ಕಾಂಗ್ರೆಸ್ ಪ್ರಣಾಳಿಕೆ: ‘ನ್ಯಾಯ್’, ಸರಳ ಜಿಎಸ್ಟಿ, ಪ್ರತ್ಯೇಕ ರೈತ ಬಜೆಟ್

ಕಾಂಗ್ರೆಸ್ ಪ್ರಣಾಳಿಕೆ: ‘ನ್ಯಾಯ್’, ಸರಳ ಜಿಎಸ್ಟಿ, ಪ್ರತ್ಯೇಕ ರೈತ ಬಜೆಟ್

ಬೆಂಗಳೂರು, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಬಡವರಿಗೆ ವರ್ಷಕ್ಕೆ 72 ಸಾವಿರ ರೂ ನ್ಯಾಯ್ ಯೋಜನೆ ಬಗ್ಗೆ ಇತ್ತೀಚೆಗೆ ರಾಹುಲ್ ಗಾಂಧಿ ಪ್ರಸ್ತಾಪ ಮಾಡಿದ ನಂತರ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿದ್ದ ಕಾಂಗ್ರೆಸ್​ನ ಚುನಾವಣಾ ಪ್ರಣಾಳಿಕೆ ಇವತ್ತು ಬಿಡುಗಡೆಯಾಗಿದೆ. ರಾಜ್ಯಸಭಾ ಸದಸ್ಯ ಹಾಗೂ ಕನ್ನಡಿಗ ಪ್ರೊ| ರಾಜೀವ್ ಗೌಡ ನೇತೃತ್ವದಲ್ಲಿ ರೂಪಿಸಿರುವ ಈ ಪ್ರಣಾಳಿಕೆಯಲ್ಲಿ NYAY ಸೇರಿದಂತೆ ಹಲವು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ.
ಒಂದು ವರ್ಷಗಳ ಕಾಲ ಸಂಶೋಧನೆ ನಡೆಸಿ ರೂಪಿಸಿದ ಈ ಪ್ರಣಾಳಿಕೆಯ ಪ್ರಮುಖ ಅಂಶಗಳು ಇಲ್ಲಿವೆ…
1) NYAY ಯೋಜನೆ: ಬಡತನ ತೊಲಗಿಸಲು ದೇಶದ ಶೇ. 20 ಅತಿ ಬಡ ಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂ ಕೊಡುವುದು
2) ರೈಲ್ವೆ ಬಜೆಟ್​ನಂತೆ ರೈತರಿಗೇ ಪ್ರತ್ಯೇಕ ಬಜೆಟ್
3) ರೈತರು ಸಾಲ ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ ಕ್ರಿಮಿನಲ್ ಅಪರಾಧವೆಂದು ಪರಿಗಣಿಸದೇ ಸಿವಿಲ್ ಅಫೆನ್ಸ್ ಎಂದಷ್ಟೇ ಪರಿಗಣನೆ
4) ಖಾಲಿ ಇರುವ 22 ಲಕ್ಷ ಸರಕಾರಿ ಉದ್ಯೋಗಗಳನ್ನು ಭರ್ತಿ ಮಾಡುವುದು; ಪಂಚಾಯಿತಿಯಲ್ಲಿ 10 ಲಕ್ಷ ಉದ್ಯೋಗಗಳ ಭರ್ತಿ
5) ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ಕೆಲಸದ ದಿನಗಳನ್ನ 100ರಿಂದ 150 ದಿನಗಳಿಗೆ ಹೆಚ್ಚಿಸುವುದು
6) ಜಿಡಿಪಿಯಲ್ಲಿ ಶೇ. 6ರಷ್ಟು ಹಣ ಶಿಕ್ಷಣಕ್ಕೆ ಮೀಸಲು
7) ಖಾಸಗಿ ಇನ್ಷೂರೆನ್ಸ್​ ಕಂಪನಿಗಳಿಗೆ ತಿಲಾಂಜಲಿ
8) ಜಿಎಸ್​ಟಿಯನ್ನು ಸರಳಗೊಳಿಸುವುದು; ಜಿಎಸ್​ಟಿಯಲ್ಲಿ ಎರಡು ಹಂತದ ಜಿಎಸ್​ಟಿ ತೆರಿಗೆ ಮಾತ್ರ ಇರಲಿದೆ
9) ಅಧಿಕಾರಕ್ಕೆ ಬಂದ ಮೊದಲ ದಿನವೇ ರಫೇಲ್ ಹಗರಣದ ತನಿಖೆ ಪ್ರಾರಂಭ
10) ಮಾನಹಾನಿ ಪ್ರಕರಣವನ್ನು ಅಪರಾಧ ಕೃತ್ಯ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 499 ಅನ್ನು ಕೈಬಿಡುವುದು; ಈ ಪ್ರಕರಣವನ್ನು ಸಿವಿಲ್ ಅಫೆನ್ಸ್ ಎಂದು ಪರಿಗಣಿಸುವುದು
11) ರಾಷ್ಟ್ರದ್ರೋಹ ವಿಚಾರದಲ್ಲಿರುವ ಐಪಿಸಿ ಸೆಕ್ಷನ್ 124ಎ ಅನ್ನು ಕೈಬಿಡುವುದು; ಈ ಸೆಕ್ಷನ್ ಸಾಕಷ್ಟು ದುರುಪಯೋಗವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ.
12) ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ರದ್ದು; ಯಾವ ಪ್ರಜೆಯೂ ಪೌರತ್ವ ನೊಂದಣಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು.
13) ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ
14) ನಗರಗಳಲ್ಲಿ ಜನರೇ ನೇರವಾಗಿ ಮೇಯರ್ ಆಯ್ಕೆ ಮಾಡುವುದು
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು “ಹಮ್ ನಿಭಾಯೇಂಗೇ” ಹೆಸರಿನ ಈ ಪ್ರಣಾಳಿಕೆ ಬಿಡುಗಡೆ ಮಾಡಿದರು. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಪಿ. ಚಿದಂಬರಂ, ರಂದೀಪ್ ಸುರ್ಜೆವಾಲಾ ಮೊದಲಾದ ಹಿರಿಯ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿದ್ದರು. ಪ್ರಣಾಳಿಕೆ ಬಿಡುಗಡೆಗೆ ಮುನ್ನ ಮಾತನಾಡಿದ ರಾಜೀವ್ ಗೌಡ, ಒಂದು ವಿಭಿನ್ನ ಪ್ರಣಾಳಿಕೆ ರೂಪಿಸಲು ರಾಹುಲ್ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಜನರ ಮಧ್ಯೆ ಹೋಗಿ ಅವರ ಆಶೋತ್ತರಗಳನ್ನ ಖುದ್ದಾಗಿ ಆಲಿಸಿ ಅವರ ಧ್ವನಿಗೆ ಒಂದು ರೂಪ ಕೊಡಬೇಕೆಂಬುದು ರಾಹುಲ್ ಅವರ ಕನಸಾಗಿತ್ತು. ಅದನ್ನು ಈ ಪ್ರಣಾಳಿಕೆಯಲ್ಲಿ ಕೊಡುವ ಪ್ರಯತ್ನ ಮಾಡಿದ್ಧೇನೆಂದು ಆರ್ಥಿಕ ತಜ್ಞರೂ ಆಗಿರುವ ಪ್ರೊ| ರಾಜೀವ್ ಗೌಡ ಹೇಳಿದ್ದಾರೆ.
ಬಡತನ, ನಿರುದ್ಯೋಗ, ರೈತರ ಬವಣೆ, ಶಿಕ್ಷಣ, ತೆರಿಗೆ, ಭ್ರಷ್ಟಾಚಾರ ವಿಚಾರಗಳಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗಿದೆ. ರೈತರು ಒಂದು ವೇಳೆ ಸಾಲ ಮರುಪಾವತಿ ಮಾಡಲು ವಿಫಲರಾದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಕಳುಹಿಸುವ ಕಾನೂನನ್ನು ತೆಗೆದುಹಾಕುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಸಾಲಮರುಪಾವತಿ ಮಾಡದ ರೈತರ ಮೇಲೆ ಸಿವಿಲ್ ಅಫೆನ್ಸ್ ಪ್ರಕರಣವನ್ನಷ್ಟೇ ಹಾಕಬಹುದಾದಂತೆ ಕಾನೂನಿನಲ್ಲಿ ಬದಲಾವಣೆ ತರುವುದಾಗಿ ಕಾಂಗ್ರೆಸ್ ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos