ರಾಜ್ಯ ಸರ್ಕಾರದ “ಪ್ರಬುದ್ಧ’ ಯೋಜನೆಗೆ ಚಾಲನೆ​​​​​​​

  • In Metro
  • December 8, 2018
  • 280 Views
ರಾಜ್ಯ ಸರ್ಕಾರದ “ಪ್ರಬುದ್ಧ’ ಯೋಜನೆಗೆ ಚಾಲನೆ​​​​​​​

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ವಿದೇಶದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ನೆರವು ಒದಗಿಸಲು ರಾಜ್ಯ ಸರ್ಕಾರ 120 ಕೋಟಿ ರೂ. ಬೃಹತ್‌ ಮೊತ್ತ ಮೀಸಲಿಟ್ಟಿದೆ.

ಪ್ರಸಕ್ತ ವರ್ಷ 250 ಪದವಿ ಹಾಗೂ 150 ಸ್ನಾತಕೋತ್ತರ ವಿದ್ಯಾರ್ಥಿಗಳು ವಿದೇಶಗಳಲ್ಲಿನ ಪ್ರತಿಷ್ಠಿತ ಟಾಪ್‌ 10 ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿಕೊಡುವ “ಪ್ರಬುದ್ಧ’ ಯೋಜನೆಗೆ ಶುಕ್ರವಾರ ಚಾಲನೆ ನೀಡಲಾಯಿತು.

ಅನುದಾನ ವಿತರಣೆಯಲ್ಲಿನ ಗೊಂದಲ ನಿವಾರಣೆಗಾಗಿ ಪೋಷಕರ ವಾರ್ಷಿಕ ಆದಾಯ 8 ರಿಂದ 10 ಲಕ್ಷ ರೂ. ಇದ್ದರೆ ಶೆ.100 ರಷ್ಟು ಶುಲ್ಕ, 10 ರಿಂದ 15 ಲಕ್ಷ ರೂ. ಇದ್ದರೆ ಶೇ.50 ರಷ್ಟು ಶುಲ್ಕ, 15 ರಿಂದ 25 ಲಕ್ಷ ರೂ. ಇದ್ದರೆ ಶೇ.33 ರಷ್ಟು ಶುಲ್ಕ ಭರಿಸುವ ಹೊಸ ವ್ಯವಸ್ಥೆ ರೂಪಿಸಲಾಗಿದೆ. ಯೋಜನೆಯಡಿ ಶೇ. 33 ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ.4 ರಷ್ಟು ವಿಶೇಷ ಚೇತನರಿಗೆ ಮೀಸಲಿಡಲಾಗಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಯೋಜನೆಗೆ ಚಾಲನೆ ನೀಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಅವಕಾಶ. ಈ ಯೋಜನೆಯ ಮೂಲಕ ವಿದೇಶಗಳಲ್ಲಿ ವ್ಯಾಸಂಗ ಮಾಡುವ ನೂರಾರು ಮಂದಿ ಯುವಕ-ಯುವತಿಯರ ಕನಸು ನನಸಾಗಲಿದೆ ಎಂದು ಹೇಳಿದರು.

ನಾನೂ ಸ್ಕಾಲರ್‌ಶಿಫ್ ಪಡೆದಿದ್ದೆ
ನಾನೂ ಸ್ಕಾಲರ್‌ಶಿಫ್ ಪಡೆದಿದ್ದೆ. ಕೇಂದ್ರ ಸರ್ಕಾರದ ನೆರವಿನಡಿ ಆಸ್ಟ್ರೇಲಿಯಾಕ್ಕೆ ಹೋಗಿ ವ್ಯಾಸಂಗ ಮಾಡಿ ಪಿಎಚ್‌ಡಿ ಪಡೆದೆ. ಅಂಬೇಡ್ಕರ್‌ ಅವರಿಗೂ ಸ್ಕಾಲರ್‌ಶಿಫ್ ಸಿಗದಿದ್ದರೆ ಅವರ ವ್ಯಾಸಂಗವೂ ಕಷ್ಟವಾಗುತ್ತಿತ್ತು ಎಂದು ಪರಮೇಶ್ವರ್‌ ಸ್ಮರಿಸಿಕೊಂಡರು.

ಸಾಕ್ಷರತೆ ಪ್ರಮಾಣ ಶೇ.75 ದಾಟಿದರೂ ದಲಿತರ ಸಾಕ್ಷರತೆ ಪ್ರಮಾಣ ಶೇ.45 ರಷ್ಟಿದೆ. ಆದರಲ್ಲೂ ಮಹಿಳೆಯರದು ಇನ್ನೂ ಕಡಿಮೆಯಿದೆ. ಇಂತಹ ಯೋಜನೆಗಳ ಮೂಲಕ ದಲಿತರು ಉನ್ನತ ವ್ಯಾಸಂಗ ಪಡೆಯಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, 2002 ರಿಂದ 2018 ರವರೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡಲು 57 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೂರ್‍ನಾಲ್ಕು ವರ್ಷಗಳಿಂದ ವಿದೇಶಗಳಲ್ಲಿ ವ್ಯಾಸಂಗ ಬಯಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಹಿಂದೆ ವಾರ್ಷಿಕ 10 ಕೋಟಿ ರೂ. ಇದ್ದ ಅನುದಾನ 120 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ವಿದೇಶಗಳಿಗೆ ವ್ಯಾಸಂಗ ಮಾಡಲು ಹೋಗುವ ವಿದ್ಯಾರ್ಥಿಗಳಿಗೆ ಸರ್ಕಾರವೇ ಅಲ್ಲಿನ 150 ಟಾಪ್‌ ವಿಶ್ವವಿದ್ಯಾಲಯಗಳ ಬಗ್ಗೆ ಮಾಹಿತಿ ನೀಡಲಿದೆ. ಜತೆಗೆ ಹೋಗುವ ಮುನ್ನ ಅಲ್ಲಿನ ಸಂಸ್ಕೃತಿ, ಆಹಾರ ಪದ್ಧತಿ ಕುರಿತು ಶಿಬಿರ ನಡೆಸಲಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯಗಳ ಶುಲ್ಕ ಹೊರತುಪಡಿಸಿ ವಾರ್ಷಿಕ 8 ಲಕ್ಷ ರೂ. ನಿರ್ವಹಣೆ ವೆಚ್ಚ, 1 ಲಕ್ಷ ರೂ. ಪಠ್ಯಪುಸ್ತಕ ವೆಚ್ಚ, ವಿಮಾನ ಟಿಕೆಟ್‌ ಶುಲ್ಕ ಸಹ ಸರ್ಕಾರವೇ ಭರಿಸಲಿದೆ. ಉನ್ನತ ವ್ಯಾಸಂಗ ಮಾಡಿದರೂ ನಿಗದಿತ ಸಮಯದವರೆಗೂ ಇಲ್ಲಿಯೇ ಬಂದು ಉದ್ಯೋಗ ಮಾಡಬೇಕಾಗುತ್ತದೆ. ಪ್ರತಿಭಾ ಪಲಾಯನಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos