ಹ್ಯಾಟ್ರಿಕ್ ಸೋಲಿನ ಬಳಿಕ ಮೊದಲ ಗೆಲುವು ಕಂಡ ಮುಂಬೈ

ಹ್ಯಾಟ್ರಿಕ್ ಸೋಲಿನ ಬಳಿಕ ಮೊದಲ ಗೆಲುವು ಕಂಡ ಮುಂಬೈ

ಬೆಂಗಳೂರು: ನಿನ್ನೆ ನಡೆದ ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 29 ರನ್‌ಗಳ ಗೆಲುವಿನ ನಗೆ ಬೀರಿದೆ.

ಗಮನಾರ್ಹವಾಗಿ, ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಪ್ರಸಕ್ತ ಋತುವಿನಲ್ಲಿ ಮೂರು ಸತತ ಪಂದ್ಯಗಳ ಸೋಲಿನ ನಂತರ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದೆ. ಈ ಮೂಲಕ ಅಂಕಪಟ್ಟಿ ಅಮೂಲ್ಯ 2 ಅಂಕಗಳನ್ನು ಕಲೆಹಾಕಿದೆ.

ಇನ್ನು ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ ಐದು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ನಾಲ್ಕು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ, ಟಿಮ್ ಡೇವಿಡ್ ಮತ್ತು ರೊಮಾರಿಯೋ ಶಫರ್ಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿತು.

234 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯವರೆಗೂ ಹೋರಾಡಿತು. ಪೃಥ್ವಿ ಶಾ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಸ್ಫೋಟಕ ಅರ್ಧಶತಕಗಳ ಹೊರತಾಗಿಯೂ 20 ಓವರ್‌ಗಳಲ್ಲಿ ವಿಕೆಟ್ 8 ನಷ್ಟಕ್ಕೆ 205 ರನ್‌ಗಳನ್ನು ಕಲೆಹಾಕಿತು. ಈ ಮೂಲಕ 29 ರನ್‌ಗಳಿಂದ ವೀರೋಚಿತ ಸೋಲು ಅನುಭವಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ದೊಡ್ಡ ಆರಂಭ ನೀಡಲು ವಿಫಲರಾದರು. ಅಭಿಷೇಕ್ ಪೊರೆಲ್ ನಿಧಾನಗತಿಯ ಆಟವಾಡಿ 31 ಎಸೆತಗಳಲ್ಲಿ 5 ಬೌಂಡರಿ ಸಮೇತ 41 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಆರಂಭಿಕ ಪೃಥ್ವಿ ಶಾ 40 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ 66 ರನ್ ಬಾರಿಸಿ ಔಟಾದರು.

ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಸಮೇತ 71 ರನ್ ಬಾರಿಸಿದರೂ, ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos