ ಸಂದಾಯಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು, ಕಿಕ್‌ಬ್ಯಾಕ್ ಪಡೆದ ಆರೋಪ ಆತನ ಮೇಲಿದೆ.

ತನಿಖೆ ಪ್ರಗತಿಯಲ್ಲಿದೆ ಈ ಹಂತದಲ್ಲಿ ಜಾಮೀನು ನೀಡಿದರೆ, ತನಿಖೆಗೆ ಹಿನ್ನಡೆಯಾಗುತ್ತದೆ. ಆದ್ದರಿಂದ ಜಾಮೀನು ಅರ್ಜಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದರು. ಅದೇ ರೀತಿ ಮತ್ತೋರ್ವ ಆರೋಪಿ ನಿಜಾಮುದ್ದೀನ್, ಐಎಂಎ ಕಂಪೆನಿಯ ನಿರ್ದೇಶಕನಾಗಿದ್ದು,  ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಗಳಾದ ಬಿ.ಎಂ. ವಿಜಯಶಂಕರ್, ಎಲ್.ಸಿ. ನಾಗರಾಜ್ ಹಾಗೂ ಮಂಜುನಾಥ್ ಸೇರಿ ಅನೇಕರಿಗೆ ಹಣ ಸಂದಾಯ ಮಾಡಿದ್ದಾನೆ.

ಉಳಿದಂತೆ, ಮೌಲ್ವಿ ಹನೀಫ್ ಅಪ್ಸರ್ ಅಜೀಜಿ, ಮೊಹಮ್ಮದ್ ಅಕರ್ ಶರೀಫ್ ಅಲಿಯಾಸ್ ಉಮರ್ ಶರೀಫ್, ಎ. ನಿಜಾಮುದ್ದೀನ್,  ಎ. ಅಪ್ಸರ್ ಪಾಷಾ ಹಾಗೂ ಸನಾವುಲ್ಲಾ ಅವರಿಂದ ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿವೆ. ಹಾಗಾಗಿ, ಈ ಹಂತದಲ್ಲಿ ಪ್ರಕರಣದ ಯಾವುದೇ ಆರೋಪಿಗೂ ಜಾಮೀನು ಮಂಜೂರು ಮಾಡಬಾರದೆಂದು ಹೈಕೋರ್ಟಿಗೆ ಮನವಿ ಮಾಡಿದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos