ಮೃತ್ಯುಕೂಪವಾದ ಬೈಪಾಸ್- ರಾಷ್ಟ್ರೀಯ ಹೆದ್ದಾರಿ

ಮೃತ್ಯುಕೂಪವಾದ ಬೈಪಾಸ್- ರಾಷ್ಟ್ರೀಯ ಹೆದ್ದಾರಿ

ಧಾರವಾಡ, ಜ. 29: ಜ. 14ರಂದು ಟೆಂಪೋ- ಕಾರು ಮಧ್ಯೆ ಮುಖಾಮುಖಿ ಡಿಕ್ಕಿ… ಕೊಪ್ಪಳದ ಒಂದೇ ಕುಟುಂಬದ ನಾಲ್ವರ ದುರ್ಮರಣ. ಇಬ್ಬರಿಗೆ ಗಂಭೀರ ಗಾಯ. ಜ. 26ರಂದು 2 ಕಾರುಗಳ ಮುಖಾಮುಖಿ ಡಿಕ್ಕಿ… ಕುಂದಗೋಳ ಪಟ್ಟಣದ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ, ಕಾರು ಚಾಲಕ ಹಾಗೂ ಮತ್ತೊಂದು ಕಾರ್​ನಲ್ಲಿದ್ದ ಇಬ್ಬರ ಸಾವು. ಮೂವರಿಗೆ ಗಂಭೀರ ಗಾಯ.

ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡದ ನರೇಂದ್ರ ಕ್ರಾಸ್​ನಿಂದ ಹುಬ್ಬಳ್ಳಿಯ ಗಬ್ಬೂರವರೆಗಿನ ಬೈಪಾಸ್​ನಲ್ಲಿ ಇಂಥ ಭೀಕರ ಅಪಘಾತಗಳು ಮರುಕಳಿಸುತ್ತಲೇ ಇವೆ. ಬೈಕ್, ಕಾರ್, ಬಸ್, ಲಾರಿ ಅಪಘಾತ ಸಂಭವಿಸಿತೆಂದರೆ ಒಬ್ಬಿಬ್ಬರ ಪ್ರಾಣಕ್ಕೆ ಎರವಾಯಿತು ಎಂದೇ ಅರ್ಥ.

ತಿಂಗಳಿಗೊಂದೆರಡು ಅಪಘಾತ ಸಂಭವಿಸಿ, ಈ ಬೈಪಾಸ್ ಮೃತ್ಯುಕೂಪ ಎಂಬ ಅಪವಾದ ಕೇಳಿಬರುತ್ತಿದೆ.

ಬೈಪಾಸ್​ಅನ್ನು ಅಗಲ ಮಾಡಿ ಷಟ್ಪಥವಾಗಿಸುವ ಮಾತು ಕೇಳಿಬಂದಿತ್ತು. ಆದರೆ, ಇದು ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಇದಕ್ಕೆ ಕಾರಣ, ಬೈಪಾಸ್ ಗುತ್ತಿಗೆದಾರ ಕಂಪನಿ ನಂದಿ ಹೈವೇ ಡೆವಲಪರ್ಸ್ ಲಿ. (ಎನ್​ಎಚ್​ಡಿಎಲ್) ಕಂಪನಿ ಎಂಬ ಆರೋಪ ಕೇಳಿಬರತೊಡಗಿದೆ.

2024ರವರೆಗೆ: ಎನ್​ಎಚ್​ಡಿಎಲ್ 1998ರಲ್ಲಿ ಗುತ್ತಿಗೆ ಆಧಾರದಲ್ಲಿ ಬೈಪಾಸ್ ಪಡೆದಿದ್ದು, ಇದರ ಅವಧಿ 2024ರವರೆಗೆ ಇದೆ. 10 ಮೀ. ಅಗಲದ ಡಾಂಬರ್ ರಸ್ತೆಯಿದು. ಬೈಪಾಸ್ ಆರಂಭವಾದಾಗ ಕಡಿಮೆ ಇದ್ದ ವಾಹನಗಳ ದಟ್ಟಣೆ ಈಗ ಹತ್ತಾರು ಪಟ್ಟು ಹೆಚ್ಚಳವಾಗಿದೆ. ಆದರೆ ರಸ್ತೆಯ ಅಗಲ ಬಹುತೇಕ ಕಡೆಗಳಲ್ಲಿ ಅಷ್ಟೇ ಇದೆ.

ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸುವ ವಾಹನಗಳಿಗೆ ಚತುಷ್ಪಥ ರಸ್ತೆ ಇದೆ. ಅಲ್ಲಲ್ಲಿ 6 ಪಥದ ರಸ್ತೆ ನಿರ್ವಣವಾಗಿದ್ದು, ಕೆಲವೆಡೆ ಹೆದ್ದಾರಿ ಅಗಲೀಕರಣದ ಕಾಮಗಾರಿ ಪ್ರಗತಿಯಲ್ಲಿದೆ. ಹೆದ್ದಾರಿಯಲ್ಲಿ ವಾಹನಗಳು ಭಾರಿ ವೇಗದಲ್ಲಿ ಸಂಚರಿಸುತ್ತವೆ. ಸವಾರರು ಅದೇ ವೇಗದ ಮನಸ್ಥಿತಿಯೊಂದಿಗೆ ಬೈಪಾಸ್​ಅನ್ನೂ ಪ್ರವೇಶಿಸುತ್ತಾರೆ. 30 ಕಿ.ಮೀ. ಬೈಪಾಸ್ ದ್ವಿಪಥ ರಸ್ತೆಯಾಗಿದೆ. ಸಿವಿಲ್ ಇಂಜಿನಿಯರಿಂಗ್ ಪರಿಭಾಷೆಯಲ್ಲಿ ಇದು ‘ಬಾಟಲ್ ನೆಕ್’.

ಚತುಷ್ಪಥ ಹೆದ್ದಾರಿಯ ಮಧ್ಯೆ 30 ಕಿ.ಮೀ. ದ್ವಿಪಥ ಮಾರ್ಗ ಇರುವುದು ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ. ಬೈಪಾಸ್ ದಾಟಲು ಶುಲ್ಕ ಬೇರೆ ಹೊರೆ. ಬೈಪಾಸ್​ನಲ್ಲೂ 6 ಪಥದ ರಸ್ತೆಯಾಗಬೇಕು ಎಂಬ ಬೇಡಿಕೆಗೆ ಎನ್​ಎಚ್​ಡಿಎಲ್ ಸುಲಭದಲ್ಲಿ ಒಪ್ಪುತ್ತಿಲ್ಲ. ಹೀಗಾಗಿ ಈಗಿನ ವಾಹನ ದಟ್ಟಣೆ ಮತ್ತು ಆಚೀಚೆ ಚತುಷ್ಪಥ ಹೆದ್ದಾರಿ ಇರುವುದರಿಂದ ಇದು ಅವೈಜ್ಞಾನಿಕ ಬೈಪಾಸ್ ಆಗಿ, ಇಡೀ ಸುವರ್ಣ ಚತುಷ್ಪಥ ಹೆದ್ದಾರಿಗೆ ಕಳಂಕಪ್ರಾ ಯವಾಗಿದೆ.

ನಿಯಮಾವಳಿ ಸಲೀಸಲ್ಲ: ಈ ಹಿಂದೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು, ಎನ್​ಎಚ್​ಡಿಎಲ್ ಸ್ವತಃ ಚತುಷ್ಪಥ ರಸ್ತೆ ನಿರ್ವಿುಸಬೇಕು ಅಥವಾ ಬೈಪಾಸ್​ಅನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಎರಡರಲ್ಲಿ ಒಂದು ತೀರ್ಮಾನ ಅಂತಿಮಗೊಳಿಸಿ ಎಂದು ಕೇಂದ್ರ ಭೂಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಇದೇ ವಿಷಯವಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎನ್​ಎಚ್​ಡಿಎಲ್ ಕಂಪನಿಯೊಂದಿಗೆ ದೆಹಲಿಯಲ್ಲಿ 2-3 ಸಭೆ ನಡೆಸಿದ್ದಾರೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೈಪಾಸ್ ರಸ್ತೆಯನ್ನು ವಶಕ್ಕೆ ಪಡೆಯುವುದು ಅಷ್ಟು ಸಲೀಸಲ್ಲ. ಪೂರ್ತಿ ನಿಯಮಾವಳಿ ಪಾಲಿಸದೇ ಇದ್ದರೆ ಖಾಸಗಿ ಕಂಪನಿ ಕೋರ್ಟ್ ಕಟಕಟೆ ಹತ್ತದೇ ಬಿಡುವುದಿಲ್ಲ. ಗುತ್ತಿಗೆದಾರ ಕಂಪನಿಗೆ ಅಗಲೀಕರಣ ಬೇಕಾಗಿಲ್ಲ; ಬರೀ ಟೋಲ್ ಹಣ ಮಾತ್ರ ಬೇಕಾಗಿದೆ!

ವಾಹನಗಳ ಸಂಖ್ಯೆಗೆ ತಕ್ಕಂತೆ ರಸ್ತೆ ಅಗಲೀಕರಣ ಮಾಡದೇ, ಸರ್ಕಾರಕ್ಕೂ ಹಸ್ತಾಂತರಿಸಲು ಒಪ್ಪದೇ ಬಾಟಲ್ ನೆಕ್​ಅನ್ನು ಹಾಗೇ ಇಟ್ಟುಕೊಂಡಿರುವ ಖಾಸಗಿ ಕಂಪನಿ, ಪರೋಕ್ಷವಾಗಿ ಜೀವಹಾನಿಗೆ ಕಾರಣವಾಗುತ್ತಿದೆ.

800 ಕೋಟಿ ರೂ.ಗೆ ಬೇಡಿಕೆ?: ಈ ರಸ್ತೆಯಲ್ಲಿ ಪ್ರತಿದಿನ 10 ಲಕ್ಷ ರೂ.ದಂತೆ ವಾರ್ಷಿಕ 36 ಕೋಟಿ ಟೋಲ್ ಸಂಗ್ರಹವಾಗುವ ಅಂದಾಜಿದೆ. ಗುತ್ತಿಗೆದಾರ ಕಂಪನಿ ಇನ್ನೂ 4 ವರ್ಷ ಅವಧಿ ಹೊಂದಿದೆ. ಅಂದರೆ 2024ರವರೆಗೆ 144 ಕೋಟಿ ರೂ. ಟೋಲ್ ಸಂಗ್ರಹವಾಗುವ ಅಂದಾಜಿದೆ. ಆದರೆ ಕಂಪನಿ ಬೈಪಾಸ್ ಬಿಟ್ಟು ಕೊಡಲು 600- 800 ಕೋಟಿ ರೂ. ಬೇಡಿಕೆ ಇಟ್ಟಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಒಪ್ಪದ ಕೇಂದ್ರ- ರಾಜ್ಯ ಸರ್ಕಾರಗಳು ಪರಿಣತರು, ತಜ್ಞ ಸಲಹೆಗಾರರ ಅಭಿಪ್ರಾಯ ಪಡೆದು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿವೆ. ಸಕಾರಣವಿದ್ದರೆ ಬೈಪಾಸ್ ವಶಕ್ಕೆ ಪಡೆಯುವ ಅವಕಾಶವಿದೆ. ಆದರೆ, ಇನ್ನು ನಾಲ್ಕೇ ವರ್ಷ ಬಾಕಿ ಇರುವಾಗ ಎಲ್ಲ ಷರತ್ತುಗಳನ್ನು ಪಾಲಿಸುವುದು ಕಷ್ಟಸಾಧ್ಯ. ಗುತ್ತಿಗೆದಾರರು ಕೇಳಿದಷ್ಟು ಹಣ ಕೊಡುವುದು ವ್ಯಾವಹಾರಿಕವಲ್ಲ.

ಹೀಗಾಗಿ, ಪರ್ಯಾಯ ಕ್ರಮಗಳ ಚಿಂತನೆ ಅನಿವಾರ್ಯ ಎಂಬ ಅಭಿಪ್ರಾಯ ಮೇಲ್ಮಟ್ಟದ ಅಧಿಕಾರಿಗಳದ್ದು. ಅಂಥ ಕಾರ್ಯಸಾಧುವಾದ ಬೇರೆ ಉಪಾಯ ಇನ್ನೂ ತೀರ್ವನವಾಗಿಲ್ಲ.

ಕಲ್ಮೇಶ ಮಂಡ್ಯಾಳ

ಫ್ರೆಶ್ ನ್ಯೂಸ್

Latest Posts

Featured Videos