ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಜತೆ ನಾಯಕರ ಸಭೆ

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಜತೆ ನಾಯಕರ ಸಭೆ

ಬೆಂಗಳೂರು, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ಕಾಂಗ್ರೆಸ್ ಲೋಕಸಭೆ ಚುನಾವಣಾ ಪೂರ್ವ ಮೈತ್ರಿಯಲ್ಲಿ ಕ್ಷೇತ್ರ ಹಂಚಿಕೆ ಅಂತಿಮಗೊಂಡ ಬೆನ್ನಲ್ಲೇ ಕಾಂಗ್ರೆಸ್ ತನ್ನ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಮಹತ್ವದ ಚರ್ಚೆ ನಡೆಸಿತು.ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ನೇತೃತ್ವ ದಲ್ಲಿ ಇಂದು ಖಾಸಗಿ ಹೋಟೆಲ್‍ನಲ್ಲಿ ನಡೆದ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಸಮಿತಿಯ ಸದಸ್ಯರೂ ಆಗಿರುವ ಸಚಿವರಾದ ಡಿ.ಕೆ.ಶಿವಕುಮಾರ್, ಕೃಷ್ಣಬೈರೇಗೌಡ ಗೈರು ಹಾಜರಾಗಿದ್ದರು. ಉಳಿದಂತೆ 37 ಮಂದಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ಕಳೆದೆರಡು ತಿಂಗಳಿನಿಂದ ನಡೆದ ಸರ್ಕಸ್‍ನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಕ್ಷೇತ್ರಗಳ ಹಂಚಿಕೆ ಪ್ರಕ್ರಿಯೆ ತಾತ್ಕಾಲಿಕವಾಗಿ ನಿನ್ನೆ ಅಂತಿಮಗೊಂಡಿದ್ದು, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಮುಖಾಮುಖಿ ಭೇಟಿಯಲ್ಲಿ ಮೈತ್ರಿ ಪಕ್ಷಗಳ ಕ್ಷೇತ್ರ ಹಂಚಿಕೆ ಅಂತಿಮಗೊಂಡಿದೆ ಎಂದು ಹೇಳಲಾಗಿದೆ.

ಜೆಡಿಎಸ್ 10 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದು, ಕಾಂಗ್ರೆಸ್ 6 ಕ್ಷೇತ್ರಗಳಿಗೆ ಒಪ್ಪಿಗೆ ಸೂಚಿಸಿದೆ. ಇನ್ನೂ ಎರಡು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್ ಒತ್ತಡ ಏರುತ್ತಿದ್ದು, ಆ ನಿಟ್ಟಿನಲ್ಲಿ ಚೌಕಾಸಿ ನಡೆಯುತ್ತಿದೆ.

ಈವರೆಗಿನ ಮಾಹಿತಿಯಂತೆ ಹಳೆ ಮೈಸೂರು ಭಾಗದಲ್ಲಿ ಬೆಂಗಳೂರು ಉತ್ತರ, ಮಂಡ್ಯ, ಹಾಸನ, ಮಲೆನಾಡು ಭಾಗದಲ್ಲಿ ಶಿವಮೊಗ್ಗ , ಕರಾವಳಿ ಭಾಗದ ಉತ್ತರ ಕನ್ನಡ, ಉತ್ತರ ಕರ್ನಾಟಕ ಭಾಗದಲ್ಲಿ ವಿಜಯಪುರ ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಳ್ಳಲು ತಾತ್ವಿಕವಾಗಿ ಎರಡು ಪಕ್ಷಗಳು ಒಪ್ಪಿಕೊಂಡಿವೆ ಎನ್ನಲಾಗಿದೆ.

ಉಳಿದ 22 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಸಂಬಂಧ ಇಂದು ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಸೇರಿದಂತೆ ಸಮಿತಿಯ ಬಹುತೇಕ ಸದಸ್ಯರು ಭಾಗವಹಿಸಿದ್ದರು.

ಕಾಂಗ್ರೆಸ್‍ನಿಂದ ಸಂಸದರಾಗಿರುವ ಚಿಕ್ಕೋಡಿಯ ಪ್ರಕಾಶ್‍ಹುಕ್ಕೇರಿ, ಕಲಬುರ್ಗಿಯ ಮಲ್ಲಿಕಾರ್ಜುನ ಖರ್ಗೆ, ರಾಯಚೂರಿನ ಬಿ.ವಿ.ನಾಯಕ್, ಚಿತ್ರದುರ್ಗ ಬಿ.ಎನ್.ಚಂದ್ರಪ್ಪ, ಬಳ್ಳಾರಿಯ ವಿ.ಎಸ್.ಉಗ್ರಪ್ಪ, ತುಮಕೂರಿನ ಎಸ್.ಪಿ.ಮುದ್ದಹನುಮೇಗೌಡ, ಚಾಮರಾಜ ನಗರ ಆರ್.ಧ್ರುವನಾರಾಯಣ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಡಿ.ಕೆ.ಸುರೇಶ್, ಚಿಕ್ಕಬಳ್ಳಾಪುರ ಕ್ಷೇತ್ರದ ವೀರಪ್ಪಮೊಯ್ಲಿ, ಕೋಲಾರದ ಕೆ.ಎಚ್.ಮುನಿಯಪ್ಪ ಅವರಿಗೆ ಟಿಕೆಟ್ ಅಂತಿಮಗೊಳಿಸಲಾಗಿದೆ.

ಉಳಿದಂತೆ ಬೆಳಗಾವಿ, ಬಾಗಲಕೋಟೆ, ಬೀದರ್, ಕೊಪ್ಪಳ, ಹಾವೇರಿ, ಧಾರವಾಡ, ದಾವಣಗೆರೆ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಗಂಭೀರ ಚರ್ಚೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos