ಡಿಕೆಶಿ ಇಲ್ಲದೆ ಕಾಂಗ್ರೆಸ್ಗೆ ಕೊರತೆ

ಡಿಕೆಶಿ ಇಲ್ಲದೆ ಕಾಂಗ್ರೆಸ್ಗೆ ಕೊರತೆ

ಬೆಂಗಳೂರು, ಸೆ. 22 : ಉಪಚುನಾವಣೆ ಹಾಗೂ ಪಕ್ಷದಲ್ಲಿನ ಕಠಿಣ ಸವಾಲುಗಳೆಂದರೆ ಮೊದಲು ನೆನಪಾಗುತ್ತಿದ್ದದ್ದೇ ಡಿಕೆಶಿ ಜಾರಿನಿರ್ದೇಶನಾಲಯದ ಬಲೆಗೆ ಸಿಲುಕಿ ನ್ಯಾಯಾಂಗ ಬಂಧನದಲ್ಲಿರುವ ಡಿಕೆಶಿ ಅನುಪಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಉಪ ಚುನಾವಣೆ ಎದುರಿಸುತ್ತಿದೆ.
ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಮುಂಚೂಣಿಗೆ ಬಂದ ಡಿ.ಕೆ.ಶಿವಕುಮಾರ್ ಪ್ರತಿ ಹಂತದಲ್ಲೂ ತಾವೇ ಮುನ್ನುಗ್ಗಿ ಚುನಾವಣೆಗಳ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದರು. ಶ್ರೀರಾಮುಲು ರಾಜೀನಾಮೆಯಿಂದ ತೆರವಾಗಿದ್ದ ಬಳ್ಳಾರಿ ಗ್ರಾಮೀಣ ಚುನಾವಣೆ, ಅನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಗಣಿ ದಣಿಗಳ ಭದ್ರಕೋಟೆಯನ್ನು ಭೇದಿಸಿ ಸುಮಾರು 25 ವರ್ಷಗಳ ನಂತರ ಕಾಂಗ್ರೆಸ್ ಬಾವುಟ ಹಾರಿಸಿದ ಡಿ.ಕೆ.ಶಿವಕುಮಾರ್ ಸವಾಲಿಗೆ ಎದೆಯೊಡ್ಡುವ ದಿಟ್ಟ ನಾಯಕ ಎಂಬ ಹೆಸರು ಗಳಿಸಿದ್ದರು.
ಆಪರೇಷನ್ ಕಮಲದಂತಹ ಕಠಿಣ ಪರಿಸ್ಥಿತಿಗಳಲ್ಲಿ ಶಾಸಕರನ್ನು ರಕ್ಷಿಸುವಲ್ಲಿ, ಪಕ್ಷ ಸಂಘಟನೆ ಮಾಡುವುದಾಗಲಿ, ಚುನಾವಣೆ ಹಾಗೂ ಉಪ ಚುನಾವಣೆಗಳನ್ನು ಎದುರಿಸುವುದಾಗಲಿ ಡಿಕೆಶಿ ಕಾಂಗ್ರೆಸ್ ಪಾಲಿಗೆ ಆಪದ್ಬಾಂಧವರಾಗಿದ್ದರು.
ಪ್ರತಿ ಹಂತದಲ್ಲೂ ಕಾಂಗ್ರೆಸ್ ಹೈಕಮಾಂಡೇ ನೇರವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಜವಾಬ್ದಾರಿಗಳನ್ನು ವಹಿಸುತ್ತಿತ್ತು. ಗುಂಡ್ಲುಪೇಟೆ, ನಂಜನಗೂಡು, ಬಳ್ಳಾರಿ, ರಾಮನಗರ, ಕುಂದಗೋಳ ಸೇರಿದಂತೆ ಹಲವು ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿನ ಕ್ರೆಡಿಟನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಗಿತ್ತು.
ಚುನಾವಣೆ ರಣತಂತ್ರ ರೂಪಿಸುವಲ್ಲಿ ಡಿಕೆಶಿ ಎತ್ತಿದ ಕೈ ಎಂಬ ಪ್ರತೀತಿ ಇದೆ. ಕೇವಲ ಕಾಂಗ್ರೆಸಿಗರಿಗಷ್ಟೇ ಸಮಾಲೋಚನೆ ಮಾಡುತ್ತಿರಲಿಲ್ಲ. ಚುನಾವಣೆ ಎಂದರೆ ವಿರೋಧ ಪಕ್ಷಗಳ ಕಾರ್ಯಕರ್ತರನ್ನೂ ಸೆಳೆದುಕೊಳ್ಳುತ್ತಿದ್ದರು. ಗ್ರಾಮ ಪಂಚಾಯ್ತಿಯಿಂದ ಇಡಿದು ಶಾಸಕರು, ಸಂಸದರವರೆಗೂ ಸಂಪರ್ಕ ಸಾಧಿಸಿ ನಾನಾ ರೀತಿಯ ಕಸರತ್ತುಗಳನ್ನು ನಡೆಸಿ ಶತಾಯಗತಾಯ ಪಕ್ಷ ಗೆಲ್ಲಿಸುತ್ತಾರೆ ಎಂಬ ಮಾತುಗಳು ಜನಜನಿತವಾಗಿದ್ದವು.
ಇತ್ತೀಚೆಗೆ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ವೇಳೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ 17 ಮಂದಿ ಶಾಸಕರಿಗೆ ಸದನದ ಹೊರಗೆ, ಒಳಗೆ ಸಾಕಷ್ಟು ತಿಳಿ ಹೇಳಿದ್ದ ಡಿ.ಕೆ.ಶಿವಕುಮಾರ್ ಕೊನೆಗೆ ಸವಾಲು ಕೂಡ ಹಾಕಿದ್ದರು.
ಪಕ್ಷ ದ್ರೋಹ ಮಾಡಿದ ನಿಮ್ಮನ್ನು ರಣರಂಗ (ಚುನಾವಣಾ ಕಣ)ದಲ್ಲಿ ಭೇಟಿ ಮಾಡುತ್ತೇನೆ ಎಂದು ತೊಡೆ ತಟ್ಟಿದ್ದರು. ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಎದುರು ನಿಂತು ಹೋರಾಡಲು ಡಿ.ಕೆ.ಶಿವಕುಮಾರ್ ಅವರೇ ಹೊರಗಿಲ್ಲ.
ಸೆ.25ರಂದು ಅವರ ಜಾಮೀನು ಅರ್ಜಿಯ ವಿಚಾರಣೆ ಇದೆ. ಜಾಮೀನು ಸಿಗಲಿದೆಯೇ ಇಲ್ಲವೋ ಎಂಬ ಗೊಂದಲ ಕಾಡುತ್ತಿದೆ. ಒಂದು ವೇಳೆ ಜಾಮೀನು ಸಿಕ್ಕರೂ ಈಗಾಗಲೇ ಮಾನಸಿಕವಾಗಿ ಜರ್ಜತಿರಾಗಿರುವ ಡಿ.ಕೆ.ಶಿವಕುಮಾರ್ ಈ ಮೊದಲಿನಂತೆ ಉತ್ಸಾಹದಲ್ಲಿ ಚುನಾವಣೆಗೆ ಸಜ್ಜುಗೊಳ್ಳುತ್ತಾರ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಒಟ್ಟಿನಲ್ಲಿ ಬಿಜೆಪಿ ಸರ್ಕಾರದ ಅಸ್ಥಿತ್ವನ್ನು ನಿರ್ಧರಿಸುವ ಉಪ ಚುನಾವಣೆಯಲ್ಲಿ ಟ್ರಬಲ್ ಶೂಟರ್ ಅನುಪಸ್ಥಿತಿ ಕಾಂಗ್ರೆಸನ್ನು ತೀವ್ರವಾಗಿ ಕಾಡುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos