ಬಂಧನಕ್ಕೊಳಗಾಗಿ ಬೆಂಗಳೂರಿಗೆ ಬಂದ ರೌಡಿ ಶಾಸಕ ಗಣೇಶ್

ಬಂಧನಕ್ಕೊಳಗಾಗಿ ಬೆಂಗಳೂರಿಗೆ ಬಂದ ರೌಡಿ ಶಾಸಕ ಗಣೇಶ್

ಬೆಂಗಳೂರು: ನಗರದ ಈಗಲ್ ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕ ಆನಂದ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ಬಳಿಕ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರನ್ನು ಬಿಡದಿ ಪೊಲೀಸರ ವಿಶೇಷ ತಂಡವು ಬುಧವಾರದಂದು ಗುಜರಾತ್ ನಲ್ಲಿ ಬಂಧಿಸಿತ್ತು. ಘಟನೆ ನಡೆದು ಒಂದು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಶಾಸಕ ಗಣೇಶ್ ಅವರನ್ನು ಇಂದು ಬೆಳಿಗ್ಗೆ ನಗರಕ್ಕೆ ಕರೆತರಲಾಯಿತು.

ಗುಜರಾತ್ ನ ಸೋಮನಾಥ ಬಳಿಯ ಸುಖಸಾಗರ್ ಹೊಟೇಲ್ ನಲ್ಲಿ ಬಿಡದಿ ಪೊಲೀಸರ ವಿಶೇಷ ತಂಡವು ಶಾಸಕ ಗಣೇಶ್ ಅವರನ್ನು ಬಂಧಿಸಿತ್ತು. ಇಂದು ಕೆ.ಐ.ಎ.ಎಲ್. ವಿಮಾನ ನಿಲ್ದಾಣದ ಮೂಲಕ ಪೊಲೀಸರು ಶಾಸಕ ಗಣೇಶ್ ಅವರನ್ನು ನಗರಕ್ಕೆ ಕರೆತಂದರು. ವಿಮಾನ ನಿಲ್ದಾಣದಿಂದ ನೇರವಾಗಿ ಬಂಧಿತ ಶಾಸಕ ಗಣೇಶ್ ಅವರನ್ನು ಬಿಗು ಪೊಲೀಸ್ ಬಂದೋಬಸ್ತ್ ನಲ್ಲಿ ಬಿಡದಿ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಅವರನ್ನು ರಾಮನಗರದಲ್ಲಿರುವ ಸಿ.ಜೆ.ಎಂ. ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದಾರೆ.

ಬಂಧಿತ ಶಾಸಕ ಗಣೇಶ್ ಅವರನ್ನು ಠಾಣೆಗೆ ಕರೆತರಲಾಗುತ್ತಿರುವ ಹಿನ್ನಲೆಯಲ್ಲಿ ಬಿಡದಿ ಠಾಣೆಯ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಅನ್ನು ಬಿಗಿಗೊಳಿಸಲಾಗಿದೆ.

ಜೈಲೂಟ ಗ್ಯಾರಂಟಿ?
ಬಿಡದಿ ಪೊಲೀಸರ ವಶದಲ್ಲಿರುವ ಕಂಪ್ಲಿ ಗಣೇಶ್ ಅವರನ್ನು ಇಂದೇ ರಾಮನಗರದಲ್ಲಿರುವ ಸಿ.ಜೆ.ಎಂ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಅಲ್ಲಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಗಣೇಶ್ ಗೆ ಕೆಲ ದಿನಗಳ ಕಾಲ ಜೈಲೂಟ ಗ್ಯಾರಂಟಿ ಎನ್ನಲಾಗುತ್ತಿದೆ. ಶುಕ್ರವಾರದಂದು ಶಾಸಕ ಗಣೇಶ್ ಅವರ ಬೇಲ್ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ಅವರ ಪರ ವಕೀಲ ಹನುಮಂತರಾಯ ಅವರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos