ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಲವು ಸವಾಲು!

ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಲವು ಸವಾಲು!

ದೇವನಹಳ್ಳಿ, ಸೆ. 18: ಬಿಜೆಪಿ ಸರ್ಕಾರ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ಅವರನ್ನು ಸರ್ಕಾರ ನೇಮಕ ಮಾಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳನ್ನು ಒಳಗೊಂಡಿದ್ದು, ಸತತ ಬರಗಾಲವನ್ನು ಎದುರಿಸುತ್ತಿದೆ. ಇಲ್ಲಿ ಯಾವುದೇ ನದಿಮೂಲಗಳಿಲ್ಲದೆ ನೀರಿನ ಸಮಸ್ಯೆ ಹೆಚ್ಚು ಇದೆ. ಎತ್ತಿನಹೊಳೆ ಮತ್ತು ಎಚ್.ಎನ್. ವ್ಯಾಲಿ ನೀರಿನ ಯೋಜನೆಗಳನ್ನು ಯಾವಾಗ ಕಾರ್ಯಗತ ಮಾಡಿ, ರೈತರಿಗೆ ಅನುಕೂಲವಾಗುವಂತೆ ಆಗುತ್ತದೆ ಎಂಬುವುದರ ಬಗ್ಗೆ ರೈತರ ಪ್ರಶ್ನೆಯಾಗಿದೆ.

ಮೈತ್ರಿ ಸರ್ಕಾರದಲ್ಲಿ ಹೊಸಕೋಟೆ ಕ್ಷೇತ್ರದ ಶಾಸಕರಾಗಿದ್ದ ಎಂಟಿಬಿ ನಾಗರಾಜು ಸಚಿವರಾದ ಮೇಲೆ ಅವರಿಗೆ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಕೃಷ್ಣ ಭೈರೇಗೌಡ ಉಸ್ತುವಾರಿ ಸಚಿವರಾಗಿದ್ದರು.

ಇದರ ನಂತರ ಮೈತ್ರಿ ಸರ್ಕಾರದಲ್ಲೂ ಸಹ ಕೃಷ್ಣಭೈರೇಗೌಡ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿತ್ತು. ಜಿಲ್ಲೆಗೆ ಅನ್ಯ ಜಿಲ್ಲೆಯವರು ಹೊಣೆಗಾರಿಗೆ ಹೊತ್ತುಕೊಳ್ಳುತ್ತಿರುವುದು ಇದೇನು ಮೊದಲೇನಲ್ಲ, ಈ ಮುಂಚೆ ಕಾಂಗ್ರೆಸ್ ಸರ್ಕಾರ ಅಸ್ಥಿತ್ವದಲ್ಲಿದ್ದಾಗಲೂ ಸಹ ಜಿಲ್ಲಾ ಉಸ್ತುವಾರಿಯನ್ನು ಕೃಷ್ಣಭೈರೇಗೌಡ ಅವರಿಗೆ ವಹಿಸಲಾಗಿತ್ತು. ವಿಪರ್ಯಾಸವೆಂದರೆ, ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಗೊಂಡ ಕೆಲವೇ ತಿಂಗಳುಗಳಲ್ಲಿ ಬಂಡಾಯ ಎದ್ದ ಪರಿಣಾಮ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ.

ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯ ಹೆಚ್ಚು ಇರುವ ಹಿನ್ನಲೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಲ್ಲಿಟ್ಟುಕೊಂಡು ಆರ್.ಅಶೋಕ್ ಅವರಿಗೆ ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ. ನಾಲ್ಕು ತಾಲೂಕುಗಳ ಪೈಕಿ ದೇವನಹಳ್ಳಿ ಮತ್ತು ನೆಲಮಂಗಲದಲ್ಲಿ ಜೆಡಿಎಸ್ ಶಾಸಕರುಗಳು, ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕರು, ಹೊಸಕೋಟೆಯಲ್ಲಿ ಕಾಂಗ್ರೆಸ್‌ನಿಂದ ವಿಜೇತರಾಗಿದ್ದ ಎಂಟಿಬಿ ನಾಗರಾಜ್ ರಾಜೀನಾಮೆ ನೀಡಿ ಅನರ್ಹಗೊಂಡಿದ್ದಾರೆ. ಅಶೋಕ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೊತೆಯಲ್ಲಿ ಜೆಡಿಎಸ್ ಭದ್ರಕೋಟೆಯಂದೇ ಗುರ್ತಿಸಿಕೊಂಡಿರುವ ಮಂಢ್ಯ ಜಿಲ್ಲೆಯನ್ನು ಸಹ ಹೆಚ್ಚುವರಿಯಾಗಿ ನೀಡಿದೆ.

ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಮತ್ತು ಪಕ್ಷ ಸಂಘಟನೆಯ ಜವಾಬ್ದಾರಿ ಹೆಚ್ಚು ಇರುತ್ತದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos