ದೊಸ್ತಿಗಳೀಗ ದುಷ್ಮನಿಗಳು!

ದೊಸ್ತಿಗಳೀಗ ದುಷ್ಮನಿಗಳು!

ಬೆಂಗಳೂರು, ಸೆ. 24: ಒಂದು ವರ್ಷದ ದೋಸ್ತಿ ಸರ್ಕಾರ ಬಳಿಕ ಇದೀಗ ಕಾಂಗ್ರೆಸ್-ಜೆಡಿಎಸ್ ನಾಯಕರು, ಪರಸ್ಪರ ದುಷ್ಮನಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ನೀವು ಸಾಕಿದ್ದ ಮುದ್ದಿನ ಗಿಣಿಗಳೇ ಅವರನ್ನು ಕುಕ್ಕಿದವು ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕೆಗೆ ಕಾಂಗ್ರೆಸ್‌ನ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಹೌದು, ನಾಲ್ಕು ದಶಕಗಳ ರಾಜಕೀಯ ಒಡನಾಟದ ಬಳಿಕವೂ ಹದ್ದನ್ನು ಗಿಣಿ ಎಂದು ಭಾವಿಸಿದ್ದು, ನನ್ನ ತಪ್ಪು ಎಂದು ಸಿದ್ದರಾಮಯ್ಯ ಚುಚ್ಚಿದ್ದಾರೆ. ಈ ಮೂಲಕ ಸರ್ಕಾರ ಪತನಕ್ಕೆ ದೇವೇಗೌಡ ಕುಟುಂಬವೇ ಕಾರಣ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕುಮಾರಸ್ವಾಮಿ ಪಾಪ ಏನು ಮಾತನಾಡುತ್ತಾರೆ ಎಂದು ಅವರಿಗೆ ಗೊತ್ತಾಗುತ್ತಿಲ್ಲ. ಮಾತನಾಡುವ ಮೊದಲು ಸ್ವಲ್ಪ ಪ್ರಜ್ಞೆ ಇಟ್ಟುಗೊಂಡು ಮಾತನಾಡಲಿ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಿಜೆಪಿಗೆ ಮತ ನೀಡಲು ಹೇಳಿದ್ದು, ಕುಮಾರಸ್ವಾಮಿ ಎಂದು ಜಿ.ಟಿ. ದೇವೇಗೌಡರ ಹೇಳಿಕೆ ಮೂಲಕವೇ ಗೊತ್ತಾಗುತ್ತದೆ.  ಸತ್ಯ ಹೇಳಿದ ಮೇಲೆ ನಾಟಕ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಅತ್ಯಂತ ಕೆಟ್ಟದಾಗಿತ್ತು ಎಂದು ಸ್ವತಃ ತಾವೇ ಕುಮಾರಸ್ವಾಮಿಯೇ ಸತ್ಯ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರ ಸರ್ಕಾರಕ್ಕೆ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಾನೇನೂ ಹೇಳಿಲ್ಲ, ಎಲ್ಲವನ್ನೂ ಅವರೇ ಒಪ್ಪಿಕೊಂಡಿದ್ದಾರೆ. ಈ ಹೇಳಿಕೆಗೆ ನಾನೇಕೆ ಪ್ರತಿಕ್ರಿಯೆ ನೀಡಲಿ ಸಿದ್ದರಾಮಯ್ಯ ಹೇಳಿದರು.

ಸಿದ್ದು ಹೇಳಿಕೆಗೆ ಎಚ್‌ಡಿಕೆ ಗರಂ

ಸಿದ್ದರಾಮಯ್ಯ ಟ್ವೀಟ್‌ಗೆ ಜೆಡಿಎಸ್ ಮಾಜಿ ಮುಖ್ಯಮಂತ್ರಿ ಎಚ್.ಡಿಕೆ ಗರಂ ಆಗಿ ಪ್ರತಿಕ್ರಿಯಿಸಿದ್ದು, ನಾನು ಸಿದ್ದರಾಮಯ್ಯ ಸಾಕಿರುವ ಗಿಣಿ ಅಲ್ಲ ರಾಮನಗರ ಜಿಲ್ಲೆಯ ಜನ ನನ್ನನ್ನ ಬೆಳೆಸಿದ್ದಾರೆಯೇ ಹೊರತು ಸಿದ್ದರಾಮಯ್ಯನವರಿಂದ ನಾನೇನು ಬೆಳೆದಿಲ್ಲ ದೇವೇಗೌಡರು ಸಿದ್ದರಾಮಯ್ಯ ನವರಂತಹ ಗಿಣಿಗಳನ್ನ ಸಾಕಷ್ಟು ಬೆಳೆಸಿದ್ದಾರೆ ಆದರೆ ಅವುಗಳೇ ಹೇಗೆ ಕುಕ್ಕಿದ್ದಾವೆಂದು ನನಗೆ ಗೊತ್ತಿದೆ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಿಂದ ಸಿಎಂ ಆಗಿದ್ದೆನೇ ಹೊರತು ನಾನು ಸಿದ್ದರಾಮಯ್ಯರಿಂದ ಸಿಎಂ ಆಗಲಿಲ್ಲ ಸಿದ್ದರಾಮಯ್ಯನವರು ಅದನ್ನು ಸಹಿಸಿಕೊಳ್ಳಲಾರದೇ ಸರ್ಕಾರವನ್ನ ಕೆಡವಲು ಅವರೇ ಮುಂದಾದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಾವಾದರೂ ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ ಇವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ, ಅಲ್ಲಿನ ಶಕ್ತಿಯನ್ನ ಧಾರೆ ಎರೆಸಿಕೊಂಡು ಬೆಳೆದವರು ಅವರಿಗೆ ಶಕ್ತಿ ಇದ್ದರೆ ಕಾಂಗ್ರೆಸ್‌ನಿಂದ ಹೊರಬಂದು ಪಕ್ಷ ಕಟ್ಟಿ ಬೆಳೆಸಲಿ ಎಂದು ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯಗೆ ಪಂಥಾಹ್ವಾನ ನೀಡಿದರು.

ಯಾರದ್ದೋ ದುಡ್ಡು, ಯಾರದ್ದೋ ಜನರೆದುರು ಬೆಳೆದು ಬಂದಿರುವವರು ಸಿದ್ದರಾಮಯ್ಯ ಅವರನ್ನ ಒಂದು ಶಕ್ತಿಯಾಗಿ ಬೆಳೆಸಿದ್ದು ದೇವೇಗೌಡರು. ಸಿದ್ದರಾಮಯ್ಯ ನವರ ಕಾರ್ಯಕ್ರಮಕ್ಕೆ ನನ್ನ ಜನ, ನನ್ನ ಹಣವನ್ನ ಖರ್ಚು ಮಾಡಿದ್ದೇನೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಪಕ್ಷದ ಅಧ್ಯಕ್ಷರಾಗಿದ್ದರು. ಆದರೆ, ಬ್ಯಾನರ್ ನಲ್ಲಿ ಫೋಟೋ ಹಾಕಿಲ್ಲ ಅಂತಾ ಮುನಿಸಿಕೊಂಡು ಮನೆಲೀ ಕುಳಿತಿದ್ದರು ಎಂದು ಕುಟುಕಿದರು.

 

ಫ್ರೆಶ್ ನ್ಯೂಸ್

Latest Posts

Featured Videos