ಕವಿವಿ ಆಡಳಿತ ಕಚೇರಿ ಎದುರು ಉಪವಾಸ ಸತ್ಯಾಗ್ರಹ

ಕವಿವಿ ಆಡಳಿತ ಕಚೇರಿ ಎದುರು ಉಪವಾಸ ಸತ್ಯಾಗ್ರಹ

ಧಾರವಾಡ, ಫೆ. 18: ಕರ್ನಾಟಕ ವಿಶ್ವವಿದ್ಯಾಲಯವು 2019- 20ನೇ ಸಾಲಿನಲ್ಲಿ ನಡೆಸಿದ ಸಹಾಯಕ ಪ್ರಾಧ್ಯಾಪಕರ (ಟಿಎ) ಹುದ್ದೆ (ತಾತ್ಕಾಲಿಕ) ನೇಮಕಾತಿಯಲ್ಲಿ ಅನ್ಯಾಯ ಎಸಗಿದೆ ಎಂದು ಆರೋಪಿಸಿ ಅತಿಥಿ ಉಪನ್ಯಾಸಕ ಕೆ.ಎಚ್. ವೆಂಕಟೇಶಕುಮಾರ ಎಂಬುವರು, ಕವಿವಿ ಆಡಳಿತ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು. ಮಧ್ಯಾಹ್ನದ ನಂತರ ಅಸ್ವಸ್ಥರಾದ ಅವರನ್ನು ಕವಿವಿ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.

ಇದಕ್ಕೂ ಮೊದಲು ಮಾತನಾಡಿದ ಅವರು, ‘ಕವಿವಿ ದೃಶ್ಯಕಲಾ ಅಧ್ಯಯನ ವಿಭಾಗದಲ್ಲಿ 2018-19ನೇ ಸಾಲಿನಲ್ಲಿ ಉಪನ್ಯಾಸಕನಾಗಿ 1 ವರ್ಷ ಕಾರ್ಯ ನಿರ್ವಹಿಸಿದ್ದೇನೆ. ಪ್ರಸಕ್ತ ಸಾಲಿನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದಗೆ ಅರ್ಜಿ ಸಲ್ಲಿಸಿದ್ದು, ಅರ್ಹತೆ ಇದ್ದರೂ ನೇಮಕಾತಿಯಿಂದ ಹೊರಗಿಡಲಾಗಿದೆ. ದೃಶ್ಯಕಲಾ ಅಧಯನ ವಿಭಾಗದ ಪಠ್ಯಕ್ರಮದ ಕಾರ್ಯಭಾರದ ಅನ್ವಯ ಪ್ರಕಾರ 8 ಅತಿಥಿ ಪ್ರಾಧ್ಯಾಪಕರ ಅವಶ್ಯಕತೆ ಇದ್ದರೂ 6 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದು ವೆಂಕಟೇಶಕುಮಾರ ದೂರಿದರು.

ಅರ್ಜಿ ಸಲ್ಲಿಸಿದವರಲ್ಲಿ ಎಂ.ಫಿಲ್, ಪಿಎಚ್​ಡಿ ಪೂರೈಸಿದವರು ಇರದಿದ್ದರೆ ಸ್ನಾತಕೋತ್ತರ ಪದವೀಧರರನ್ನು ಪರಿಗಣಿಸಬಹುದು. ಆದರೆ ತಾವು ಎಂ.ಫಿಲ್ ಪೂರೈಸಿದ್ದರೂ ಕೈ ಬಿಟ್ಟು ಕೇವಲ ಸ್ನಾತಕೋತ್ತರ ಪದವಿ ಪೂರೈಸಿದ ಓರ್ವರನ್ನು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪರಿಗಣಿಸಿದ್ದಾರೆ. ಮಂಗಳವಾರವೂ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ವೆಂಕಟೇಶಕುಮಾರ ಪ್ರತಿಕ್ರಿಯಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos