ಹ್ಯಾಟ್ರಿಕ್‌ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್

ಹ್ಯಾಟ್ರಿಕ್‌ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್

ಬೆಂಗಳೂರು: ಐಪಿಎಲ್ 2024ರಲ್ಲಿ ನೆನ್ನೆ ನಡೆದ 14ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ವಾಂಖೇಡೆ ಮೈದಾನದಲ್ಲಿ ಮುಖಾಮುಖಿಯಾಗಿತ್ತು.  ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು.

ಅದರಂತೆ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ ಗೆ ಆರಂಭಿಕ ಆಘಾತ ನೀಡುವಲ್ಲಿ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಆಯಿತು. ಮುಂಬೈ ಇಂಡಿಯನ್ಸ್ ಕಳಪೆ ಆಟ ಮೂರನೇ ಪಂದ್ಯದಲ್ಲೂ ಮುಂದುವರೆದಿದೆ.

ಮುಂಬೈ ಇಂಡಿಯನ್ಸ್ ತಂಡಕ್ಕೆ ಮೊದಲ ಓವರ್‌ನಲ್ಲೇ ಟ್ರೆಂಟ್ ಬೌಲ್ಟ್ ಶಾಕ್ ನೀಡಿದರು. ಪರಿಣಾಮ ರೋಹಿತ್ ಶರ್ಮಾ ಹಾಗೂ ನಮನ್ ಧೀರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇನ್ನು ಇದರ ಬೆನ್ನಲ್ಲೆ ಡೆವಾಲ್ಡ್   ಬ್ರೆವೀಸ್‌ ಕೂಡಾ ಟ್ರೆಂಟ್‌ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪೆರೇಡ್ ನಡೆಸಿದರು.

ಇದಾದ ಬಳಿಕ ತಿಲಕ್ ವರ್ಮಾ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ 5ನೇ ವಿಕೆಟ್‌ಗೆ 56 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯುಜುವೇಂದ್ರ ಚಹಲ್ ಯಶಸ್ವಿಯಾದರು. ನಾಯಕ ಹಾರ್ದಿಕ್ ಪಾಂಡ್ಯ 34 ರನ್ ಹಾಗೂ ತಿಲಕ್ ವರ್ಮಾ 34 ರನ್ ಬಾರಿಸಿ ಚಹಲ್‌ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 9 ವಿಕೆಟ್ ಕಳೆದುಕೊಂಡು 125 ರನ್ ಗಳಿಸಲಷ್ಟೇ ಶಕ್ತವಾಯಿತು.

ಗೆಲ್ಲಲು ಕೇವಲ 126 ರನ್ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಓವರ್‌ನಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಜೈಸ್ವಾಲ್ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಸಂಜು ಸ್ಯಾಮ್ಸನ್ 12 ರನ್ ಬಾರಿಸಿ ಆಕಾಶ್ ಮಧ್ವಾಲ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಜೋಸ್ ಬಟ್ಲರ್ 13 ರನ್ ಗಳಿಸಿ ಆಕಾಶ್‌ಗೆ ಎರಡನೇ ಬಲಿಯಾದರು.

ಇದಾದ ಬಳಿಕ 4ನೇ ವಿಕೆಟ್‌ಗೆ ರಿಯಾನ್ ಪರಾಗ್ ಹಾಗೂ ರವಿಚಂದ್ರನ್ ಅಶ್ವಿನ್ 40 ರನ್‌ಗಳ ಜತೆಯಾಟವಾಡಿದರು. ಅಶ್ವಿನ್ 16 ರನ್ ಗಳಿಸಿ ಆಕಾಶ್‌ ಮಧ್ವಾಲ್‌ಗೆ ಮೂರನೇ ಬಲಿಯಾದರು. ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರಿಯಾನ್ ಪರಾಗ್ ಕೇವಲ 39 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 54 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos