ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ: ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ

ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ: ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ

ಬೆಂಗಳೂರು: ಪ್ರಾಮಾಣಿಕ ಅಧಿಕಾರಿಗಳಿಗೆ ಸಮಾಜದಲ್ಲಿ ರಕ್ಷಣೆ ಇಲ್ಲದಂತಾಗಿದೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರವಿವಾರ ರಾಜ್ಯ ಸರ್ಕಾರಿ ನೌಕರರ (ಮಾಜಿ ಸೈನಿಕರ) ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಲೋಕಾಯುಕ್ತನಾಗಿದ್ದಾಗ ಪ್ರಾಮಾಣಿಕ ಅಧಿಕಾರಿಗೆ ಆಡಳಿತದಲ್ಲಿ 32 ಬಾರಿ ವರ್ಗಾವಣೆಯಾಗಿದ್ದನ್ನು ನೋಡಿದ್ದೇನೆ.  ಸಮಾಜದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ.ಹಣಬಲ, ಅಧಿಕಾರಕ್ಕೆ ಹೆಚ್ಚಿನ ಬೆಲೆ ಸಿಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರಾಮಾಣಿಕರಿಗೆ ರಕ್ಷಣೆ ಸಿಗದಿದ್ದರೆ ಸಮಾಜ ಸಂಕಷ್ಟಕ್ಕೀಡಾ ಗಬೇಕಾಗುತ್ತದೆ. ಸಮಾಜದ ಸಮಸ್ಯೆಗಳು ನನಗೆ ಅರ್ಥವಾಗಿದ್ದು,  ಲೋಕಾಯುಕ್ತನಾದ ನಂತರ ಆವರೆಗೂ ನ್ಯಾಯಾಧೀಶನಾಗಿ ನನ್ನ ಪಾಲಿನ ಕೆಲಸಗಳನ್ನು ನಾನು ಮಾಡಿಕೊಂಡಿದ್ದೆ ಎಂದರು.

ಲೋಕಾಯುಕ್ತನಾದ ನಂತರ ಜನಸಾಮಾನ್ಯರ ಕಷ್ಟಗಳು ಅರಿವಾಗತೊಡಗಿದವು. ಎಲ್ಲರೂ ಹಣ, ಅಧಿಕಾರಕ್ಕೆ ಆಸೆ ಪಡುತ್ತಾರೆ. ಜನರಸೇವೆಗೆ ಯಾರಿಗೂ ಹೆಚ್ಚಿನ ಕಾಳಜಿ ಇಲ್ಲ. ಇದು ಯಾವುದೋ ಒಂದು ಸರ್ಕಾರದ ಅವಧಿಯಲ್ಲಿ ಆದ ಸಮಸ್ಯೆ ಅಲ್ಲ. ಎಲ್ಲಾ ಸರ್ಕಾರದಲ್ಲೂ ಎಲ್ಲಾ ಕಾಲದಲ್ಲೂ ಈ ರೀತಿಯ ತೊಂದರೆಗಳಾಗಿವೆ ಎಂದು ಹೇಳಿದರು.

ಲೋಕಾಯುಕ್ತನಾಗಿ ಕೆಲಸ ಮಾಡುವ ವೇಳೆ ಸಮಾಜದ ಬದಲಾವಣೆ ಮಾಡಲು ನಾನು ಸಾಕಷ್ಟು ಪ್ರಯತ್ನಪಟ್ಟೆ. ಆದರೆ ಪೂರ್ತಿಯಾಗಿ ಸಾಧ್ಯವಾಗಲಿಲ್ಲ. ಸೈನಿಕರು ದೇಶದ ರಕ್ಷಣೆಗಾಗಿ ಹೋರಾಡುತ್ತಾರೆ. ಅವರನ್ನು ಪ್ರೀತಿ, ಆದರಗಳಿಂದ ನೋಡಿಕೊಳ್ಳಬೇಕಾಗಿರುವುದು ಸಮಾಜ ಹಾಗೂ ಸರ್ಕಾರದ ಕರ್ತವ್ಯ ಎಂದು ಹೇಳಿದರು.

ನಿವೃತ್ತ ಲೆಫ್ಟಿನೆಂಟ್ ಜನರಲ್ ಪಿ.ಆರ್.ಸಂಪತ್‍ಕುಮಾರ್, ಕರ್ನಲ್ ಜಿ.ಜೆ.ಸಿಂಗ್, ಸರ್ಕಾರ ನೌಕರರ (ಮಾಜಿ ಸೈನಿಕರ) ಸಂಘದ ಅಧ್ಯಕ್ಷ ಕೆ.ಎ.ಮಥಾಯಿಸ್ ಮತ್ತಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos