ಬನ್ನೇರುಘಟ್ಟದಲ್ಲಿ ಮುಂದುವರೆದ ಜಿಂಕೆಗಳ ಸಾವು!

ಬನ್ನೇರುಘಟ್ಟದಲ್ಲಿ ಮುಂದುವರೆದ ಜಿಂಕೆಗಳ ಸಾವು!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಾಣಿಗಳು ಕಾಡನ್ನು ಬಿಟ್ಟು ನಾಡಿಗೆ ಬರುವುದನ್ನು ಎಲ್ಲರೂ ಗಮನಿಸಿದ್ದೇವೆ ಏಕೆಂದರೆ ನಾವು ಮನುಷ್ಯರು ಕಾಡನ್ನೆಲ್ಲ ನಾಶ ಮಾಡಿ ಮನೆಗಳನ್ನು ಹಾಗೂ ಹಲವಾರು ವಿವಿಧ ಕೈಗಾರಿಕೆಗಳನ್ನು ಸ್ಥಾಪನೆ ಮಾಡುತ್ತಿದ್ದೇವೆ ನಾವು ಕಾಡನ್ನು ನಾಶ ಮಾಡಿದರೆ ಪ್ರಾಣಿಗಳು ಎಲ್ಲಿ ವಾಸ ಮಾಡುತ್ತವೆ ಆದ್ದರಿಂದ ಪ್ರಾಣಿಗಳು ಆಹಾರ ಹುಡುಕಿಕೊಂಡು ಊರುಗಳತ್ತ ಬರುತ್ತಿದ್ದಾವೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ಸರಣಿ ಸಾವು ಮುಂದುವರೆದಿದೆ. ಮಾರಕ ವೈರಸ್ ನಿಂದ ಚಿರತೆ ಮರಿಗಳ ಸಾವಿನ ಪ್ರಕರಣ ಮಾಸುವ ಮುನ್ನವೇ ಜಿಂಕೆಗಳ ಸರಣಿ ಸಾವು ಸಂಭವಿಸುತ್ತಿದೆ. ಮಾರಕ ವೈರಸ್ನಿಂದಾಗಿ ಏಳು ಚಿರತೆ ಮರಿಗಳು ಮೃತಪಟ್ಟಿದ್ದವು. ಇದಾದ ಬಳಿಕ 13 ಜಿಂಕೆಗಳ ಸಾವಿನ ಬಗ್ಗೆ ವರದಿಯಾಗಿತ್ತು. ಆದ್ರೆ ಇದೀಗ ಆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಒಟ್ಟು ಜಿಂಕೆಗಳ ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ಮೂಲಕ ಬನ್ನೇರುಘಟ್ಟದಲ್ಲಿ ಸೂತಕದ ಛಾಯೆ ಆವರಿಸಿದೆ.
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಳೆದೊಂದು ವಾರದಿಂದ ಪ್ರಾಣಿಗಳ ಸರಣಿ ಸಾವು ಸಂಭವಿಸುತ್ತಿದೆ. ಮಾರಕ ವೈರಸ್ಗೆ ತುತ್ತಾಗಿ ಏಳು ಚಿರತೆ ಮರಿಗಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಸಸ್ಯಹಾರಿ ಸಫಾರಿಯಲ್ಲಿದ್ದ ಜಿಂಕೆಗಳ ಸರಣಿ ಸಾವಾಗುತ್ತಿದೆ. ದಿನಕ್ಕೆ ಎರಡು ಮೂರರಂತೆ ಜಿಂಕೆಗಳ ಸರಣಿ ಸಾವಾಗುತ್ತಿದೆ.
ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯ ಉದ್ಯಾನವನದಲ್ಲಿದ್ದ 37 ಜಿಂಕೆಗಳು ಕಿರಿದಾದ ಜಾಗದಲ್ಲಿ ಸರಿಯಾದ ಆರೈಕೆ ಹಾಗೂ ಆಹಾರದ ಸಮಸ್ಯೆಯಿಂದಾಗಿ ಬಳಲಿದ್ದವು. ಈ ಹಿನ್ನೆಲೆ ಅವುಗಳನ್ನ ಕಳೆದ ಆಗಸ್ಟ್ 17ರಂದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಕಳೆದ ಏಳೆಂಟು ದಿನಗಳಿಂದ ಬನ್ನೇರುಘಟ್ಟದ ಸಸ್ಯಹಾರಿ ಸಫಾರಿಯ ಕ್ವಾರೆಂಟೈನ್ ಜಾಗದಲ್ಲಿ ಜಿಂಕೆಗಳನ್ನ ನೋಡಿಕೊಳ್ಳಲಾಗಿತ್ತು. ಬಳಿಕ ಅವುಗಳನ್ನ ಸಸ್ಯಹಾರಿ ಸಫಾರಿಗೆ ಬಿಟ್ಟಿದ್ದು ಹಿಂಡುಗಳ ಕಾದಾಟ ಹಾಗೂ ಜಂತುಹುಳು ಸಮಸ್ಯೆಯಿಂದ 37 ಜಿಂಕೆಗಳ ಪೈಕಿ ಒಟ್ಟು 16 ಜಿಂಕೆಗಳು ಮೃತಪಟ್ಟಿವೆ. ಮೃತಪಟ್ಟ ಜಿಂಕೆಗಳ ಹೊಟ್ಟೆಯ ಕೆಲಭಾಗದಲ್ಲಿ ಭಾರಿ ಗಾತ್ರದ ಊತ ಕಾಣಿಸಿಕೊಂಡಿದ್ದು, ಅವುಗಳ ಮರಣೋತ್ತರ ಪರೀಕ್ಷೆ ನಡೆಸಿ ವರದಿಯ ನಿರೀಕ್ಷೆಯಲ್ಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos