ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ “ಬಿಜೆಪಿ ಹಾಗೂ ಜೆಡಿಎಸ್ ನವರು ಆತ್ಮಸಾಕ್ಷಿ ಮತಗಳನ್ನು ಕೇಳುತ್ತಿದ್ದರು. ಬಿಜೆಪಿಯವರೇ ಆತ್ಮಸಾಕ್ಷಿ ಮತ ಕೊಟ್ಟಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.
“ಬಿಜೆಪಿಯವರು ತಮ್ಮ ಅಭ್ಯರ್ಥಿ ಗೆಲುವಿಗೆ ಬೇಕಾದ 45 ಮತಗಳನ್ನು ಇಟ್ಟುಕೊಂಡು ಉಳಿದ ಮತಗಳನ್ನು ಜೆಡಿಎಸ್ ಪಕ್ಷಕ್ಕೆ ನೀಡಬಹುದಿತ್ತು. ಮೈತ್ರಿ ಅಭ್ಯರ್ಥಿ ನಿಲ್ಲಿಸಿದ್ದೆ ಬಿಜೆಪಿ ಬೆಂಬಲದೊಂದಿಗೆ ಅಲ್ಲವೇ? ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಲ್ಲವೇ? ಆದರೆ ಬಿಜೆಪಿ ತಮ್ಮ ಪಕ್ಷಕ್ಕೆ 48 ಮತಗಳನ್ನು ತೆಗೆದುಕೊಂಡು, ಜೆಡಿಎಸ್ ಅನ್ನು ಕೈಬಿಟ್ಟಿದ್ದಾರೆ” ಎಂದು ತಿಳಿಸಿದರು.
ಸೋಮಶೇಖರ್ ಅವರು ಅಡ್ಡಮತದಾನ ಮಾಡಿರುವ ಬಗ್ಗೆ ಕೇಳಿದಾಗ, “ಅಡ್ಡಮತದಾನದ ಬಗ್ಗೆ ನನಗೆ ಗೊತ್ತಿಲ್ಲ. ನಾನು ನನ್ನ ಮತವನ್ನಷ್ಟೇ ನೋಡಿದ್ದೇನೆ. ಪಕ್ಷೇತರರ ಮತವನ್ನು ನಾನು ನೋಡಿಲ್ಲ. ಹೀಗಿರುವಾಗ ಅಡ್ಡಮತದಾನದ ಬಗ್ಗೆ ನನಗೇನು ಗೊತ್ತು? ಬಿಜೆಪಿಯವರನ್ನೇ ಕೇಳಿ. ಅವರೇ ಅಲ್ಲವೇ ಆತ್ಮಸಾಕ್ಷಿ ಮತ ಕೇಳಿದ್ದು” ಎಂದು ತಿಳಿಸಿದರು.
ನಿಮ್ಮ ಪಕ್ಷಕ್ಕೆ ಆತ್ಮಸಾಕ್ಷಿ ಮತ ಬಂದಿದ್ದರೆ ಆ ಶಾಸಕರಿಗೆ ಕಾನೂನಾತ್ಮಕವಾಗಿ ಎದುರಾಗುವ ಸಮಸ್ಯೆಗೆ ರಕ್ಷಣೆ ಇರುತ್ತದೆಯೇ ಎಂದು ಕೇಳಿದಾಗ, “ಸಮಯ ಬರಲಿ, ಮಾತನಾಡೋಣ. ಈಗಲೇ ಎಲ್ಲವೂ ಬೇಡ. ಅಡ್ಡಮತದಾನದ ಬಗ್ಗೆ ಸ್ಪೀಕರ್ ಗೆ ದೂರಿನ ವಿಚಾರವೂ ನನಗೆ ಗೊತ್ತಿಲ್ಲ. ಸೋಮಶೇಖರ್ ಅವರು ಅವರ ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕಿದ್ದಾರೆ. ಈ ಚುನಾವಣೆ ಮೈತಿ ಸರಿಯೋ? ಸರಿಯಲ್ಲವೋ? ಎಂಬ ವಿಚಾರಕ್ಕೆ ಸಂಬಂಧಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಮತದಾರರು, ಶಾಸಕರು, ಪದವೀಧರರು, ಶಿಕ್ಷಕರು ಒಪ್ಪಬೇಕು. ಶಿಕ್ಷಕರು ಈಗಾಗಲೇ ತಿರಸ್ಕರಿಸಿದ್ದು, ಶಾಸಕರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ನೋಡೋಣ” ಎಂದರು.
ಸೋಲು ಗೆಲುವು ಮುಖ್ಯವಲ್ಲ, ನಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದೇವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಸಂಖ್ಯಾಬಲ ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೆ ಏನಾಗುತ್ತಿತ್ತು ಅಂತಾ ನಮಗೆ ಗೊತ್ತಿದೆ. ನಾವಾಗಿರುವುದಕ್ಕೆ ಸುಮ್ಮನೆ ಇದ್ದೇವೆ. ಈ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ” ಎಂದು ತಿಳಿಸಿದರು.