RCB ಚೊಚ್ಚಲ ಟ್ರೋಫಿ: ಬೀದಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳೂ

RCB ಚೊಚ್ಚಲ ಟ್ರೋಫಿ: ಬೀದಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳೂ

ಬೆಂಗಳೂರು: ಡಬ್ಲ್ಯೂಪಿಎಲ್‌ ಎರಡನೇ ಆವೃತ್ತಿ ಅಂತ್ಯಗೊಂಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮೊದಲ ಟ್ರೋಫಿ ಗೆದ್ದು ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು  ಅಭಿಮಾನಿಗಳ 16 ವರ್ಷಗಳ ಕನಸು ಕೊನೆಗೂ ಈಡೇರಿದೆ. ವುಮೆನ್ಸ್ ಪ್ರೀಮಿಯರ್ ಲೀಗ್ ಮೂಲಕ ಆರ್​ಸಿಬಿ ತಂಡವು ಚೊಚ್ಚಲ ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ. ಅತ್ತ ಆರ್​ಸಿಬಿ ಕಿರೀಟ ಮುಡಿಗೇರಿಸಿಕೊಳ್ಳುತ್ತಿದ್ದರೆ, ಇತ್ತ ರಾಯಲ್ ಚಾಲೆಂಜರ್ಸ್​ನ ರಾಯಲ್ ಅಭಿಮಾನಿಗಳು ಸಖತ್ತಾಗಿಯೇ ಸಂಭ್ರಮಿಸಿದ್ದಾರೆ. ಅದು ಕೂಡ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಎಂಬುದು ವಿಶೇಷ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಡೆಲ್ಲಿ ತಂಡಕ್ಕೆ ಶಫಾಲಿ ವರ್ಮಾ ಹಾಗೂ ಮೆಗ್ ಲ್ಯಾನಿಂಗ್ ಉತ್ತಮ ಆರಂಭ ಒದಗಿಸಿದ್ದರು.

ಮೊದಲ 7 ಓವರ್​ಗಳಲ್ಲಿ 64 ರನ್ ಬಾರಿಸಿ ಉತ್ತಮ ಆರಂಭ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆ ಬಳಿಕ ಸೋಫಿ ಮೊಲಿನೊ ಆಘಾತ ನೀಡಿದರು. 8ನೇ ಓವರ್​ನಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಸೋಫಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಇದಾದ ಬಳಿಕ ಲಯಕ್ಕೆ ಮರಳಿದ ಆರ್​ಸಿಬಿ ಬೌಲರ್​ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡದ ರನ್ ಗತಿಯನ್ನು ನಿಯಂತ್ರಿಸಿದರು. ಅದರಲ್ಲೂ 3.3 ಓವರ್​ಗಳನ್ನು ಎಸೆದು ಕೇವಲ 12 ರನ್ ನೀಡಿ 4 ವಿಕೆಟ್ ಕಬಳಿಸಿ ಶ್ರೇಯಾಂಕಾ ಪಾಟೀಲ್ ಮಿಂಚಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18.3 ಓವರ್​ಗಳಲ್ಲಿ 113 ರನ್​ಗಳಿಗೆ ಆಲೌಟ್ ಆಯಿತು.

114 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡಕ್ಕೆ ಸ್ಮೃತಿ ಮಂಧಾನ (31) ಹಾಗೂ ಸೋಫಿ ಡಿವೈನ್ (32) ಉತ್ತಮ ಆರಂಭ ಒದಗಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಲ್ಲಿಸ್ ಪೆರ್ರಿ ಅಜೇಯ 35 ರನ್ ಬಾರಿಸುವ ಮೂಲಕ 19.3 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಆರ್​ಸಿಬಿ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಫ್ರೆಶ್ ನ್ಯೂಸ್

Latest Posts

Featured Videos