ನೇರ ನಾಕೌಟ್‌ ಟಿಕೆಟ್‌ ನಿರೀಕ್ಷೆಯಲ್ಲಿ ಭಾರತ

  • In Sports
  • December 8, 2018
  • 200 Views
ನೇರ ನಾಕೌಟ್‌ ಟಿಕೆಟ್‌ ನಿರೀಕ್ಷೆಯಲ್ಲಿ ಭಾರತ

ಭುವನೇಶ್ವರ: ವಿಶ್ವಕಪ್‌ ಪಂದ್ಯಾವಳಿಯಲ್ಲಿ “ಸಿ’ ಗುಂಪಿನ ಅಗ್ರಸ್ಥಾನಿಯಾಗಿ ನೇರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಯೋಜನೆಯಲ್ಲಿರುವ ಆತಿಥೇಯ ಭಾರತ ತಂಡ ಶನಿವಾರದ ಅಂತಿಮ ಲೀಗ್‌ ಪಂದ್ಯದಲ್ಲಿ ಕೆನಡಾವನ್ನು ಎದುರಿಸಲಿದೆ.

ವಿಶ್ವದ 5ನೇ ರ್‍ಯಾಂಕಿಂಗ್‌ ತಂಡವಾಗಿರುವ ಭಾರತ 2 ಪಂದ್ಯಗಳಿಂದ 4 ಅಂಕ ಸಂಪಾದಿಸಿ ಗುಂಪಿನ ಮೊದಲ ಸ್ಥಾನದಲ್ಲಿದೆ. ಒಲಿಂಪಿಕ್‌ ಬೆಳ್ಳಿ ಪದಕ ವಿಜೇತ ಬೆಲ್ಜಿಯಂ ಕೂಡ 4 ಅಂಕ ಹೊಂದಿದ್ದು, ಗೋಲು ಅಂತರದ ಲೆಕ್ಕಾಚಾರದಲ್ಲಿ ದ್ವಿತೀಯ ಸ್ಥಾನಿಯಾಗಿದೆ. ಭಾರತ +5 ಗೋಲು ಅಂತರ ಹೊಂದಿದ್ದರೆ, ಬೆಲ್ಜಿಯಂ +1 ಅಂತರದಲ್ಲಿದೆ. ಕೆನಡಾ ಮತ್ತು ದಕ್ಷಿಣ ಆಫ್ರಿಕಾ ತಲಾ ಒಂದು ಅಂಕ ಗಳಿಸಿದ್ದು, 3ನೇ ಹಾಗೂ 4ನೇ ಸ್ಥಾನದಲ್ಲಿವೆ. ದಿನದ ಮೊದಲ ಪಂದ್ಯದಲ್ಲಿ ಬೆಲ್ಜಿಯಂ-ದಕ್ಷಿಣ ಆಫ್ರಿಕಾ ಮುಖಾಮುಖೀಯಾಗಲಿವೆ. ಅಕಸ್ಮಾತ್‌ ಆಫ್ರಿಕಾ ಹಾಗೂ ಕೆನಡಾ ಜಯಭೇರಿ ಮೊಳಗಿಸಿದರೆ ಆಗ “ಸಿ’ ವಿಭಾಗದ ಲೆಕ್ಕಾಚಾರವೆಲ್ಲ ತಲೆಕೆಳಗಾಗಲಿದೆ. ಗುರುವಾರ ವಿಶ್ವದ 20ನೇ ರ್‍ಯಾಂಕಿಂಗ್‌ ತಂಡವಾದ ಫ್ರಾನ್ಸ್‌ ಒಲಿಂಪಿಕ್‌ ಚಾಂಪಿಯನ್‌ ಆರ್ಜೆಂಟೀನಾಕ್ಕೆ ಆಘಾತವಿಕ್ಕಿ ಹಾಕಿಯಲ್ಲಿ ಏನೂ ಸಂಭವಿಸಬಹುದೆಂಬಕ್ಕೆ ಉತ್ತಮ ನಿದರ್ಶನ ಒದಗಿಸಿದೆ.

ವಿಶ್ವಕಪ್‌ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 5-0 ಗೋಲುಗಳಿಂದ ಪರಾಭವಗೊಳಿಸಿದ ಮನ್‌ಪ್ರೀತ್‌ ಪಡೆ, ಬೆಲ್ಜಿಯಂ ಎದುರು 2-2 ಡ್ರಾಗೆ ಸಮಾಧಾನಪಟ್ಟಿತ್ತು. ಇನ್ನೊಂದೆಡೆ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಬೆಲ್ಜಿಯಂಗೆ 1-2ರ ಸಣ್ಣ ಅಂತರದಿಂದ ಸೋತ ಕೆನಡಾ, ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಡ್ರಾ ಸಾಧಿಸಿತ್ತು.

ಕೆನಡಾ ಕಠಿನ ಎದುರಾಳಿ
2013ರಿಂದೀಚೆ ಕೆನಡಾ ವಿರುದ್ಧ 5 ಪಂದ್ಯಗಳನ್ನಾಡಿರುವ ಭಾರತ ಮೂರರಲ್ಲಿ ಗೆದ್ದು, ಒಂದನ್ನು ಸೋತಿದೆ. ಒಂದು ಪಂದ್ಯ ಡ್ರಾ ಆಗಿದೆ. ಸೋಲು ಕಳೆದ ವರ್ಷದ ಲಂಡನ್‌ ಹಾಕಿ ವರ್ಲ್ಡ್ ಲೀಗ್‌ನಲ್ಲಿ ಎದುರಾದರೆ (2-3), 2016ರ ರಿಯೋ ಒಲಿಂಪಿಕ್ಸ್‌ನಲ್ಲಿ 2-2 ಡ್ರಾ ಫ‌ಲಿತಾಂಶ ದಾಖಲಾಗಿತ್ತು. ಹೀಗಾಗಿ ಕೆನಡಾವನ್ನು ಲಘುವಾಗಿ ಪರಿಗಣಿಸಿದರೆ ಅಪಾಯವನ್ನು ಆಹ್ವಾನಿಸಬೇಕಾದೀತು.

“ಹಿಂದಿನ ವೈಫ‌ಲ್ಯಗಳನ್ನೆಲ್ಲ ಅನುಭವ ಹಾಗೂ ಪಾಠವಾಗಿ ತೆಗೆದುಕೊಂಡು ಹೋರಾಡಿದರೆ ಸಕಾರಾತ್ಮಕ ಫ‌ಲಿತಾಂಶ ಸಾಧ್ಯವಿದೆ’ ಎನ್ನುವುದು ಕೋಚ್‌ ಹರೇಂದ್ರ ಸಿಂಗ್‌ ಅಭಿಪ್ರಾಯ.

ಫ್ರೆಶ್ ನ್ಯೂಸ್

Latest Posts

Featured Videos