ನಿಡಗಲ್ಲು ಬೆಟ್ಟದ ಅಭಿವೃದ್ಧಿಗೆ ನಿರ್ಲಕ್ಷ

ನಿಡಗಲ್ಲು ಬೆಟ್ಟದ ಅಭಿವೃದ್ಧಿಗೆ ನಿರ್ಲಕ್ಷ

ಪಾವಗಡ, ಫೆ. 25: ಸಮುದ್ರಮಟ್ಟದಿಂದ 2777 ಅಡಿ ಎತ್ತರದ ಈ ದುರ್ಗ ಸಾಂಸ್ಕ್ರತಿಕವಾಗಿ ಮಹತ್ವದ ಸ್ಥಳವಾಗಿದೆ. ಇಲ್ಲಿಯ ಸ್ಮಾರಕಗಳ ರಕ್ಷಣೆ ಮಾಡಿ, ನೈಸರ್ಗಿಕ ಪ್ರವಾಸಿ ಕೇಂದ್ರವನ್ನಾಗಿಸಬೇಕು ಈ ಭೀಮಾಕೃತಿಯ ಏಕಶಿಲೆಯ ನಿಲುವಿನಿಂದಾಗಿ ನಿಡಗಲ್ಲು ಎಂಬ ಹೆಸರು ಬಂದಿದೆ. ಪ್ರಾಚೀನ ಕಾಲದಲ್ಲಿ ಇದೊಂದು ಜನಭರಿತ ಪ್ರದೇಶವಾಗಿತ್ತೆಂದು ಅಲ್ಲಿ ದೊರಕಿರುವ ಪ್ರಾಚೀನ ಅವಶೇಷಗಳು ತಿಳಿಸುತ್ತವೆ. ನಿಡಗಲ್ ಹಿಂದೆ ಒಂದು ಪಾಳೆಯ ಪಟ್ಟವಾಗಿತ್ತು. ನಿಡಗಲ್‌ಗೆ ರಕ್ಷಣೆಯಾಗಿ ಹಲವು ಸುತ್ತು ಹಾಗೂ ಸಾಲು ಸಾಲು ಕೋಟೆ ಗೋಡೆಗಳಿವೆ. ಇದಕ್ಕೆ ಮಾತನೂರು ಬಾಗಿಲು, ಸಿಂಗಾರದ ಬಾಗಿಲು, ಸಿಂಹಲಯ್ಯನ ಬಾಗಿಲು, ದಿಡ್ಡಿ ಬಾಗಿಲು ಎಂಬ ದ್ವಾರಗಳಿಗೆ.

ನೊಳಂಬರು, ಚೋಳರು ಹಾಗೂ ಚಾಲುಕ್ಯರ ಪ್ರತಿನಿಧಿಗಳು ಹಾಗೂ ಸಾಮಂತರ ವಶದಲ್ಲಿದ್ದ ದುರ್ಗವನ್ನು ಹೊಯ್ಸಳರ ದೊರೆ ಇಮ್ಮಡಿ ಬಲ್ಲಾಳ ತನ್ನ ಕೈವಶ ಮಾಡಿಕೊಂಡ. ವಿಜಯನಗರದ ಅರಸರ ಕಾಲದಲ್ಲಿ ತಿಪ್ಪರಾಜನ ವಂಶಸ್ಥರು ಪಾಳೆಯಗಾರರಾಗಿ ಆಳಿದರು. 1761 ರಲ್ಲಿ ಇದು ಹೈದರಾಲಿ ವಶವಾಯಿತು ಎನ್ನುತ್ತದೆ ಇತಿಹಾಸ. ಈ ದುರ್ಗವನ್ನು ಅಷ್ಟ ಗಣಪತಿ, ಅಷ್ಟ ದುರ್ಗೆಯರು ಹಾಗೂ ಅಷ್ಟ ಭೈರವರು ರಕ್ಷಿಸುತ್ತಿದ್ದರು ಎಂದು ಶಾಸನಗಳಲ್ಲಿ ಉಲ್ಲೇಖವಿದೆ. ನಿಡಗಲ್ಲು ದುರ್ಗ ೬ನೇ ಶತಮಾನದಿಂದ ಕರ್ನಾಟಕ ಚಾಲುಕ್ಯರು ನೊಳಂಬರು, ಚೋಳರು, ಹೊಯ್ಸಳರು, ವಿಜಯ ನಗರದ ಅರಸರು, ಮೈಸೂರು ದೊರೆಗಳು ಹರತಿಯ ವಂಶಸ್ಥರು, ನಿಡಗಲ್ಲಿನ ಚೋಳರು ಹಾಗೂ ಪಾಳ್ಯೆಗಾರರು ಈ ದುರ್ಗವನ್ನು ಆಳ್ವಿಕೆ ಮಾಡಿದ್ದಾರೆ. ನೂರಾರು ಗುಡಿ- ಗೋಪುರಗಳನ್ನು ನಿರ್ಮಿಸಿದ್ದಾರೆ. ಕೊಟೆ ಕೊತ್ತಲಗಳು ಕಲ್ಯಾಣಿಗಳು ಶಿಲಾಶಾಸನಗಳು ಇಲ್ಲಿನ ಇತಿಹಾಸ ಸಾರುವ ಪ್ರಮುಖ ಆಕರಗಳಾಗಿವೆ. ಆದರೆ ಕೋಟೆಗಳು ಬಿದ್ದು ಹಾಳಾಗುತ್ತಿವೆ. ವಿಗ್ರಹಗಳು ಕಳ್ಳರಿಂದಾಗಿ ನಾಪತ್ತೆಯಾಗಿವೆ  ಸ್ಥಳೀಯರು ಹೇಳುವ ಪ್ರಕಾರ ಅಮಾವಾಸ್ಯೆ ಹುಣ್ಣೆಮೆಯಂದು ನಿಧಿಗಳ್ಳರ ಹಾವಳಿ ಹೆಚ್ಚಾಗಿರುತ್ತದಂತೆ. ಈ ಐತಿಹಾಸಿಕ ನಿಡಗಲ್ ದುರ್ಗದಿಂದ ಚಿತ್ರದುರ್ಗಕ್ಕೆ ಸುರಂಗ ಮಾರ್ಗವಿತ್ತೆಂದು ಹೇಳಲಾಗುತ್ತದೆ. ಅದಕ್ಕೆ ಸಾಕ್ಷಿಯಾಗಿ ಅಲ್ಲೊಂದು ಸುರಂಗ ಮಾರ್ಗವೂ ಇದೆ.

ಇಂತಹ ಕೋಟೆ ನಿರ್ಮಿಸಿದ ಕೀರ್ತಿ ಅಲ್ಲಿ ಮೊದಲು ಆಳ್ವಿಕೆ ಮಾಡಿದ ನೊಳಂಬ ಪಲ್ಲವರಿಗೆ ಸಲ್ಲುತ್ತದೆ. ಅವರಿಂದ ನಿರ್ಮಿತವಾದ ಕೋಟೆ ಕಾಲಕಾಲಕ್ಕೆ ವಿಸ್ತಾರವಾಗಿ ವಿಜಯನಗರದ ಕಾಲದಲ್ಲಿ ಬಲವಾದ ಕೋಟೆಯಾಗಿ ಮಾರ್ಪಟ್ಟಿತು. ಇಂತಹ ಕೋಟೆಯೊಳಗೆ ಇಂದಿಗೂ ಅನೇಕ ಅವಶೇಷಗಳನ್ನು ನೋಡಬಹುದು.

ಕೆಲವು ಸ್ಮಾರಕಗಳು ನಿಧಿಗಳ್ಳರ ದುರಾಸೆಗೆ ಸಿಕ್ಕಿ ಬುಡಮೇಲೂ ಆಗಿವೆ. ಜೈನ ಧರ್ಮಕ್ಕೆ ನಿಡಗಲ್‌ನ ಅರಸರು ಹೆಚ್ಚಿನ ಪ್ರೋತ್ಸಾಹ ನೀಡಿದ್ದರು ಎಂದು ಇತಿಹಾಸ ಹೇಳುತ್ತದೆ.

ಶ್ರಾವಣ ಮಾಸದಲ್ಲಿ ಇಲ್ಲಿನ ದೇವಾಲಯಕ್ಕೆ ಭಕ್ತರ ದಂಡೇ ಆಗಮಿಸುತ್ತದೆ. ಸರಿಯಾದ ರಸ್ತೆ ಇಲ್ಲ, ರಸ್ತೆ ಹದಗೆಟ್ಟು ಹೋಗಿದೆ. ಇಂತಹ ಇತಿಹಾಸ ಪ್ರಸಿದ್ಧ ನಿಡಗಲ್ ದುರ್ಗದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಮನ ಹರಿಸದೇ ಇರುವುದು ಬೇಸರದ ಸಂಗತಿ. ಸರಕಾರ ಪ್ರತಿ ವರ್ಷ ನಿಡಗಲ್ಲು ಉತ್ಸವದ ಮೂಲಕ ಇಲ್ಲಿ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಮತ್ತು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲು ಶೀಘ್ರ ಯೋಜನೆ ರೂಪಿಸಬೇಕು ಎಂದು ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಿಡಗಲ್ಲು ದುರ್ಗದಲ್ಲಿ 30ಕ್ಕೂ ಹೆಚ್ಚು ಶಾಸನಗಳು. 64ಕ್ಕೂ ಹೆಚ್ಚು ದೇವಾಲಯಗಳು, ನೂರಕ್ಕೂ ಹೆಚ್ಚು ಅಪರೂಪದ ಔಷಧೀಸಸ್ಯಗಳಿವೆ. ಇದರ ಸಂರಕ್ಷಣೆ ಯಾಗುವಂತೆ ಗಮನ ಹರಿಸಬೇಕು.

ವರದಿ-ಬುಲೆಟ್ ವೀರಸೇನ ಯಾದವ್

 

ಫ್ರೆಶ್ ನ್ಯೂಸ್

Latest Posts

Featured Videos