ಬರದ ಮಧ್ಯೆಯೂ, ‘ಗಂಗೆ’ ಹರಿಸಿದ ‘ಗೌರಿ’!

ಬರದ ಮಧ್ಯೆಯೂ, ‘ಗಂಗೆ’ ಹರಿಸಿದ ‘ಗೌರಿ’!

ಶಿರಸಿ, ಮೇ. 20, ನ್ಯೂಸ್ ಎಕ್ಸ್ ಪ್ರೆಸ್ : ಪುಣ್ಯ ತೀರ್ಥ ಕ್ಷೇತ್ರಗಳಲ್ಲಿ ಭಕ್ತರ ಪುಣ್ಯಸ್ನಾನಕ್ಕೂ ನೀರಿನ  ಕೊರತೆ ಇದೆ. ಆಗೊಂದು ಈಗೊಂದು ಮಳೆ ಬಿಟ್ಟರೆ ಬಿಸಿಲ ಬೇಗೆ ಏರುತ್ತಲೇ ಇದೆ. ಕೆಲವು ಕ್ಷೇತ್ರಗಳಲ್ಲಂತೂ ಪುಣ್ಯಸ್ನಾನಕ್ಕೆ ನೀರು ಇಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಆದರೆ, ಶಿರಸಿ ತಾಲೂಕಿನ ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗಣೇಶ ನಗರದ ನಿವಾಸಿ ಗೌರಿ ನಾಯ್ಕೆ 60 ಅಡಿ ಆಳದ ಬಾವಿಯಲ್ಲಿ ಈ ಬಾರಿಯ ಬೇಸಿಗೆಯ ‘ಬರ’ದ ಮಧ್ಯೆಯೂ ‘ಗಂಗೆ’ಗೆ ಬರ ಬಂದಿಲ್ಲ..! ಭಗೀರಥ ಶ್ರಮದಿಂದ ಮಹಿಳೆಯೊಬ್ಬಳು ಒಬ್ಬಂಟಿಯಾಗಿ ತೋಡಿದ್ದ ಬಾವಿಯಲ್ಲಿ ಅಡಕೆ, ತೆಂಗಿನ ಗಿಡಗಳಿಗೆ ನೀರುಣಿಸುವ ಮೂಲಕ  ಕಳೆದೆರಡು ವರ್ಷಗಳ ಹಿಂದೆ ಸ್ವತಃ ಒಬ್ಬಂಟಿಯಾಗಿ ಬಾವಿ ತೋಡಿ ಎಲ್ಲರ ಗಮನ ಸೆಳೆದಿದ್ದಾಳೆ. ಇಡೀ ಊರಲ್ಲಿ ನೀರಿನ ಸಮಸ್ಯೆಯಿದ್ದರೂ ಈ ಬಾವಿಯಲ್ಲಿ ನೀರು ನಳನಳಿಸುತ್ತಿದೆ.

ಈ ವರ್ಷ ಹೊಳೆಯಲ್ಲಿಯೂ ನೀರಿನ ಕೊರತೆ ಉಂಟಾಗಿದೆ. ತಾಂತ್ರಿಕ ಕಾರಣಗಳಿಂದಲೂ ನಾಲ್ಕೈದು ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ಆದರೆ ಇದು ಸ್ಥಳೀಯರ ಜೀವಜಲದ ಅಗತ್ಯದಷ್ಟುಕೊರತೆಯನ್ನು ನೀಗಿಸುತ್ತಿಲ್ಲ. ಟ್ಯಾಂಕರ್‌ ಮೂಲಕವೂ ಇಲ್ಲಿ ನೀರು ತರಿಸಿಕೊಳ್ಳಲಾಗುತ್ತದೆ. ಇಂತಹ ಪ್ರದೇಶದಲ್ಲೂ ಎತ್ತರದ ಸ್ಥಳದಲ್ಲಿ ಮಹಿಳೆ ತೋಡಿದ್ದ ಬಾವಿ ನೀರಿನ ಸೆಲೆ ಉಳಿಸಿಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos