‘ಫೇಸ್ಬುಕ್ ಫ್ರೆಂಡ್’ನಿಂದ ಅಪಹರಣ, ನಗ್ನನೃತ್ಯ, ಸಾಮೂಹಿಕ ಅತ್ಯಾಚಾರ..!

  • In Crime
  • April 23, 2019
  • 138 Views
‘ಫೇಸ್ಬುಕ್ ಫ್ರೆಂಡ್’ನಿಂದ ಅಪಹರಣ, ನಗ್ನನೃತ್ಯ, ಸಾಮೂಹಿಕ ಅತ್ಯಾಚಾರ..!

ಚಂಢೀಗರ್, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದ ಸ್ನೇಹಿತ ಸೇರಿದಂತೆ ನಾಲ್ವರು ಗನ್ ತೋರಿಸಿ ಯುವತಿಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಈ ಘಟನೆ ಏಪ್ರಿಲ್ 17ರಂದು ನಡೆದಿದ್ದು, ಸಂತ್ರಸ್ತೆ ಭಾನುವಾರ ಉತ್ತರ ಪ್ರದೇಶದ ಬಾಗ್ಪತ್‍ನ ಬಿನೌಲಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಬೆಳಕಿಗೆ ಬಂದಿದೆ. 28 ವರ್ಷದ ಯುವತಿಗೆ ಗನ್ ತೋರಿಸಿ ಬೆದರಿಸಿ ಗುರುಗ್ರಾಮದ ಮಾಲ್ ಬಳಿ ಅಪಹರಿಸಲಾಗಿತ್ತು. ನಂತರ ನಾಲ್ವರು ಸೇರಿ ಅರೆನಗ್ನವಾಗಿ ಡ್ಯಾನ್ಸ್ ಮಾಡಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯ ದೂರನ್ನು ಆಧಾರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತಿಬ್ಬರ ಪತ್ತೆಗೆ ಬಲೆ ಬೀಸಿದ್ದೇವೆ. ಬಂಧಿತರನ್ನು ವಿಪಿನ್ ಮತ್ತು ಆಶಿಶ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆ ಗುರುಗ್ರಾಮ ಮೂಲದವರಾಗಿದ್ದು, ಭ್ರೂಣಶಾಸ್ತ್ರಜ್ಞೆ ಮತ್ತು ಸಂಶೋಧನಾ ವಿದ್ವಾಂಸೆಯಾಗಿದ್ದಾರೆ. ಸಂತ್ರಸ್ತೆಗೆ ನಾಲ್ಕು ವರ್ಷಗಳ ಹಿಂದೆ ಫೇಸ್‍ಬುಕ್ ಮೂಲಕ ಆರೋಪಿ ವಿಪಿನ್ ಪರಿಚಯವಾಗಿತ್ತು. ಅಂದಿನಿಂದಲೂ ಇಬ್ಬರು ಚಾಟ್ ಮಾಡುತ್ತಿದ್ದರು. ಕೊನೆಗೆ ಒಂದು ದಿನ ಇಬ್ಬರು ಪರಸ್ಪರ ಭೇಟಿಯಾಗಲು ನಿರ್ಧರಿಸಿದ್ದರು. ಅದರಂತೆಯೇ ಗುರುಗ್ರಾಮದ ಪೆಸಿಫಿಕ್ ಮಾಲ್‍ನಲ್ಲಿ ಭೇಟಿ ಮಾಡಲು ಪ್ಲಾನ್ ಮಾಡಲಾಗಿತ್ತು. ಏಪ್ರಿಲ್ 17ರಂದು ಸಂತ್ರಸ್ತೆ ಮೊದಲ ಬಾರಿಗೆ ವಿಪಿನ್‍ನನ್ನು ಭೇಟಿಯಾಗಲು ಬಂದಿದ್ದರು. ಮಾಲ್ ಬಳಿ ಆರೋಪಿ ವಿಪಿನ್ ಜೊತೆಗೆ ಆತನ ಮೂವರು ಸ್ನೇಹಿತರು ಬಂದಿದ್ದರು. ನಾನು ಹೋದ ತಕ್ಷಣ ಏಕಾಏಕಿ ಗನ್ ತೋರಿಸಿ ಕಿಡ್ನಾಪ್ ಮಾಡಿದ್ದಾರೆ. ಮೊದಲು ನನಗೆ ಅರೆ ನಗ್ನವಾಗಿ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದರು. ನಂತರ ಅಲ್ಲಿಂದ ವಿಪಿನ್ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಜ್ಯೂಸ್‍ಗೆ ಮತ್ತು ಬರುವ ಔಷಧಿ ಮಿಕ್ಸ್ ಮಾಡಿ ಕುಡಿಸಿ, ಬಳಿಕ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳು ಸಂಪೂರ್ಣ ರಾತ್ರಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದು, ಮರುದಿನ ಬೆಳಗ್ಗೆ ಅದೇ ಮಾಲ್ ಮುಂದೆ ಬಿಟ್ಟು ಹೋದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂತ್ರಸ್ತೆ ದೂರಿನಲ್ಲಿ ಆರೋಪಿಗಳನ್ನು ಫೇಸ್‍ಬುಕ್ ಗೆಳೆಯ ವಿಪಿನ್ ತೋಮರ್, ಅವನ ಗೆಳೆಯರಾದ ಆಶಿಶ್ ಬಲ್ಯಾಣ್, ತರಂಜೀತ್ ಹಾಗೂ ಅಮಿತ್ ಮುಂಜಾಳ್ ಎಂದು ಹೇಳಿದ್ದಾರೆ. ಈಗಾಗಲೇ ವಿಪಿನ್ ಹಾಗೂ ಆಶಿಶ್ ನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಬಲೆ ಬೀಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇರೆಗೆ ಐಪಿಸಿ ಸೆಕ್ಷನ್ 376ಡಿ(ಗ್ಯಾಂಗ್‍ರೇಪ್) ಮತ್ತು 363(ಕಿಡ್ನ್ಯಾಪ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos