ಬಾಲಕಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ರಕ್ಷಣಾಗೃಹ ಕಾವಲುಗಾರ್ತಿ!

  • In Crime
  • March 29, 2019
  • 156 Views
ಬಾಲಕಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ರಕ್ಷಣಾಗೃಹ ಕಾವಲುಗಾರ್ತಿ!

ಚಿಕ್ಕಬಳ್ಳಾಪುರ, ಮಾ, 29, ನ್ಯೂಸ್ ಎಕ್ಸ್ ಪ್ರೆಸ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿದ್ದ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರದ ಸರ್ಕಾರಿ ಬಾಲ ಮಂದಿರದಲ್ಲಿದ್ದ ಇಬ್ಬರು ಬಾಲಕಿಯರನ್ನು ಮಧ್ಯರಾತ್ರಿ ಹಿಂಬಾಗಿಲ ಮೂಲಕ ಪರ ಪುರುಷರ ಜೊತೆಗೆ ಕಳುಹಿಸಲಾಗುತ್ತಿತ್ತು. ಕಾವಲು ಕಾಯುವ ಸಿಬ್ಬಂದಿಯಾಗಿರುವ ಮಹಿಳೆಯೇ ಈ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿರುವುದು ಗೊತ್ತಾಗಿದೆ. ಬಾಲಮಂದಿರದ ಕಾವಲು ಸಿಬ್ಬಂದಿ ರಾತ್ರಿ ಹಿಂಬಾಗಿಲ ಮೂಲಕ ಬಾಲಕಿಯರನ್ನು ಸಮೀಪದಲ್ಲಿದ್ದ ಕಟ್ಟಡಕ್ಕೆ ಕಳುಹಿಸುತ್ತಿದ್ದಳು. ಕಟ್ಟಡದಲ್ಲಿದ್ದ ಮತ್ತೊಬ್ಬ ಮಹಿಳೆ, ಕೊಠಡಿಗೆ ಪರ ಪುರುಷರೊಂದಿಗೆ ಈ ಬಾಲಕಿಯರನ್ನು ಕಳುಹಿಸುತ್ತಿದ್ದಳು. ವಾಪಸ್ ಬರುವಾಗ ಸ್ವಲ್ಪ ಹಣ ಕೊಡುತ್ತಿದ್ದಳು.

ಬಾಲಮಂದಿರದಲ್ಲಿದ್ದ ನಾಲ್ವರು ಬಾಲಕಿಯರಲ್ಲಿ ಇಬ್ಬರು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆಗ, ಬಾಲ ಮಂದಿರದ ಪಕ್ಕದಲ್ಲೇ ಇದ್ದ ಇಬ್ಬರು ಬಾಲಕಿಯರನ್ನು ವಿಚಾರಿಸಿದಾಗ, ಈ ಆಘಾತಕಾರಿ ಸಂಗತಿ ಗೊತ್ತಾಗಿದೆ. ನಮ್ಮ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬಾಲಕಿಯರು ಅಧಿಕಾರಿಗಳ ಬಳಿ ಮಾಹಿತಿ ನೀಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಲೇ ಬಾಲಮಂದಿರದ ಅಧೀಕ್ಷಕರು ಚಿಕ್ಕಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದು, ಕಾವಲು ಕಾಯುವ ಸಿಬ್ಬಂದಿ ಮತ್ತು ಕಟ್ಟಡದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos