ದೋಸ್ತಿ ಸರ್ಕಾರಕ್ಕೆ ಕಾದಿದೆಯಾ ಅಪಾಯ? ಬದಲಾಗಲಿದೆಯಾ ರಾಜ್ಯ ರಾಜಕೀಯ ಚಿತ್ರಣ?

ದೋಸ್ತಿ ಸರ್ಕಾರಕ್ಕೆ ಕಾದಿದೆಯಾ ಅಪಾಯ? ಬದಲಾಗಲಿದೆಯಾ ರಾಜ್ಯ ರಾಜಕೀಯ ಚಿತ್ರಣ?

ಬೆಂಗಳೂರು: ಅತೃಪ್ತ ಕಾಂಗ್ರೆಸ್ ಶಾಸಕರನ್ನು ತನ್ನತ್ತ ಸೆಳೆಯುವ ಪ್ರಯತ್ನದಲ್ಲಿ ಬಿಜೆಪಿ ನಾಯಕರು ನಿರತರಾಗಿದ್ದು, ಅವರ ಪ್ರಯತ್ನ ಯಶಸ್ವಿಯಾದಲ್ಲಿ ಸಂಕ್ರಾಂತಿ ಹಬ್ಬದ ವೇಳೆಗೆ ಮೈತ್ರಿ ಸರ್ಕಾರದ ಅಳಿವು ಉಳಿವು ನಿರ್ಧಾರವಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲಾ 104 ಶಾಸಕರು ಕಳೆದ 3-4 ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಅತೃಪ್ತ ಶಾಸಕರನ್ನು ಸೆಳೆಯುವ ನಿಟ್ಟಿನಲ್ಲಿ ನಡೆಸಿರುವ ಕಸರತ್ತು ಕುರಿತಂತೆ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.

ವರಿಷ್ಠರು ಕೂಡಾ ಆಪೇಷನ್‍ ಕಮಲ ಮಾಡಲು ಉತ್ಸುಕರಾಗಿದ್ದಾರೆ. ಯಾವುದೇ ಕಾರಣಕ್ಕೂ ಕೈಗೊಂಡಿರುವ ಪ್ರಯತ್ನಗಳು ವಿಫಲವಾಗಬಾರದು. ಮೈತ್ರಿ ಸರ್ಕಾರವನ್ನು ಕೆಳಗಿಳಿಸಲು ಮ್ಯಾಜಿಕ್ ನಂಬರ್ ಕಲೆ ಹಾಕುವಲ್ಲಿ ಪ್ರಯತ್ನಗಳು ಫಲ ನೀಡಿದ್ದರೆ ಮಾತ್ರ ರಾಜಕೀಯ ಕ್ರಾಂತಿಯನ್ನು ಮಾಡಲು ಸಾಧ್ಯ ಎಂದು ಹೇಳಿದ್ದಾರೆ. ಇದರ ನಡುವೆ ಸಚಿವ ಸಂಪುಟದಲ್ಲಿ ಸ್ಥಾನಮಾನ ಹಾಗೂ ಪ್ರಭಾವಿ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವೂ ಸಿಗದೆ, ತೀರಾ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರ ಉಪಟಳ ದಿನೇದಿನೇ ಹೆಚ್ಚಾಗುತ್ತಿದ್ದು, ಪಕ್ಷದ ವರಿಷ್ಠರೂ ಸೇರಿದಂತೆ, ರಾಜ್ಯ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಇದರ ಲಾಭ ಪಡೆಯಲು ಬಿಜೆಪಿ ನಾಯಕರು ದೆಹಲಿ ಕುಳಿತು ಕಸರತ್ತು ನಡೆಸಿರುವುದು ಸಂಕ್ರಾಂತಿ ಹಬ್ಬದೊಳಗೆ ಒಂದು ಹಂತದ ಪ್ರಯತ್ನ ಮಾಡಿದ್ದಾರೆ.
ಕೆಲವು ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಮತ್ತೆ ಕೆಲವರು ತಮ್ಮ ನಿಗೂಢ ನಡೆಯಿಂದ ಕಾಂಗ್ರೆಸ್ ನಾಯಕರಿಗೆ ’ಮಗ್ಗಲ ಮುಳ್ಳಾಗಿ’ ಪರಿಣಮಿಸಿದ್ದಾರೆಂದು ಹೇಳಲಾಗುತ್ತಿದೆ. ಇದರ ಲಾಭವನ್ನೇ ಪಡೆದುಕೊಳ್ಳುವ ಪ್ರಯತ್ನವನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದ ಬಿಜೆಪಿ ನಾಯಕರು ತೆರೆಮರೆಯಲ್ಲಿ ಮುಂದುವರೆಸಿದ್ದು, ಸಂಕ್ರಾಂತಿ ಹಬ್ಬದ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಕ್ರಾಂತಿಗೆ ಮುಹೂರ್ತ ನಿಗದಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ ಅವರು, ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದೆ ಓಡಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅವರನ್ನು ಬಿಜೆಪಿಗೆ ಸೆಳೆಯಲು ಕಳೆದ ಒಂದು ತಿಂಗಳಿನಿಂದ ಆ ಪಕ್ಷದ ನಾಯಕರು ಪ್ರಯತ್ನಿಸುತ್ತಲೇ ಇದ್ದಾರೆ. ದೆಹಲಿ ಮಟ್ಟದ ಬಿಜೆಪಿ ನಾಯಕರು ಈ ವಿಚಾರದಲ್ಲಿ ಅಖಾಡಕ್ಕೆ ಇಳಿದಿದ್ದು, ರಮೇಶ್ ಜಾರಕಿಹೊಳಿ ಮತ್ತು ಅವರ ಆಪ್ತ ಶಾಸಕರಿಗಾಗಿ ಗಾಳ ಹಾಕಿರುವುದು ಇನ್ನೂ ನಿರೀಕ್ಷಿತ ಫಲ ನೀಡಿಲ್ಲ. ಇವರಲ್ಲದೆ, ಇನ್ನೂ ಅನೇಕ ಮಂದಿ ಕಾಂಗ್ರೆಸ್ ಶಾಸಕರು ಪಕ್ಷದ ನಾಯಕರ ಧೋರಣೆ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದು, ಅಸಮಾಧಾನಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಇದಕ್ಕೆ ವರಿಷ್ಠ ನಾಯಕರ ಧೋರಣೆಯೂ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರನ್ನು ಒಂದೆಡೆ ಸೇರಿಸಿ ಅವರ ಕಷ್ಟ-ಸುಖ ಆಲಿಸುವ ಗೋಜಿಗೆ ರಾಜ್ಯ ನಾಯಕರ್ಯಾರೂ ಮುಂದಾಗದಿರುವುದು ಅವರಲ್ಲಿನ ಸಿಟ್ಟು ಸೆಡವನ್ನು ಹೆಚ್ಚಿಸುತ್ತಲೇ ಇದೆ.

ಇಂತಹ ವಿದ್ಯಮಾನಗಳು ಸ್ಫೋಟಗೊಳ್ಳುವುದನ್ನೇ ಕಾಯುತ್ತಿರುವ ಬಿಜೆಪಿ ನಾಯಕರು ಮೈತ್ರಿ ಸರ್ಕಾರದ ಪತನಕ್ಕೆ ಗಡುವು ನೀಡುವಂತಾಗಿದೆ. ಅವರ ಲೆಕ್ಕಾಚಾರಗಳೆಲ್ಲಾ ನಿರೀಕ್ಷಿತ ಮಟ್ಟದಲ್ಲಿ ನಡೆದರೆ, ’ಸಂಕ್ರಾಂತಿ ಸಂಕಟ’ ಕ್ರಾಂತಿಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಸಚಿವ ಸ್ಥಾನ ಸಿಗದ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ನಾಗೇಂದ್ರ, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಸೇರಿದಂತೆ, ಹಲವರು ಇತ್ತ ಕಾಂಗ್ರೆಸ್‌ನಲ್ಲೂ ಉಳಿಯಲಾಗದೆ, ಅತ್ತ ಬಿಜೆಪಿಗೂ ಹೋಗಲಾಗದೆ ತೊಳಲಾಟದಲ್ಲಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ತೀವ್ರ ಅಸಮಾಧಾನಗೊಂಡಿರುವುದು ಕಾಂಗ್ರೆಸ್ ನಾಯಕರಿಗೆ ನಿದ್ರೆಗೆಡಿಸಿದೆ. ಇತ್ತೀಚಿನ ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲೂ ತಮ್ಮನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದೆ ಇರುವುದು ಅವರ ಸಿಟ್ಟಿಗೆ ಕಾರಣವಾಗಿದೆ. ಅತೃಪ್ತ ಕಾಂಗ್ರೆಸ್ ಶಾಸಕರ ಸಾಲಿಗೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಶಾಸಕ ಡಾ. ಉಮೇಶ್ ಜಾಧವ್ ಹೊಸ ಸೇರ್ಪಡೆಯಾಗಿದ್ದು, ತಮಗೆ ಕಾಂಗ್ರೆಸ್ ದಯಪಾಲಿಸಿರುವ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸದೆ ಇರುವುದು ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ಉಲ್ಬಣಗೊಳ್ಳುವಂತೆ ಮಾಡಿದೆ. ಸಂಕ್ರಾಂತಿ ನಂತರ ಅಧಿಕಾರ ಸ್ವೀಕರಿಸುವುದಾಗಿ ಅವರ ಆಪ್ತರಲ್ಲಿ ಹೇಳಿಕೊಂಡಿರುವರಾದರೂ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಹಿಂದೆ – ಮುಂದೆ ನೋಡುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ನಾಯಕರು ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ತೆರೆಮರೆಯಲ್ಲಿ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ.

ಇದೀಗ ಡಾ. ಉಮೇಶ್ ಜಾಧವ್ ಅವರನ್ನು ಬಿಜೆಪಿಗೆ ಸೆಳೆಯಲು ಪಕ್ಷದಲ್ಲಿನ ಲಂಬಾಣಿ ನಾಯಕರ ಮುಖಾಂತರ ಒತ್ತಡ ಹೇರಲಾಗುತ್ತಿದೆ. ಬಿಜೆಪಿಗೆ ಬಂದರೆ ಕಲಬುರಗಿ ಲೋಕಸಭಾ ಸ್ಥಾನದಿಂದ ಟಿಕೆಟ್ ನೀಡುವುದು, ಒಂದು ವೇಳೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಇಲ್ಲದಿದ್ದಲ್ಲಿ ತಮ್ಮ ಸಂಬಂಧಿಕರಿಗೆ ಟಿಕೆಟ್ ನೀಡುವ ಭರವಸೆಯನ್ನು ಮುಖಂಡರ ಮುಖಾಂತರ ಕೊಡಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ತಂತ್ರಕ್ಕೆಮೈತ್ರಿಯ ಪ್ರತಿತಂತ್ರ: ಆಪರೇಷನ್ ಕಮಲ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‍ನ ಎಲ್ಲಾ ಸಚಿವರು ಇಂದು ಉಪಹಾರ ಕೂಟ ನಡೆಸಿ ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಶಾಸಕರು ಬೀಡುಬಿಟ್ಟಿರುವುದು ಅದರ ಬೆನ್ನ ಹಿಂದೆಯೇ ಒಂದರ ಮೇಲೊಂದರಂತೆ ಸಭೆ ನಡೆಸುತ್ತಿರುವುದು ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಉಮೇಶ್ ಜಾದವ್, ಶಿವರಾಮ್ ಹೆಬ್ಬಾರ್ ಸೇರಿದಂತೆ ಕೆಲವು ಶಾಸಕರು ನಾಪತ್ತೆಯಾಗಿರುವುದು ಸಮ್ಮಿಶ್ರ ಸರ್ಕಾರವನ್ನು ಗಲಿಬಿಲಿಗೊಳಿಸಿದೆ.

ಈಗಾಗಲೇ ಎರಡು ಬಾರಿ ಆಪರೇಷನ್ ಕಮಲಕ್ಕೆ ಯತ್ನಿಸಿ ವಿಫಲವಾದ ಬಿಜೆಪಿ ಮೂರನೇ ಬಾರಿಯೂ ಯಶಸ್ವಿಯಾಗುವುದಿಲ್ಲ ಎಂದು ಧೈರ್ಯವಾಗಿದ್ದ ಕಾಂಗ್ರೆಸ್ ನಾಯಕರಿಗೆ ಚಳಿಜ್ವರ ಬಂದಂತಾಗಿದೆ. ಕಾಂಗ್ರೆಸ್‍ನ ಕೆಲವು ಶಾಸಕರು ಸಂಪರ್ಕಕ್ಕೆ ಸಿಗದೆ ನೇರವಾಗಿ ಬಿಜೆಪಿ ನಾಯಕರ ಜತೆ ಮಾತುಕತೆ ನಡೆಸಿದ್ದಾರೆ. ನಾವು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಪಕ್ಷದಲ್ಲೇ ಉಳಿಯುತ್ತೇವೆ ಎಂದು ನಂಬಿಸುತ್ತಲೇ ಮತ್ತೊಂದು ಕಡೆ  ಬಿಜೆಪಿಯ ಆಪರೇಷನ್ ಕಮಲದತ್ತ ಒಲವು ತೋರಿರುವ ಶಾಸಕರು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos