ಸೈನಿಕರ ಹೆಸರಲ್ಲಿ ಟೋಪಿ ಹಾಕುವ ಖದೀಮರಿದ್ದಾರೆ ಎಚ್ಚರ!

ಸೈನಿಕರ ಹೆಸರಲ್ಲಿ ಟೋಪಿ ಹಾಕುವ ಖದೀಮರಿದ್ದಾರೆ ಎಚ್ಚರ!

ಬೆಂಗಳೂರು, ಮೇ.7, ನ್ಯೂಸ್ ಎಕ್ಸ್ ಪ್ರೆಸ್: ವಂಚಕರಿಗೆ ಮಾನವೀಯತೆಯೇ ಇಲ್ಲ ಎಂಬುದನ್ನು ನಾವೇನು ಹೇಳಬೇಕಿಲ್ಲ. ಆದರೆ, ಜೀವದ ಹಂಗು ತೊರೆದು ದೇಶ ಕಾಯುವ ಸೈನಿಕರ ಹೆಸರಿನಲ್ಲಿ ವಂಚನೆ ನಡೆಸಿದರೆ ಅದಕ್ಕೆ ನಾವೇನು ಹೇಳಬೇಕು ಹೇಳಿ?. ಹೌದು, ಸಿಐಡಿ ಸೈಬರ್ ಕ್ರೈಮ್ ಪೊಲೀಸರು ಮತ್ತು ಮಾಧ್ಯಮಗಳ ಜನಜಾಗೃತಿ ಹೊರತಾಗಿಯೂ ರಾಜ್ಯದಲ್ಲಿ ಕಳೆದ ಮೂರೂವರೆ ತಿಂಗಳಲ್ಲಿ 77 ಜನರಿಗೆ ವಂಚಿಸಿ, ಲಕ್ಷಾಂತರ ರೂ. ಲೂಟಿ ಮಾಡಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನು ಹೊರಹಾಕಿದ ಸೈಬರ್ ಪೊಲೀಸರೋರ್ವರು ಹೀಗೆ ಅಭಿಪ್ರಾಯಪಟ್ಟಿದ್ದಾರೆ. ಜೀವದ ಹಂಗು ತೊರೆದು ದೇಶ ಕಾಯುವ ಸೈನಿಕರ ಸೋಗಿನಲ್ಲಿ ಟೋಪಿ ಹಾಕುವ ಸೈಬರ್ ಖದೀಮರ ಉಪಟಳ ಎಲ್ಲೆ ಮೀರಿದೆ ಎಂದು ಸೈಬರ್ ಪೊಲೀಸರು ತಿಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವಂಥ ಸೈನಿಕರ ಫೋಟೋ, ಹೆಸರು, ಗುರುತಿನ ಚೀಟಿ ಹಾಗೂ ಸೇನಾ ಶಿಬಿರ, ಕಚೇರಿಗಳ ಫೋಟೋ ಬಳಸಿಕೊಂಡು ಸಾರ್ವಜನಿಕರನ್ನು ವಂಚಿಸುವ ತಾಣ ಸಕ್ರೀಯವಾಗಿದೆ. ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ಜಾಗೃತಿ ವಹಿಸಬೇಕು. ನಂಬಿಕೆ ಇಟ್ಟು ವಂಚಿತರಾಗಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಯೋಧರ ಬಗ್ಗೆ ಗೌರವ ಹಾಗೂ ಹೆಮ್ಮೆ ಹೊಂದಿರುವ ಕಾರಣಕ್ಕೆ ನಾಗರಿಕರು ಸುಲಭವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ವಂಚಕರು ಒಎಲ್​ಎಕ್ಸ್ ಮತ್ತು ಕ್ವಿಕರ್​ನಲ್ಲಿ ಕಾರು, ಬೈಕು ಮಾರಾಟಕ್ಕೆ ಇರುವ ಫೋಟೊಗಳನ್ನು ಹಾಕಿ, ಕರೆ ಮಾಡಿದವರಿಗೆ ಸೈನಿಕನೆಂದು ನಕಲಿ ಐಡಿ ಕಾರ್ಡ್​ನ್ನು ವಾಟ್ಸ್​ಆಪ್ ಮಾಡಿ ಪರಿಚಯ ಮಾಡಿಕೊಳ್ಳುತ್ತಿದ್ದಾರೆ. ನಂತರ ಕಡಿಮೆ ಬೆಲೆಗೆ ಅವುಗಳನ್ನು ಮಾರುವುದಾಗಿ ಹೇಳಿ, ಸೇನಾ ಕ್ಯಾಂಪ್​ನಿಂದ ಹೊರಬರಲು ಸಾಧ್ಯವಿಲ್ಲವಾದ್ದರಿಂದ ಆನ್​ಲೈನ್ ಹಣ ವರ್ಗಾವಣೆ ಮಾಡಲು ಕೇಳಿಕೊಳ್ಳುತ್ತಾರೆ. ಕಡಿಮೆ ಬೆಲೆಗೆ ಕಾರು ಸಿಗುತ್ತದೆಂದು ಖರೀದಿಗೆ ಮುಂದಾಗುವ ನಾಗರಿಕರು, ಯೋಧರ ಬಗ್ಗೆ ಗೌರವ ಹಾಗೂ ಹೆಮ್ಮೆ ಹೊಂದಿರುವ ಕಾರಣಕ್ಕೆ ಆನ್​ಲೈನ್ ಮೂಲಕಹಣ ವರ್ಗಾವಣೆ ಮಾಡುತ್ತಾರೆ. ಆ ಹಣ ವಂಚಕರ ಖಾತೆಗೆ ಹಣ ಬಂದ ಕೂಡಲೇ ಡ್ರಾ ಮಾಡಿಕೊಂಡು ಆರೋಪಿಗಳು ಮೊಬೈಲ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ಇಂತಹ ವಂಚನೆಗಳಿಗೆ ಬಲಿಯಾಗಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos