ಮಾಜಿ ಸಚಿವ ವೈಜನಾಥ ಪಾಟೀಲ್ ವಿಧಿವಶ

ಮಾಜಿ ಸಚಿವ ವೈಜನಾಥ ಪಾಟೀಲ್ ವಿಧಿವಶ

ಕಲಬುರಗಿ, ನ. 2 : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ವೈಜನಾಥ ಪಾಟೀಲ್ ಶನಿವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. 82 ವರ್ಷದ ವೈಜನಾಥ ಪಾಟೀಲ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ದಕ್ಷ ಮತ್ತು ಉತ್ಸಾಹಿ ನಾಯಕರಾಗಿದ್ದು, ವೈಜನಾಥ ಪಾಟೀಲ್ ಅವರು ದಿ. ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ 1984ರಲ್ಲಿ ತೋಟಗಾರಿಕೆ ಹಾಗೂ ಎಚ್ .ಡಿ. ದೇವೇಗೌಡರ ಸಂಪುಟದಲ್ಲಿ 1994ರಲ್ಲಿ ನಗರಾಭಿವೃದ್ಧಿ ಸಚಿವರಾಗಿ ರಾಜ್ಯದ ಗಮನ ಸೆಳೆದಿದ್ದರು. ವಾರದ ಹಿಂದೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತ ವೈಜನಾಥ ಅವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೂವರು ಪುತ್ರರಲ್ಲಿ ಗೌತಮ್ ಜಿಲ್ಲಾ ಪಂಚಾಯ್ತಿ ಸದಸ್ಯರು. ಇನ್ನೊಬ್ಬ ಪುತ್ರ ಡಾ. ವಿಕ್ರಂ ಪಾಟೀಲ್ ಎಂಎಸ್ ಐಎಲ್ ಅಧ್ಯಕ್ಷರಾಗಿದ್ದರು. ಇನ್ನೊಬ್ಬ ಪುತ್ರ ವೈದ್ಯರಾಗಿದ್ದಾರೆ.
ಕಾಂಗ್ರೆಸ್ ನಲ್ಲಿದ್ದ ಪಾಟಿಲ್ 2018ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಚಿಂಚೊಳಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಮತ್ತು ಗುಲ್ಬರ್ಗದಿಂದ ಒಂದು ಬಾರಿ ಎಂಎಲ್ ಸಿ ಆಗಿದ್ದರು. ಹೈದರಾಬಾದ್ ಕರ್ನಾಟಕದ ಪ್ರಮುಖ ನಾಯಕರಾಗಿದ್ದ ಅವರು 371(ಜೆ) ಕಲಂ ಜಾರಿಯಲ್ಲಿ ಪ್ರಮುಖ ಪಾತ್ರ ನಿರ್ವಹಿದ್ದರು.
ಕಲ್ಯಾಣ ಕರ್ನಾಟಕಕ್ಕೆ ಶ್ರಮಿಸಿದ್ದ ಪಾಟೀಲ್ :
ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುವ ರಾಜ್ಯದ ಅತಿ ಹಿಂದುಳಿದ ಪ್ರದೇಶವಾದ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ ಪಾಟೀಲರು ಶ್ರಮಿಸಿದ್ದರು. 371ಜೆ ವಿಧಿ ಜಾರಿಗಾಗಿ ಅವಿರತವಾಗಿ ಹೋರಾಡಿದ್ದರು. ಈ ಭಾಗದ ಜನರಿಗೆ ಹಲವು ಅನುಕೂಲ ಕಲ್ಪಿಸುವ ಮತ್ತು ಅಲ್ಲಿನ ಅಭಿವೃದ್ಧಿಗೆ ಅವಕಾಶ ಮಾಡಿಕೊಡುವ 371ಜೆ ವಿಧಿ ಜಾರಿಗೆ 20 ವರ್ಷಗಳಷ್ಟು ಹಿಂದೆಯೇ ಒತ್ತಾಯಿಸಿ, ಹೋರಾಟ ರೂಪಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos