ಕಾಲುವೆ ಪುನರ್ನಿರ್ಮಾಣ ಕಾಮಗಾರಿ ಪೂರ್ಣ

ಕಾಲುವೆ ಪುನರ್ನಿರ್ಮಾಣ ಕಾಮಗಾರಿ ಪೂರ್ಣ

ಬೆಂಗಳೂರು, ಸೆ. 15: ನಾಯಂಡಹಳ್ಳಿ ಜಂಕ್ಷನ್ ಒಂದು ಪ್ರಮುಖ ರಸ್ತೆಯಾಗಿದೆ. ನಿತ್ಯ ಸಹಸ್ರಾರು ಜನರು ಆ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೆ, ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಹಿಡಿಶಾಪ ಹಾಕುವಂತಾಗಿತ್ತು. ಇದಕ್ಕೀಗ ಮುಕ್ತಿ ದೊರೆಯುವ ಕಾಲ ಹತ್ತಿರಕ್ಕೆ ಬಂದಂತೆ ಕಾಣುತ್ತಿದೆ. ಹಲವಾರು ಭಾರಿ ಸ್ಥಗಿತಗೊಂಡಿದ್ದ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಮಳೆ ಬಂದಾಗಲೆಲ್ಲಾ ಮುಳುಗೇಳುತ್ತಿದ್ದ ನಾಯಂಡಹಳ್ಳಿ ಜಂಕ್ಷನ್‌ಗೆ ಕೊನೆಗೂ ಮುಕ್ತಿ ದೊರೆಯುತ್ತಿದೆ. ಬಿಬಿಎಂಪಿ ಕೈಗೊಂಡಿದ್ದ ಕಾಲುವೆ ಪುನರ್ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸವಾರರು ಪ್ರವಾಹ ಭೀತಿಯಿಲ್ಲದೆ  ನಿಶ್ಚಿಂತೆಯಿಂದ ಸಂಚರಿಸುವ ಕಾಲ ಸಮೀಪಿಸಿದೆ.

ನಗರದಲ್ಲಿ ಜೋರು ಮಳೆ ಸುರಿದಾಗಲೆಲ್ಲ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ನಲ್ಲಿ ಪ್ರವಾಹ ಉಂಟಾಗಿ ಕಾರುಗಳು ಮುಳುಗುತ್ತಿದ್ದವು. ಕಳೆದ ವರ್ಷದ ಮಳೆಗಾಲದಲ್ಲಿ ಜಂಕ್ಷನ್ನಲ್ಲಿ ಕಾಲುವೆಗೆ ಕಾರು ಬಿದ್ದು ಮುಳುಗಿತ್ತು. ಪ್ರತಿ ಮಳೆಗಾಲದಲ್ಲಿಯೂ ಜಂಕ್ಷನ್ ನೀರು ತುಂಬಿಕೊಂಡು ಕೆರೆಯಾಗುತ್ತಿತ್ತು. ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹೆದರುತ್ತಿದ್ದರು.

ಪುನರ್ ನಿರ್ಮಾಣ ಕಾಮಗಾರಿಯು ಅಂತಿಮ ಹಂತಕ್ಕೆ ತಲುಪಿದೆ. ವೃಷಭಾವತಿ ವ್ಯಾಲಿಗೆ ಸಂಪರ್ಕ ಕಲ್ಪಿಸುವ ವಿಜಯನಗರ ಕಡೆಯಿಂದ ಹರಿದು ಬರುವ ಕಾಲುವೆಯ ದುರಸ್ತಿ ಕಾರ್ಯ ಮುಗಿದಿದೆ. ಅಲ್ಲದೇ ವೃಷಭಾವತಿ ಕಡೆಗೆತಡೆಗೋಡೆಯನ್ನೂ ನಿರ್ಮಿಸಲಾಗಿದೆ. ಬಲ ಬದಿಯ ಕಾಲುವೆಗೆ ತಡೆಗೋಡೆ ನಿರ್ಮಿಸುವುದಷ್ಟೆ ಬಾಕಿ ಇದೆ.

ವಿಜಯನಗರ ಕಡೆಯಿಂದ ಸಾಗಿ ಬರುವ ಕಾಲುವೆಯು ಶಿಥಿಲಗೊಂಡಿದ್ದರಿಂದ ಮಳೆ ನೀರು ಹಿಮ್ಮುಖವಾಗಿ ಹರಿದು ಪ್ರವಾಹ ಉಂಟಾಗುತ್ತಿತ್ತು. ಇದರಿಂದ ಪ್ರತಿ ವರ್ಷವೂ ಕಾರುಗಳು ಮುಳುಗುತ್ತಿದ್ದವು. ಇದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಿತ್ತು. ಸದ್ಯ ಕಾಲುವೆಗೆ ಪ್ರಿಕಾಸ್ಟ್ ಎಲಿಮೆಂಟ್ಗಳನ್ನು ಅಳವಡಿಸಿ, ದುರಸ್ತಿಗೊಳಿಸಲಾಗಿದೆ. ವೃಷಭಾವತಿ ಕಾಲುವೆ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಘನ ತ್ಯಾಜ್ಯ, ಕಟ್ಟಡದ ಅವಶೇಷಗಳನ್ನು ಸುರಿಯಲಾಗುತ್ತಿತ್ತು. ಸದ್ಯ ಅದೆಲ್ಲವನ್ನು ತೆರವುಗೊಳಿಸಿ, ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದ ಮಳೆಗಾಲದಲ್ಲಿ ಸಂಭಾವ್ಯ ಅನಾಹುತ ತಡೆಗೆ ಕ್ರಮ ವಹಿಸಲಾಗಿದೆ. ಸುರಕ್ಷಿತ ಸಂಚಾರಕ್ಕೆ ಅನುವುಮಾಡಿಕೊಡಲಾಗುತ್ತದೆ ಎಂದು ರಸ್ತೆ ನಿರ್ವಹಣೆಯ ಉಸ್ತುವಾರಿ ಅಧಿಕಾರಿಗಳು ತಿಳಿಸಿದ್ದಾರೆ.

ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ರಾಜಕಾಲುವೆಗೆ ನಿರ್ಮಿಸಿರುವ ತಡೆಗೋಡೆ ಕಾಮಗಾರಿ ಮುಂದಿನ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್ ಅವರು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos