ಸೌಲಭ್ಯವಂಚಿತ ಟೋಲ್‌ನಾಕಾ

ಸೌಲಭ್ಯವಂಚಿತ ಟೋಲ್‌ನಾಕಾ

ಬೈಲಹೊಂಗಲ, ಮಾ. 04: ತಾಲೂಕಿನ ಸಾಣಿಕೊಪ್ಪ ಗ್ರಾಮದ ಬಳಿ ಬೆಳಗಾವಿ-ಸವದತ್ತಿ ಮಾರ್ಗದ ರಸ್ತೆಗೆ ನಿರ್ಮಿಸಲಾದ ಟೋಲ್ ನಾಕಾ ಮೂಲಭೂತ ಸೌಕರ್ಯಗಳಿಲ್ಲದಿರುವದರಿಂದ ನಾಗರಿಕರು ಪರದಾಡುವಂತಾಗಿದೆ.

ಕಳೆದ 3 ತಿಂಗಳ ತಿಂದೆ ನಿರ್ಮಾಣಗೊಂಡ ಬೆಳಗಾವಿ-ಸವದತ್ತಿ ರಸ್ತೆ ಮಧ್ಯೆ ಸಾಣಿಕೊಪ್ಪ ಬಳಿ ಟೋಲ್ ನಾಕಾವನ್ನು ನಿರ್ಮಿಸಬಾರದೆಂದು ನಾಗರಿಕರು ಪ್ರತಿಭಟನೆ ನಡೆಸಿ ವಿರೋಧಿಸಿದ ನಡುವೆಯೆ ಪ್ರಾರಂಭಗೊಂಡಿತ್ತು. ಆದರೆ ಟೋಲ್ ನಾಕಾ ನಾನಾ ಸಮಸ್ಯೆಗಳನ್ನು ಎದುರಿಸಿ ಗೊಂದಲ ಗೂಡಾಗಿ ಪರಿಣಮಿಸಿದೆ.

ಟೋಲ್ ನಾಕಾ ಬಳಿ ಸಂಚರಿಸುವ ಹಲವು ವಾಹನ ಸವಾರರು ಸ್ಥಳೀಯವಾಗಿ ಬೆಳಗಾವಿಗೆ ಉದ್ಯೋಗಕ್ಕಾಗಿ ಸಂಚರಿಸುತ್ತಾರೆ. ಅಂಥವರಿಗೆ ಮಾಸಿಕ ಪಾಸ್ ನಿಗದಿಪಡಿಸಿದ್ದು, ನಿಗದಿತ ಪಾಸ್‌ಗಾಗಿ ಹಣ ಎಷ್ಟೆಂದು ಟೋಲ್‌ನಲ್ಲಿ ದರ ಪಟ್ಟಿಯ ನಾಮಫಲಕ ಅಳವಡಿಸದಿರುವದರಿಂದ ನಾಗರಿಕರು ಟೋಲ್ ಸಿಬ್ಬಂದಿ ಎಷ್ಟು ಕೇಳುವ ಹಣ ಕೊಡಬೇಕಿದೆ. ಮಾಸಿಕ ಪಾಸ್‌ಗಾಗಿ ಹಣ ಪಡೆಯುವ ಸಿಬ್ಬಂದಿ ಕೂಡಲೇ ನಾಗರಿಕರಿಗೆ ಪಾಸ್ ವಿತರಿಸುವದಿಲ್ಲ ಎಂಬ ಆರೋಪ ಕೇಳಿ ಬಂದಿದೆ.ಪಾಸ್ ನೀಡಿದ ರಸೀದಿ ಆ ಕೂಡಲೇ ನೀಡದೆ ನಾಳೆ ಕೊಡುತ್ತೇನೆಂದು ಸತಾಯಿಸುವ ಸಿಬ್ಬಂದಿಯನ್ನು ಪ್ರತಿ ಬಾರಿ ವಾಹನದಲ್ಲಿ ಸಂಚರಿಸುವ ಚಾಲಕರು ಕೇಳಿದಾಗ ಮುಂಜಾಣೆ, ಸಂಜೆ ಎನ್ನುತ್ತಲೇ ಕಾಲ ಕಳೆಯುತ್ತಾರೆ. ಓರ್ವ ಗ್ರಾಹಕರ ಪಾಸ್ ಮೂರು ದಿನವಾದವಾದರೂ ವಿತರಿಸದೆ ಪಾಸ್‌ನ್ನು ಸಿಬ್ಬಂದಿ ತಮ್ಮ ಮನೆಗೆ ಒಯ್ದ ಘಟನೆ ನಡೆದಿದೆ. ಸಿಬ್ಬಂದಿ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿ ತಗಾದೆ ತೆಗೆದ ನಂತರ ಪಾಸ್ ವಿತರಿಸಲಾಗಿದೆ ಎಂದು ಗ್ರಾಹಕರು ದೂರಿದ್ದಾರೆ.

ಮಾಸಿಕ ಪಾಸ್ ವಿತರಿಸಿದ ನಂತರ ಪಾಸ್‌ನಲ್ಲಿ ಪೆನ್ನಿನ ಟಿಕ್ ಮಾರ್ಕ ಮಾಡಲಾಗುತ್ತಿದ್ದು, ಈ ಪದ್ಧತಿಯನ್ನು ಕೈಬಿಟ್ಟು ಸೆನ್ಸರ್ ಮೂಲಕ ಡೈರೆಕ್ಟ್ ಆಗಿ ವಾಹನ ಗುರುತಿಸಿ ವಾಹನ ಮುಂದೆ  ಹೋಗುವಂತೆ ನೋಡಿಕೊಳ್ಳುವ ಪದ್ಧತಿ ಜಾರಿಯಾಗಬೇಕಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಬಾಗೇವಾಡಿ ಟೋಲ್‌ನಾಕಾದಲ್ಲಿ ಈ ಪದ್ಧತಿ ಜಾರಿಯಲ್ಲಿರುವುದನ್ನು ಸ್ಮರಿಸಬಹುದು.

ಈ ಟೋಲ್ ನಾಕಾ ನೋಡಿಕೊಳ್ಳುವ ವ್ಯವಸ್ಥಾಪಕರು ನಾಲ್ಕೈದು ಕಡೆ ವ್ಯವಸ್ಥೆ ನೋಡಿಕೊಳ್ಳುವದರಿಂದ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಕರ್ತವ್ಯ ನಿರ್ವಹಿಸುವುದು ಕಂಡು ಬರುತ್ತದೆ. ಇಲ್ಲಿಯ ಕುಂದುಕೊರತೆ ಬಗ್ಗೆ ಹೆಲ್ಪಲೈನ್ ಸಹ ಮಾಡಿಸುವ ಅವಶ್ಯಕತೆಯಿದೆ. ಇಲ್ಲಿಯ ಸಿಬ್ಬಂದಿ ಪ್ರತಿದಿನ ವಿವರ ಸಹ ಲಭ್ಯವಿಲ್ಲದಿರುವದರಿಂದ ಅದನ್ನು ನಾಮಫಲಕದಲ್ಲಿ ಕಾಣಿಸುವ ಅವಶ್ಯಕತೆಯಿದೆ.

ಸಿಬ್ಬಂದಿ ಗ್ರಾಹಕರೊಂದಿಗೆ ಒರಟುತನದಿಂದ ವರ್ತಿಸುವದರಿಂದ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದು, ಅವರಲ್ಲಿ ಸೌಜನ್ಯ, ಪ್ರಾಮಾಣಿಕತೆ ಮೂಡಿಸುವ ಅವಶ್ಯಕತೆಯಿದೆ. ಇಲ್ಲಿ ಕೆಲಸ ಮಾಡುವ ನೌಕರರು ಮತ್ತೆ ಕೆಲಸ ನಿರ್ವಹಿಸಲಿರುವ ನೌಕರರಿಗೆ ಚಾರ್ಜ ನೀಡುವಾಗ ತಮ್ಮ ಕೆಲಸದ ವಿವರಗಳನ್ನು ಮತ್ತೊಬ್ಬರಿಗೆ ಹೇಳಿ ಹೋಗದಿರುವುದರಿಂದ ವಾಹನ ಸವಾರರ ಕೆಲಸ ಕಾರ್ಯಗಳಿಗೆ ಅಡಚಣಿಯಾಗುತ್ತಿದ್ದು, ಮೇಲಾಧಿಕಾರಿಗಳು ಸಿಬ್ಬಂದಿ ಮೇಲೆ ನಿಗಾ ವಹಿಸಿ ಉತ್ತಮ ಕಾರ್ಯ ನಿರ್ವಹಣೆಗೆ ಸೂಚಿಸುವ ಅಗತ್ಯತೆಯಿದೆ. ಅಂದಾಗ ಮಾತ್ರ ಇಲ್ಲಿಯ ಟೋಕ್‌ನಾಕಾ ಉತ್ತಮ ಕಾರ್ಯದಿಂದ ಸಮಸ್ಯೆ ಬಗೆಹರಿಯಲು ಸಾಧ್ಯವಿದೆ. ಇನ್ನಾದರೂ ಮೇಲಾಧಿಕಾರಿಗಳು ಟೋಲ್ ನಾಕಾ ಸುಧಾರಣೆಗೆ ಪ್ರಯತ್ನಿಸುವರೇ ಕಾದು ನೋಡಬೇಕಿದೆ.

 

ಫ್ರೆಶ್ ನ್ಯೂಸ್

Latest Posts

Featured Videos