ಎಲ್ಲಾರಿಗೂ 71 ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಎಲ್ಲಾರಿಗೂ 71 ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಬೆಂಗಳೂರು, ಜ. 25: ಭಾರತದ ಪ್ರಜಾಪ್ರಭುತ್ವ ಸಮಾಜಕ್ಕೆ ಜನವರಿ 26 ವಿಶೇಷ ದಿನ.  ಭಾರತದ ಜಾರಿಗೊಂಡ ಆ ದಿನವನ್ನು ‘ಗಣರಾಜ್ಯೋತ್ಸವ ‘ ರೂಪದಲ್ಲಿ  ಆಚರಿಸಲಾಗುತ್ತದೆ. 2020ರ ಜನವರಿ 26ಕ್ಕೆ ಮತ್ತೂ ವಿಶೇಷವಿದೆ.  ಭಾರತದ  ಸಂವಿಧಾನಕ್ಕೆ ಎಪ್ಪತ್ತು ವರ್ಷ ತುಂಬುವ ವಿಶೇಷ ಸಂದರ್ಭವಿದು.

ಈ ವಿಶೇಷವನ್ನು ಅರ್ಥಪೂರ್ಣವಾಗಿಸುವ ವಿಧಾನವೆಂದರೆ, ಸಂವಿಧಾನವನ್ನು ನಾವು ಮತ್ತಷ್ಟು ನಮ್ಮವದಾಗಿಸಿ ಕೊಳ್ಳುವುದು. ಈ ಸಂವಿಧಾನ ದಿನ  “ಸಂವಿಧಾನ ಶಿಲ್ಪಿ ” ಡಾ.ಭೀಮರಾವ್ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವ ಗೌರವಿಸುವ ಸಂದರ್ಭವೂ ಹೌದು.

ವಿದ್ಯಾವಂತರ, ಪಂಡಿತರ, ಲಕ್ಷ್ಮಿವಲ್ಲಭರ ಕುಟುಂಬದಲ್ಲಿ ಹುಟ್ಟಿ ಇಂಗ್ಲೆಂಡ್, ಅಮೇರಿಕಗಳಲ್ಲಿ ವ್ಯಾಸಂಗ ಮಾಡಿ ಜನ್ಮ ಬಲ, ಜಾತಿ ಬಲ, ಧನ ಬಲಗಳಿಂದಲೇ ಪಾಂಡಿತ್ಯ ಬಲ ಪಡೆಯುವುದಾಗಲಿ, ಅಧಿಕಾರದ ತುತ್ತ ತುದಿಗೇರುವುದಾಗಲಿ, ಲೌಕಿಕ ಯಶಸ್ಸಿನ ಪರಾಕಾಷ್ಠೆ ಮುಟ್ಟುವುದಾಗಲಿ ಹೆಚ್ಚುಗಾರಿಕೆ ಆಗಲಾರದು, ಅದ್ಭುತವಾಗಲಾರದು.

ಸಹಸ್ರಾರು ವರ್ಷಗಳ ಅನುವಂಶಿಕ  ದಾಸ್ಯದಿಂದ ತಲೆ ಎತ್ತಲಾರದೆ, ಬಡತನವೇ ದೈವವೆಂದು, ಪಶು ಜೀವನವೇ  ಭಾಗ್ಯವೆಂದು, ಕೊಳಕು ಕಸಗಳೇ ಪರಮ ವರವೆಂದು ನಂಬಿ ಉನ್ನತ ವರ್ಗದವರ ಕಾಲ ಕಸವಾಗಿ ಬದುಕಿದ ಕುಟುಂಬದಲ್ಲಿ ಜನಿಸಿ, ಯಾವ ಬಲವೂ ಇಲ್ಲದ ತಬ್ಬಲಿಯಾಗಿಯೇ, ದೇಶ ವಿದೇಶಗಳಲ್ಲಿ  ಜ್ಞಾನ ಯಜ್ಞವನ್ನು ಪೂರೈಸಿ ವಿರೋಧ ವಾತಾವರಣದಲ್ಲಿಯೂ ದಲಿತೋದ್ಧಾರ ಕೈಂಕರ್ಯದ ಮೂಲಕ ಲೋಕೋತ್ತರ ಯಶಸ್ಸಿಗೆ ಭಾಜನರಾಗಿ ನಾಡಿನ ಸಮಕಾಲೀನ ನಾಯಕರಲ್ಲೊಬ್ಬರಾಗಿ ಮೆರೆಯುವುದು ಪವಾಡವಾಗುತ್ತದೆ.

ಹೆರಿಗೆಯ ಬ್ಯಾನೆ ಹೆತ್ತವಳಿಗೆ ಗೊತ್ತು. ಬಡತನದ ಗೋಳು  ಬಡವನೇ ಬಲ್ಲ.  ಅಸ್ಪೃಶ್ಯ ಕುಟುಂಬದ ಭೀಕರ ಸಮಸ್ಯೆಗಳ ಅರಿವು ಅಸ್ಪೃಶ್ಯನಿಗಲ್ಲದೆ ಮಹಾತ್ಮರಿಗೂ ಅರಿಯದು.

“ಡಾ. ಭೀಮರಾವ್ ಅಂಬೇಡ್ಕರ್” ಅವರು ಪಂಡಿತರ ಕುಟುಂಬದಲ್ಲಿಯೋ,  ಶ್ರೀಮಂತರ ಕುಟುಂಬದಲ್ಲಿಯೋ ಹುಟ್ಟಿದ್ದರೆ ಅವರು ದಿವಾನರಾಗಿಯೋ, ಮಂತ್ರಿಯಾಗಿಯೋ  ವೈಭೋಗ ಜೀವನವನ್ನು ನಡೆಸಿ ಮಣ್ಣಲ್ಲಿ ಮಣ್ಣಾಗಿ ಬಿಡುತ್ತಿದ್ದರು. ಅವರು ಅಸ್ಪೃಶ್ಯರಾಗಿ ಜನಿಸಿ, ಅಸ್ಪೃಶ್ಯರ ನಡುವೆ ಬದುಕು ನಡೆಸಿದ್ದರಿಂದಲೇ ಅವರಿಗೆ ಅಸ್ಪೃಶ್ಯರ  ಸಮಸ್ಯೆಗಳ ಅರಿವಾದದ್ದು .ಆ ಅರಿವೇ ಅವರ ಸಾಹಸ ಸಿದ್ಧಿಗಾಗಿಗೆ ಮೂಲ ಪ್ರೇರಣೆ ಆದದ್ದು.

ಗಾಡಿ ಹತ್ತಿಸದ, ಹೋಟೆಲಿಗೆ ಸೇರಿಸದ, ಹತ್ತಿರ ಸುಳಿಯಗೊಡದ ದಲಿತ ವ್ಯಕ್ತಿಯೊಬ್ಬ ಭಾರತದ ರಾಜಕೀಯ ಕ್ಷೇತ್ರದ ಪ್ರವಾದಿ ಆಗುತ್ತಾನೆಂದು ಯಾವ ಪುರೋಹಿತನೂ ಭವಿಷ್ಯ ನುಡಿದಿರಲಿಲ್ಲ.

ಮುಟ್ಟಬಾರದ ಅಧಿಕಾರಿಯೆಂದು, ಪಾಠ ಕೇಳಬಾರದ ಪ್ರಾಧ್ಯಾಪಕನೆಂದು ಅವಹೇಳನೆಗೆ, ಅವಮಾನಕ್ಕೆ ಗುರಿಯಾದ ದಲಿತ ಸಂಜಾತನೊಬ್ಬಇಡೀ ಪ್ರಪಂಚದ ಅತ್ಯುತ್ತಮ ಲಿಖಿತ ಸಂವಿಧಾನ ರಚನೆಯ ಮಹಾಮಹಿಮೆಗೆ ಪಾತ್ರರಾಗುತ್ತಾರೆಂದು ಯಾವ ಕೊರವಂಜಿಯೂ ಕಣಿ ನುಡಿದಿರಲಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos