ದೇಶದ ಎಲ್ಲಾ ನಾಗರಿಕರು ಸಮಾನರು: ಡಿ.ಕೆ.ಶಿವಕುಮಾರ್

ದೇಶದ ಎಲ್ಲಾ ನಾಗರಿಕರು ಸಮಾನರು: ಡಿ.ಕೆ.ಶಿವಕುಮಾರ್

ಬೆಂಗಳೂರು: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದ್ದು, ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಅದೇ ದಿನ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಪ್ರಚಾರ ಬಿರುಸುಗೊಂಡಿದ್ದು, ಬಹಿರಂಗ ಪ್ರಚಾರಕ್ಕೆ ತೆರೆಬೀಳಲು ಇನ್ನೆರಡೇ ದಿನ ಬಾಕಿ ಇದೆ. ಕರ್ನಾಟಕದಲ್ಲಿ ಪ್ರಚಾರದ ಶೈಲಿ ತುಸು ಭಿನ್ನವಾಗಿದೆ! ರ್ಯಾಲಿ ಸಮಾವೇಶಗಳಷ್ಟೇ ಅಲ್ಲದೆ ಕ್ರಿಯಾಶೀಲ ಜಾಹೀರಾತು, ಟ್ವೀಟ್​ಗಳ ಮೂಲಕವೂ ರಾಜಕೀಯ ಪಕ್ಷಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮ ಮಿತ್ರರೊಂದಿಗೆ ಮಾತಾನಾಡಿದ ಶಿವಕುಮಾರ್ ಅವರು, ಇಂದಿನ ಪತ್ರಿಕೆಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ನೀಡಿರುವ ಜಾಹೀರಾತಿನ ಬಗ್ಗೆ ಮಾಧ್ಯಮಗಳು ಕೇಳಿದಾಗ, “ಕರ್ನಾಟಕದ ಜನರಿಗೆ ಬಿಜೆಪಿ ಬಹಳ ಅನ್ಯಾಯ ಮಾಡಿದೆ ಎಂದು ಈ ಹಿಂದೆ ದೇವೇಗೌಡರು, ಕುಮಾರಸ್ವಾಮಿ ಇಬ್ಬರೂ ಭಾಷಣ ಮಾಡಿದ್ದರು. 15 ಲಕ್ಷ ಹಣ ಎಷ್ಟು ಜನರ ಖಾತೆಗೆ ಹೋಗಿದೆ, ಎಷ್ಟು ಉದ್ಯೋಗ ಸಿಕ್ಕಿದೆ ಎಂದು ನಾನು, ಸಿದ್ದರಾಮಯ್ಯ ಅವರು ಹಾಗೂ ಎಲ್ಲಾ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಮೊದಲು ಉತ್ತರಿಸಲಿ” ಎಂದು ತಿಳಿಸಿದರು.

ಬಿಜೆಪಿಯವರು ಚಿಪ್ಪು ಅಭಿಯಾನ ಮಾಡುತ್ತಿದ್ದಾರೆ ಎಂದಾಗ “ನಾವು ಚಿಪ್ಪು ಕೊಟ್ಟಿಲ್ಲ. ಕನ್ನಡದ ಬಾವುಟ ಹಿಡಿದು ಹೋರಾಟ ಮಾಡುವವರು ನಾವು, ಕನ್ನಡಿಗರ ಪರವಾಗಿ ನಮ್ಮ ತೆರಿಗೆ, ನಮ್ಮ ಹಕ್ಕು ಹೋರಾಟ ಮಾಡಿದ್ದೇವೆ” ಎಂದರು.

“ಮಾನ್ಯ ಪ್ರಧಾನಿಗಳು ಈ ದೇಶದ ಮಹತ್ವದ ಹುದ್ದೆಯಲ್ಲಿ ಕುಳಿತಿರುವವರು. ಸಂವಿಧಾನವನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅವರಿಗೆ ಈ ದೇಶದ ಎಲ್ಲಾ ನಾಗರಿಕರು ಸಮಾನರು ಎನ್ನುವ ಅರಿವು ಇರಬೇಕು. ಬೇಧ, ಭಾವ ಮಾಡುವುದು ಅವರ ಹುದ್ದೆಗೆ ಶೋಭೆ ತರುವುದಿಲ್ಲ. ಇದು ಇಡೀ ದೇಶ ಮತ್ತು ಪ್ರಪಂಚಕ್ಕೆ ಕೆಟ್ಟ ಸಂದೇಶವನ್ನು ನೀಡಿದಂತಾಗುತ್ತದೆ” ಎಂದರು. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಸಂವಿಧಾನದ ಪ್ರಕಾರ ನಡೆಯುತ್ತಿದ್ದೇವೆ. ಆದ ಕಾರಣ ಯಾವುದೇ ಅಪರಾಧ ಪ್ರಕರಣ ನಡೆದರೂ ಯಾರನ್ನೂ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ” ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos