ಹೇಮಾವತಿ, ಎತ್ತಿನಹೊಳೆ ಮತ್ತು ಯಗಚಿ ಯೋಜನೆ: ಪರಿಹಾರ ವಿತರಣೆ ಚುರುಕುಗೊಳಿಸಲು ಸಿಎಂ ಸೂಚನೆ

ಹೇಮಾವತಿ, ಎತ್ತಿನಹೊಳೆ ಮತ್ತು ಯಗಚಿ ಯೋಜನೆ: ಪರಿಹಾರ ವಿತರಣೆ ಚುರುಕುಗೊಳಿಸಲು ಸಿಎಂ ಸೂಚನೆ

ಬೆಂಗಳೂರು: ಹೇಮಾವತಿ ಯೋಜನೆಗಳು ಹಾಗೂ ಎತ್ತಿನಹೊಳೆ ಯೋಜನೆಯಡಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ವಿತರಣೆಯನ್ನು ಚುರುಕುಗೊಳಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಹೇಮಾವತಿ ಜಲಾಶಯ ಮತ್ತು ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ಹಾಗೂ ಯಗಚಿ ಯೋಜನೆಯ ಭೂಪರಿಹಾರಕ್ಕೆ ಸಂಬಂಧಿಸಿದಂತ ಸಭೆ ನಡೆಸಿದರು.

ಹಾಸನ ಜಿಲ್ಲೆಯ ಹೇಮಾವತಿ ಯೋಜನಾ ವ್ಯಾಪ್ತಿಯಡಿ ( ಹೇಮಾವತಿ ಮತ್ತು ಯಗಚಿ ಜಲಾಶಯ) ಸುಮಾರು 2228 ಭೂ ಪಾವತಿ ಪ್ರಕರಣಗಳು ಬಾಕಿ ಇವೆ. ಈ ಪ್ರಕರಣಗಳಿಗೆ ಸುಮಾರು 350.00 ಕೋಟಿ ಮೊತ್ತದ ಭೂ ಪರಿಹಾರ ಪಾವತಿ ಬಾಕಿ ಇವೆ.  ಈ ಪೈಕಿ 975 ಎಲ್.ಎ.ಸಿ ಪ್ರಕರಣಗಳಿದ್ದು, 94.28 ಕೋಟಿ ಮೊತ್ತವನ್ನು ನ್ಯಾಯಾಲಯಕ್ಕೆ ಠೇವಣಿಗೊಳಿಸುವುದು ಬಾಕಿ ಇರುವುದರಿಂದ ತ್ವರಿತವಾಗಿ ಹಣ ಬಿಡುಗಡೆಗೆ ಕ್ರಮಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿಗಳು ತಿಳಿಸಿದರು.

ಪರಿಹಾರ ಮೊತ್ತದ  ವಿತರಣೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸರ್ವೇಯರ್‍ಗಳ ವಿಶೇಷ ತಂಡವನ್ನು ರಚಿಸಿ ಸಮೀಕ್ಷೆಯನ್ನು ಕೈಗೊಳ್ಳುವಂತೆ ಅವರು  ಸೂಚಿಸಿದರು.

ಭೂ ಸ್ವಾಧೀನದಲ್ಲಿ ನ್ಯಾಯೋಚಿತ ಪರಿಹಾರ ಮತ್ತು ಪಾರದರ್ಶಕತೆ, ಪುನರ್ವಸತಿ ಕಾಯ್ದೆ 2013 ರಡಿ  ಭೂಸ್ವಾಧೀನಕ್ಕೆ ಪ್ರಕ್ರಿಯೆ ಕುರಿತು ಸಾಮಾಜಿಕ ಪರಿಣಾಮ ಮೌಲ್ಯಮಾಪನವನ್ನು  ಕೈಗೊಳ್ಳುವ ಅಗತ್ಯವಿದೆ. ಈ ಪ್ರಕ್ರಿಯೆಗೆ  ಸುಮಾರು 2 ವರ್ಷಗಳ ಕಾಲ ಹಿಡಿಯುವುದರಿಂದ ನೀರಾವರಿ, ಕುಡಿಯುವ ನೀರು, ವಸತಿ ಮತ್ತಿತರ ಸೌಲಭ್ಯಗಳನ್ನು ಪೂರೈಸುವ ಕೆಲಸವನ್ನು ಚುರುಕುಗೊಳಿಸುವುದು ಕಷ್ಟಸಾಧ್ಯ . ಹಾಗಾಗಿ ಸಾಮಾಜಿಕ ಪರಿಣಾಮ ಮೌಲ್ಯಮಾಪನ ಪ್ರಕ್ರಿಯೆಯನ್ನು ಈ ಯೋಜನೆಗಳಲ್ಲಿ  ಕೈಬಿಡಲು  ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಪರಿಶೀಲಿಸಲು ಮುಖ್ಯಮಂತ್ರಿಗಳು ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರಿಗೆ ತಿಳಿಸಿದರು.

ಎತ್ತಿನಹೊಳೆ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ವಿಶೇಷ ಭೂಸ್ವಾಧಿನಾಧಿಕಾರಿಗಳ ಹುದ್ದೆ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಕೋಲಾರ ಶಾಸಕ ಶ್ರೀನಿವಾಸಗೌಡ,  ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ,  ಸಂಸದೀಯ ಕಾರ್ಯದರ್ಶಿ ವೆಂಕಟರಾಮ್, ಕಾನೂನು ಕಾರ್ಯದರ್ಶಿ ಶ್ರೀನಿವಾಸ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಮತ್ತಿತತರರು ಸಭೆಯಲ್ಲಿ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos