ದ್ರೋಹಿಗಳ ಸರ್ಕಾರ ಮುಂದುವರೆಯುವುದಿಲ್ಲ

ದ್ರೋಹಿಗಳ ಸರ್ಕಾರ ಮುಂದುವರೆಯುವುದಿಲ್ಲ

ಶಿವಮೊಗ್ಗ, ಜೂ. 21: ರಾಜ್ಯದಲ್ಲಿರುವುದು ದೋಸ್ತಿ ಸರ್ಕಾರವಲ್ಲ, ದ್ರೋಹಿಗಳ ಸರ್ಕಾರವಾಗಿದೆ. ಯಾವುದೇ ಕಾರಣಕ್ಕೂ ಇದು ಮುಂದುವರೆಯುವುದಿಲ್ಲ. ಯಾವುದೇ ಕ್ಷಣದಲ್ಲಿ ಬೀಳಬಹುದು. ಯಾವುದೇ ಸಂದರ್ಭದಲ್ಲಿ ಮಧ್ಯಂತರ ಚುನಾವಣೆ ಬರಬಹುದು ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಮೈತ್ರಿ ಸರ್ಕಾರ ಕುರಿತಾಗಿ ನೀಡಿರುವ ಹೇಳಿಕೆ ಮತ್ತು ಮಧ್ಯಂತರ ಚುನಾವಣೆ ಬಗ್ಗೆ ಅವರು ಪ್ರಸ್ತಾಪಿಸಿರುವುದರಿಂದ ಸಮ್ಮಿಶ್ರ ಸರ್ಕಾರ ಬೀಳುವ ಸೂಚನೆ ಇದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೈತ್ರಿ ಸರ್ಕಾರದ ಬಗ್ಗೆ ದೇವೇಗೌಡರಿಗೆ ಮಾತ್ರ ಅಸಮಾಧಾನವಿಲ್ಲ. ಇಡೀ ರಾಜ್ಯದ ಜನ ಅಸಮಾಧಾನ ಹೊಂದಿದ್ದಾರೆ. ದೇವೇಗೌಡರಿಗೆ ಈಗ ಜ್ಞಾನೋದಯವಾಗಿದೆ. ಗೌಡರ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಮಂಧ್ಯಂತರ ಚುನಾವಣೆ ಬರುವ ಸಾಧ್ಯತೆ ಇದ್ದು, ಬಿಜೆಪಿ ಸಿದ್ಧವಾಗಿದೆ. ಮಧ್ಯಂತರ ಚುನಾವಣೆ ನಡೆದಲ್ಲಿ ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲು ನಮ್ಮ ವಿರೋಧವಿಲ್ಲ. ಅವರು ಸರ್ಕಾರಿ ಶಾಲೆಗಳನ್ನು ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಿರುವುದು ಸರಿಯಾಗಿದೆ. ಆದರೆ, ಅವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರಿ ಶಾಲೆಗಳು ಶೋಚನೀಯ ಸ್ಥಿತಿಯಲ್ಲಿವೆ. ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಾಟಾಚಾರಕ್ಕೆ ಗ್ರಾಮವಾಸ್ತವ್ಯ ಮಾಡದೆ ಗ್ರಾಮವಾಸ್ತವ್ಯದ ಬಳಿಕ ಶಾಲೆಗಳ ಮೊದಲ ಸ್ಥಿತಿ ಹೇಗಿತ್ತು. ಈಗ ಹೇಗಿದೆ ಮತ್ತು ಉಳಿದ ಶಾಲೆಗಳ ಅಭಿವೃದ್ಧಿಗೆ ಏನು ಕ್ರಮಕೈಗೊಳ್ಳಬೇಕೆಂದು ಚರ್ಚಿಸಿ ವಿಶೇಷ ಅನುದಾನ ಕೊಡಬೇಕೆಂದು ಆಗ್ರಹಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos