ರೈತನಿಗೆ ಮತ್ತೆ ಸಂಕಷ್ಟ

ರೈತನಿಗೆ ಮತ್ತೆ ಸಂಕಷ್ಟ

 ಧಾರವಾಡ, ಫೆ. 05: ತಾಲೂಕಿನ ಕವಲಗೇರಿ, ಚಂದನಮಟ್ಟಿ, ಕನಕೂರ, ತಲವಾಯಿ, ಹೆಬ್ಬಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ನಾಲ್ಕೈದು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆಗಳು ಬಾರದೆ ಆರ್ಥಿಕ ಸಂಕಷ್ಟದಲ್ಲಿದ್ದ ರೈತರಿಗೆ ಈ ಬಾರಿ ಮುಂಗಾರಿನಲ್ಲಿ ಅತಿಯಾದ ಮಳೆಯ ಪ್ರವಾಹದಿಂದ ತತ್ತರಿಸಿ ಹೋಗಿದ್ದರು. ಭೂಮಿಯಲ್ಲಿ ತೇವಾಂಶ ಹೆಚ್ಚಿನ ಪ್ರಮಾಣದಲ್ಲಿ ಇದ್ದುದರಿಂದ ಹಿಂಗಾರಿನಲ್ಲಾದರೂ ಬಂಪರ್ ಬೆಳೆ ತೆಗೆಯಬಹುದು ಎಂದುಕೊಂಡಿದ್ದರು. ಆದರೆ, ಈಗ ಕಡಲೆ, ಗೋಧಿ, ಜೋಳ, ಸೇರಿದಂತೆ ವಿವಿಧ ಬೆಳೆಗಳಿಗೆ ತಗುಲಿದ ತುಕ್ಕು ರೋಗ, ಬೆಂಕಿ ರೋಗ, ಕಾಂಡ ಕೋರಿಕೆ, ಕೀಟ ಬಾಧೆಯಿಂದ ರೈತರನ್ನು ಕಂಗಾಲು ಮಾಡಿದೆ.

ಮುಂಗಾರಿನಲ್ಲಿ ಹೆಸರು, ಹತ್ತಿ, ಗೋವಿನಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ ಮತ್ತಿತರ ಬೆಳೆಗಳು ಸತತವಾಗಿ ಸುರಿದ ಮಳೆ, ಪ್ರವಾಹದಿಂದ ಹಾಳಾಗಿದ್ದವು. ಆದರೆ, ರೈತರು ಹಾಗೂ ದನಕರುಗಳಿಗೆ ಇಡೀ ವರ್ಷ ಆಹಾರವಾಗಬೇಕಿದ್ದ ಹಿಂಗಾರಿನ ಗೋಧಿ, ಕಡಲೆ, ಜೋಳ ಮತ್ತಿತರ ಬೆಳೆಗಳು ತುಕ್ಕು ರೋಗ ಬಾಧೆಯಿಂದ ಒಣಗುತ್ತಿದೆ. ಸುಡುರೋಗ ಕೀಟ ಬಾಧೆಯಿಂದ ನೆಲಕಚ್ಚಿದು ರೈತನ ಸ್ಥಿತಿ ಚಿಂತಾಜನಕವಾಗಿದೆ.

ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಹೆಚ್ಚು ಬೇಸಾಯ ಪ್ರದೇಶದಲ್ಲಿ ಕಡಲೆ, ಗೋಧಿ, ಜೋಳ ಬೆಳೆಯಲಾಗಿದೆ. ಆದರೆ, ಹವಾಮಾನ ವೈಪರೀತ್ಯ ಮತ್ತು ನಿಗದಿತ ಸಮಯದಲ್ಲಿ ಬಿತ್ತನೆ ಮಾಡದ ಕಾರಣ ಈ ಬೆಳೆಗಳಿಗೆ ತುಕ್ಕುರೋಗ ತಗುಲಿದೆ. ಜೋಳದ ಸುಳಿಯಲ್ಲಿರುವ ಕೀಟಗಳು ಬೆಳೆಯನ್ನು ತಿಂದು ಹಾಕುತ್ತಿವೆ. ಗೋಧಿ ಬೆಳೆಯಲ್ಲಿ ಕಂದು, ಕೆಂಪು, ಬಂಡಾರ ರೋಗ ಕಾಣಿಸಿದರೆ, ಕಡಲೆ ಬೆಳೆಯು ಬೇರು ಸಮೇತ ತುಕ್ಕು ರೋಗ ಬಾಧೆಯಿಂದ ಒಣಗುವ ಸ್ಥಿತಿಯಲ್ಲಿದೆ. ರೋಗ ನಿಯಂತ್ರಣಕ್ಕೆ ಕೆಲವು ರೈತರು ಸಾಕಷ್ಟು ಹಣ ವ್ಯಯಿಸಿ ರಾಸಾಯನಿಕ ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ.ರೈತರಿಗೆ ಈ ರೀತಿಯಾಗಿ ಕಾಂಡಕೋರಕ, ಎಲೆ ಬಾಧೆ, ಕೀಟ ಬಾಧೆಯಿಂದ ಬೇಳೆಗಳು ಸಂಪೂರ್ಣ ನೆಲಕಚ್ಚಿವೆ ರೈತ ಸಂಕಷ್ಟಕ್ಕೆ ಸಿಲುಕಿ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ ಅಲ್ಲದೆ ರೈತ ಬೆಳೆಗೆ ಹಾಕಿದ ಹಣವು ಹಿಂತಿರುಗಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ.

ತುಕ್ಕು ರೋಗ ಹತೋಟಿಗೆ ಸಸ್ಯ ಸಂರಕ್ಷಣೆ ಕ್ರಮಕ್ಕಾಗಿ ಶೀಲಿಂದ್ರನಾಶಕ ಬಳಸಿದರೆ ತುಕ್ಕುರೋಗ ಹತೋಟಿಗೆ ಬರಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು ಆ ಪ್ರಕಾರ ನಾವು ಔಷಧಿ ಸಿಂಪರಣೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಮಂಜುನಾಥ ಕವಳಿ

 

ಫ್ರೆಶ್ ನ್ಯೂಸ್

Latest Posts

Featured Videos