ʼಇಂಡಿಯಾʼ ಮಿತ್ರಪಕ್ಷಗಳ ಸಮನ್ವಯ ಸಮಿತಿ ರಚನೆ: ಡಿಸಿಎಂ

ʼಇಂಡಿಯಾʼ ಮಿತ್ರಪಕ್ಷಗಳ ಸಮನ್ವಯ ಸಮಿತಿ ರಚನೆ: ಡಿಸಿಎಂ

ಬೆಂಗಳೂರು: ಪ್ರಜಾಪ್ರಭುತ್ವದ ಹಬ್ಬ ಚುನಾವಣೆ ಬಂದಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ ಸುಮಾರು 10 ಪಕ್ಷಗಳು ಒಟ್ಟಿಗೆ ಸೇರಿ ಚುನಾವಣೆಯನ್ನು ಎದುರಿಸುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಮಿತ್ರ ಪಕ್ಷಗಳ ಬಲಾಬಲ ಎಷ್ಟಿದೆ ಎನ್ನುವುದು ಮುಖ್ಯವಲ್ಲ, ಬದಲಾಗಿ ಅವರ ತತ್ವ, ಸಿದ್ಧಾಂತ, ಅವರನ್ನು ಅನುಸರಿಸುವ ಜನರು ನಮಗೆ ಮುಖ್ಯ.

ಕೆಪಿಸಿಸಿ ಕಚೇರಿಯಲ್ಲಿ ʼಇಂಡಿಯಾʼ ಮಿತ್ರಪಕ್ಷಗಳ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತಾನಾಡಿದರು. ಬೆಂಗಳೂರು ನಗರದಲ್ಲಿ ಇಂಡಿಯಾ ಜನ್ಮತಾಳಿತು. ಈ ದೇಶದಲ್ಲಿ ಬದಲಾವಣೆ ಅನಿವಾರ್ಯ ಎಂದು ಮನಗಂಡು ಒಕ್ಕೂಟವನ್ನು ರಚನೆ ಮಾಡಲಾಯಿತು. ಕರ್ನಾಟಕದಲ್ಲಿ ಈ ಬದಲಾವಣೆ ಉಂಟಾಯಿತು. ನಂತರ ಅನೇಕ ಕಡೆ ಚುನಾವಣೆ ನಡೆಯಿತು. ಸೋಲು, ಗೆಲುವು ಎರಡನ್ನು ಕಂಡಿದ್ದೇವೆ.

2019 ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮತು ದಳ ಒಟ್ಟಾಗಿ ಚುನಾವಣೆ ಎದುರಿಸಿದ್ದೆವು. ತುಮಕೂರಿನಲ್ಲಿ ಸಿಪಿಐ ಪಕ್ಷವು 17 ಸಾವಿರ ಮತಗಳಿಸಿತ್ತು. ದೇವೇಗೌಡರು 12 ಸಾವಿರ ಮತಗಳಿಂದ ಸೋಲು ಕಂಡಿದ್ದರು. ಈ ರೀತಿಯ ವಿಂಗಡಣೆ ಆಗಬಾರದು ಎನ್ನುವುದು ನಮ್ಮೆಲ್ಲರ ಉದ್ದೇಶವಾಗಿದೆ. ನಾವೆಲ್ಲಾ ಒಟ್ಟಾಗಿ ಎನ್‌ ಡಿಎ ಸೋಲಿಸಬೇಕು ಎಂಬುದು ನಮ್ಮ ಏಕೈಕ ಉದ್ದೇಶ.

One man with courage is a majority ಎನ್ನುವ ಮಾತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆ. ಅಧಿಕಾರ ಇಲ್ಲದೇ ಇರಬಹುದು ಆದರೆ ಮಿತ್ರ ಪಕ್ಷಗಳ ಸಿದ್ಧಾಂತ, ಬದ್ದತೆ ಮುಖ್ಯವಾದುದು. ನಾವೆಲ್ಲ ಈ ಹಿಂದೆ ಅನೇಕ ಚುನಾವಣೆಗಳನ್ನು ಬೇರೆ, ಬೇರೆಯಾಗಿ ಎದುರಿಸಿದ್ದೇವೆ. ಆದರೆ ಇಂದು ದೇಶದ ಉಳಿವಿಗೆ ಒಂದಾಗಿದ್ದೇವೆ.

ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಪಕ್ಷ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಆದರೆ ಇತರೇ ಸಮೀಕ್ಷೆಗಳ ಪ್ರಕಾರ 28 ಸ್ಥಾನಗಳನ್ನೂ ನಾವು ಗೆಲ್ಲುತ್ತೇವೆ. ಎಲ್ಲಾ ಮಿತ್ರ ಪಕ್ಷಗಳನ್ನು ಸೇರಿಸಿ ಸಮನ್ವಯ ಸಮಿತಿ ರಚಿಸಲಾಗುವುದು. ಚುನಾವಣೆ ಮುಗಿಯುವ ತನಕ ಮೂರು ದಿನಗಳು ಅಥವಾ ವಾರಕ್ಕೊಮ್ಮೆ ಸಭೆ ಸೇರಲಾಗುವುದು. ಎಲ್ಲಾ ಮಿತ್ರ ಪಕ್ಷಗಳು ಪ್ರತಿ ಕ್ಷೇತ್ರದಲ್ಲೂ ನಮಗೆ ಬೆಂಬಲ ನೀಡುತ್ತೇವೆ ಎಂದು ಲಿಖಿತವಾಗಿ ಬರೆದುಕೊಟ್ಟಿವೆ. ಈ ಸಹಕಾರಕ್ಕೆ ಮುಖ್ಯಮಂತ್ರಿಗಳು ಹಾಗೂ ಎಲ್ಲರ ಪರವಾಗಿ ಅಭಿನಂದನೆ ತಿಳಿಸುತ್ತೇನೆ.

ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಲಾಭವಾಗುತ್ತದೆಯೇ ಎಂದಾಗ “28 ಕ್ಷೇತ್ರದಲ್ಲೂ ಅನುಕೂಲವಾಗಲಿದೆ. ರಾಜಕಾರಣದಲ್ಲಿ 49 ಎಂದರೆ ಸೊನ್ನೆ, 51 ಎಂದರೆ ನೂರು ಎಂದರ್ಥ. ಧ್ರುವನಾರಾಯಣ್ ಅವರು 1 ಮತದಿಂದ ಗೆದ್ದಿದ್ದರು. ದಿನೇಶ್ ಗುಂಡೂರಾವ್ ಅವರು ಅಲ್ಪ ಅಂತರದಲ್ಲೇ ಗೆದ್ದರು, ಸೌಮ್ಯರೆಡ್ಡಿ 16 ಮತಗಳಿಂದ ಸೋತರು. ಆದ ಕಾರಣ ಒಂದೊಂದು ಮತವೂ ಮುಖ್ಯ” ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos