ರಾಜ್ಯದಲ್ಲಿ ಜಾಹೀರಾತುಗಳ ವಾರ್:‌ ಡಿಕೆಶಿ ವಾಗ್ದಾಳಿ

ರಾಜ್ಯದಲ್ಲಿ ಜಾಹೀರಾತುಗಳ ವಾರ್:‌ ಡಿಕೆಶಿ ವಾಗ್ದಾಳಿ

ಬೆಂಗಳೂರು: ಚೊಂಬು ಜಾಹೀರಾತು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ವಿರುದ್ಧ ಜಾಹೀರಾತು ನೀಡಿದ್ದಾರೆ. ತಾವು ಮಾಡಿದ ಪಿಕ್‌ಪಾಕೆಟ್ ಅನ್ನು ನಮ್ಮ ಮೇಲೆ ಹಾಕ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿದಾಳಿ ಮಾಡಿದರು.

ಬೆಂಗಳೂರಿನ ಸದಾಶಿವ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಜಾಹೀರಾತಿನ ವಿರುದ್ಧ ವಾಗ್ದಾಳಿ ಮಾಡಿದರು. ಇಂದು ಪತ್ರಿಕಾ ಜಾಹೀರಾತಿನಲ್ಲಿ ಬಿಜೆಪಿ ಮತ್ತೆ ಕಾಂಗ್ರೆಸ್ ‘ಚೊಂಬು’ ಜಾಹೀರಾತಿನ ವಿರುದ್ಧ ಮತ್ತೊಂದು ಜಾಹೀರಾತನ್ನು ನೀಡಿದೆ. ಜಾಹೀರಾತಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡ ಬಿಜೆಪಿ ‘ಕೊಟ್ಟಿದ್ದಕ್ಕಿಂತ ದೋಚಿದ್ದೇ ಜಾಸ್ತಿ ಕಾಂಗ್ರೆಸ್ ಡೇಂಜರ್’ ಎಂದಿದೆ.

ಕೆಲ ದಿನಗಳಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಜಾಹೀರಾತು ದಾಳಿಗಿಳಿದಿವೆ. ‘ಚೊಂಬು’ ಜಾಹೀರಾತು ನೀಡುವ ಮೂಲಕ ಕಾಂಗ್ರೆಸ್ ಬಿಜೆಪಿ ವಿರುದ್ಧ ನೇರದಾಳಿ ಆರಂಭಿಸಿತು. ಇದಕ್ಕೆ ಸಾಕಷ್ಟು ಕಮಲ ದಳಪತಿಗಳು ತಿರುಗೇಟು ನೀಡಿದರು.

ಭಾನುವಾರವೂ ಬಿಜೆಪಿ ವಿರುದ್ಧ ಜಾಹೀರಾತನ್ನು ಪ್ರಕಟಿಸಿದೆ. ಇದರಲ್ಲಿ ಮೋದಿ ಸರ್ಕಾರ ರಾಜ್ಯಕ್ಕೆ ತೆರಿಗೆ ಹಣ ವಂಚನೆ ಮಾಡಿದೆ. ಚುನಾವಣೆಗೂ ಮುನ್ನ ನೀಡಿದ ಭರವಸೆಗಳಾದ ನಿರುದ್ಯೋಗ ಸಮಸ್ಯೆ, ರೈತರ ಖಾತೆಗೆ ಹಣ ಜಮಾವಣೆ ಆಗಿಲ್ಲ. ಈ ಮೂಲಕ ಮೋದಿ ಸರ್ಕಾರ ಅನ್ಯಾಯ ಮಾಡಿ ‘ಚೊಂಬು’ ನೀಡಿದೆ ಎಂದು ಜಾಹೀರಾತಿನಲ್ಲಿ ದಾಳಿ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯಾಗಿ ನಿನ್ನೆ ಬಿಜೆಪಿ ಪತ್ರಿಕೆ ಜಾಹೀರಾತು ನೀಡಿ ‘ಡೇಂಜರ್ ಕಾಂಗ್ರೆಸ್’ ಎಂದು ಕರೆದಿತ್ತು. ರಾಜ್ಯದಲ್ಲಿ ಆಗುವ ಬಾಂಬ್ ಸ್ಪೋಟಗಳಿಗೆ ಲವ್ ಜಿಹಾದ್ ಗೆ ಕಾಂಗ್ರೆಸ್‌ ಕುಮ್ಮಕ್ಕು ಇದೆ ಎಂದು ಬಿಜೆಪಿ ಜಾಹೀರಾತಿನಲ್ಲಿ ದೂರಿತ್ತು. ಇದರಿಂದ ಪಾರಾಗಲು ಬಿಜೆಪಿಯನ್ನು ಗೆಲ್ಲಿಸಿ ಎಂದು ಮತಯಾಚನೆ ಮಾಡಿತ್ತು.

ಇಂದೂ ಕೂಡ ಬಿಜೆಪಿ ಪತ್ರಿಕಾ ಜಾಹೀರಾತಿನಲ್ಲಿ ಕಾಂಗ್ರೆಸ್‌ ಅನ್ನು ಪಿಕ್‌ಪಾಕೆಟ್ ಎಂದು ಕರೆದಿದೆ. ಇದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಜೆಪಿಗೆ ತಿರುಗೇಟು ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos