ನಿನಗೂ ಉಳಿಸಿದ್ದೀನಿ, ಅಮ್ಮ…

ನಿನಗೂ ಉಳಿಸಿದ್ದೀನಿ, ಅಮ್ಮ…

ಮೀನಾಳ ಮನೆ ಒಂದನೇ ಮಹಡಿಯಲ್ಲಿತ್ತು. ಮನೆಯ ಎದುರಿನ ಬೀದಿಯ ಅಂಚಿಗೆ ಒಂದು ಬಹುಮಹಡಿಯ ಮನೆ ಕಟ್ಟಲಾಗುತ್ತಿತ್ತು. ಅಲ್ಲಲ್ಲಿ ಮರಳು ರಾಶಿ, ಸಿಮೆಂಟಿನ ಮೂಟೆಗಳು, ಕಾಂಕ್ರೀಟ್‌ ಇಟ್ಟಿಗೆಗಳು, ಮರಗಳು, ಕಬ್ಬಿಣದ ಸರಳುಗಳು ಚೆಲ್ಲಾಪಿಲಿಯಾಗಿ ಹರಡಿದ್ದವು. ಆ ಕಟ್ಟಡದ ಒಳಗೆ, ಮೂಲೆಯಲ್ಲೊಂದಿಷ್ಟು ಜಾಗವನ್ನು ಕೆಲಸಗಾರರ ವಾಸಕ್ಕೆಂದು ಬಿಟ್ಟುಕೊಡಲಾಗಿತ್ತು. ಅಲ್ಲಿ ಮರೆಗಾಗಿ ಒಂದೆರಡು ಹರುಕು ಚಾಪೆಗಳನ್ನು ಹಾಕಿಕೊಂಡು ಕೆಲಸಗಾರರು ವಾಸಿಸುತ್ತಿದ್ದರು. ನಾಲ್ಕೈದು ಮಕ್ಕಳು, ಮೈಮೇಲೆ ಅರ್ಧಂಬರ್ಧ ಬಟ್ಟೆ ಧರಿಸಿ ಓಡಾಡುತ್ತಿದ್ದರು. ಅವರ ಕೂದಲೆಲ್ಲ ಕೆಂಪುಗಟ್ಟಿದ್ದವು. ಎಂಟು- ಹತ್ತು ವರ್ಷದ ಹೆಣ್ಣುಮಗಳೊಬ್ಬಳು ಒಂದು ವರ್ಷದ ಮಗುವನ್ನು ಎದೆಯಲ್ಲಿಟ್ಟುಕೊಂಡು ತಟ್ಟುತ್ತಿದ್ದಳು. ಇನ್ನೊಬ್ಬಳು ಹೆಂಗಸು ಉರಿ ಹಾಕಿ, ಅಡುಗೆ ಮಾಡುತ್ತಿದ್ದಳು.

“ಅಮ್ಮ, ಅಲ್ಲಿ ನೋಡಮ್ಮ… ಆ ಹೊಸ ಬಿಲ್ಡಿಂಗ್‌ನಲ್ಲಿ ಪಾಪ ಆ ಮಕ್ಕಳು… ಮೈಮೇಲೆ ಒಳ್ಳೆ ಬಟ್ಟೆ ಕೂಡ ಇಲ್ಲ. ಚಳಿಗಾಲ ಬರ್ತಾ ಇದೆ. ಕಂಬಳಿ, ಶಾಲು ಏನೂ ಇಲ್ಲದೆ ಅವರೇನು ಮಾಡ್ತಾರೆ?’ ಆ ರಸ್ತೆಯಾಚೆಯ ಮನೆಯತ್ತ ಕೈ ತೋರುತ್ತಾ ಮೀನಾ ಕೇಳಿದಳು. ಅಮ್ಮ ಅಸಹನೆಯಿಂದ, ನಾವೇನು ಮಾಡೋಕಾಗುತ್ತೆ ಎಂಬ ಧಾಟಿಯಲ್ಲಿ ಮೀನಾಳನ್ನು ನೋಡಿದರು. ಅಮ್ಮನ ಇಂಗಿತ ಮೀನಾಳಿಗೆೆ ಅರ್ಥವಾಯಿತು. ಅಷ್ಟರಲ್ಲಿ ಅಮ್ಮನ ಫೋನು ರಿಂಗಣಿಸಿತು. ಅಮ್ಮ ಉತ್ತರಿಸಿದರು. “ಹಲೋ ಮೇಡಂ. ನಿಮ್ಮ ಕಾರ್ಯಕ್ರಮದ ಬಗ್ಗೆ ತಿಳಿದು ತುಂಬ ಸಂತೋಷವಾಯಿತು. ನನ್ನಿಂದ ಏನಾಗಬೇಕು? ಎರಡು ಕಂಬಳಿ, ಎರಡು ಹಳೆ ಶಾಲು, ಒಂದೆರಡು ಬೆಡ್‌ಶೀಟುಗಳು… ಆಮೇಲೆ? ಮಕ್ಕಳ ಉಡುಪೆ? ಆಯ್ತು, ಆಯ್ತು… ನಾನೆಲ್ಲಾ ತರುತ್ತೇನೆ… ಆದರೆ ಟಿ.ವಿ.ಯವರು, ಪತ್ರಿಕೆಯವರು ಬರುತ್ತಿದ್ದಾರೆ ತಾನೇ’ ಎಂದು ಕೇಳಿ ಅಮ್ಮ ಫೋನಿಟ್ಟರು.

ಸಂಭಾಷಣೆ ಕೇಳಿಸಿಕೊಂಡ ಮೀನಾ “ಯಾರಮ್ಮ ಅದು? ಏನು ಕಾರ್ಯಕ್ರಮ?’ ಎಂದು ಕೇಳಿದಳು. ಅಮ್ಮ “ನನ್ನ ಸ್ನೇಹಿತೆಯದ್ದು ಪುಟ್ಟಾ. ನಾಳೆ ಬೆಳಿಗ್ಗೆ ನಮ್ಮ ಲೇಡೀಸ್‌ ಕ್ಲಬ್‌ನಲ್ಲಿ ಬಡಮಕ್ಕಳಿಗೆ ಬಟ್ಟೆ ಹಂಚುವ ಕಾರ್ಯಕ್ರಮ ಇದೆ’ ಎಂದರು. ಅದೇ ವೇಳೆಗೆ ಅಪ್ಪ ಮತ್ತು ಮೀನಾಳ ಅಣ್ಣ ರಾಜೀವ ಅಲ್ಲಿಗೆ ಬಂದರು. ಅಮ್ಮ ಅವರಿಗೆ ಕಪಾಟಿನಿಂದ ಬಟ್ಟೆಗಳನ್ನು, ಶಾಲುಗಳನ್ನು ಪ್ಯಾಕ್‌ ಮಾಡಲು ಹೇಳಿದರು.

ಮಾರನೇ ದಿನ ಬೆಳಗ್ಗೆ ಅಮ್ಮ ಏಳು ಗಂಟೆಗೆ ತಯಾರಾದರು. ಮೀನಾ ಕೂಡ ಬೇಗ ಎದ್ದಿದ್ದಳು. ಅಮ್ಮ ಸಮಾರಂಭಕ್ಕೆ ತೆಗೆದುಕೊಂಡು ಹೋಗುವ ಬಟ್ಟೆಯ ಬ್ಯಾಗನ್ನು ಬಾಗಿಲಿನ ಪಕ್ಕದಲ್ಲೆ ಇಟ್ಟಿದ್ದರು. ಅಮ್ಮ “ರಾಜೀವ, ಇವತ್ತಿನ ಕಾರ್ಯಕ್ರಮಕ್ಕೆ ತೆಗೆದುಕೊಂಡು ಹೋಗಲು ಇಟ್ಟಿರುವ ಬಟ್ಟೆಯ ಬ್ಯಾಗನ್ನು ಕಾರಿನಲ್ಲಿಡು.’ ಎಂದರು. ರಾಜೀವ “ಬಟ್ಟೆ ಬ್ಯಾಗು ಅಲ್ಲಿಲ್ಲ’ ಎಂದ. ಅಮ್ಮನಿಗೆ ಗಾಬರಿಯಾಯಿತು. ಎಷ್ಟು ಹುಡುಕಿದರೂ ಬ್ಯಾಗು ಸಿಗಲೇ ಇಲ್ಲ. ಅಪ್ಪ “ಮೀನಾಳ ಕೈಯಲ್ಲಿ ಬ್ಯಾಗ್‌ ನೋಡಿದ ಹಾಗಾಯಿತು’ ಎಂದರು. ಅಮ್ಮ ದುರದುರನೆ ಕೆಳಗಿಳಿದು ಬಂದರು. ಅವರಿಗೆ ಮೀನಾಳ ಮೇಲೆ ಸಿಟ್ಟು ಬಂದಿತ್ತು. ಮನೆ ಮುಂದಿದ್ದ ಕಟ್ಟಡದ ಕಡೆಗೆ ನಡೆದರು.

ಅಮ್ಮ ನಿರೀಕ್ಷಿಸಿದ್ದಂತೆ ಮೀನಾ ಅಲ್ಲೇ ಯಾರೊಡನೆಯೋ ಮಾತಾಡುತ್ತಿದ್ದಳು. “ಈ ಕಂಬಳಿ ನಿಮಗೆ. ನನ್ನ ಮತ್ತು ಅಣ್ಣನ ಡ್ರೆಸ್ಸುಗಳು ನಿಮ್ಮ ಮಕ್ಕಳಿಗೆ. ಈ ಶಾಲು ನಿಮ್ಮ ಪಾಪೂಗೆ. ಹಾಂ! ಇದು ನಮ್ಮಮ್ಮನ ಸೀರೆ, ಇದು ನಿಮಗೆ. ತಗೊಳ್ಳಿ ಪ್ಲೀಸ್‌…’ ಎನ್ನುತ್ತಿದ್ದಳು ಮೀನಾ. ಅಮ್ಮನನ್ನು ನೋಡುತ್ತಲೇ ಮೀನಾಗೆ ಭಯವಾಯಿತು. ಅವಳ ಕೈಯಲ್ಲಿ ಇನ್ನೂ ಎರಡೂ ಬಟ್ಟೆಗಳು ಉಳಿದಿದ್ದವು. ಮೀನಾ ಗಾಬರಿಯಿಂದ “ನಿನಗೂ ಉಳಿಸಿದ್ದೇನೆ ಅಮ್ಮ. ಈ ಬಟ್ಟೆಗಳು ನಿನಗೆ’ ಎನ್ನುತ್ತ ತನ್ನ ಕೈಯಲ್ಲಿದ್ದ ಎರಡು ಬಟ್ಟೆಗಳನ್ನು ಕೊಡಲು ಹೋದಳು. ಪ್ರಚಾರಕ್ಕೆ ಆಸೆ ಪಟ್ಟಿದ್ದ ಅಮ್ಮನಿಗೆ ತಮ್ಮ ನಡವಳಿಕೆ ಬಗ್ಗೆ ತಮಗೇ ನಾಚಿಕೆಯಾಯಿತು. ಅವರು “ಮೀನಾ ಪುಟ್ಟ, ಉಳಿದ ಬಟ್ಟೆಗಳನ್ನು ಅವರಿಗೇ ಕೊಟ್ಟು ಬಾ. ಈಗ ನಾವು ಒಂದು ಜಾಲಿ ರೈಡು ಹೋಗೋಣ. ಏನಂತೀಯ?’ ಎಂದು ಕೇಳಿದರು. ಮೀನಾ ಖುಷಿಯಿಂದ “ಓ ಎಸ್‌’ ಎಂದು ಕೂಗಿದಳು.

ಫ್ರೆಶ್ ನ್ಯೂಸ್

Latest Posts

Featured Videos