ತೆಂಗಿನ ಸಸಿ ಕಿತ್ತ ಪೊಲೀಸರು

ತೆಂಗಿನ ಸಸಿ ಕಿತ್ತ ಪೊಲೀಸರು

ತುರುವೇಕೆರೆ:ತಾಲ್ಲೂಕಿನ ಗುಡ್ಡೇನಹಳ್ಳಿ ರೈತರು ತಮ್ಮ ಜಮೀನಿನಲ್ಲಿ ನೆಟ್ಟಿರುವ ತೆಂಗಿನ ಸಸಿಗಳನ್ನು ಶಾಸಕ ಮಸಾಲ ಜಯರಾಂ ಅವರು ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಕೀಳಿಸಿ ತಮಗೆ ಬೇಕಾದವರಿಗೆ ಜಮೀನು ನೀಡಲು ಮುಂದಾಗಿದ್ದಾರೆ. ಬಡ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ’ ಎಂದು ಜೆಡಿಎಸ್ ಮುಖಂಡ ಎಂ.ಟಿ.ಕೃಷ್ಣಪ್ಪ ನೇರ ಆರೋಪ ಮಾಡಿದರು.

ಪಟ್ಟಣದಲ್ಲಿ ರೈತರ ಭೂ ದಾಖಲೆಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ‘ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಸರ್ವೆ ನಂ. ೪, ೫, ೬, ೭, ೮, ೯, ೧೫, ೧೬, ೨೭ ಮತ್ತು ೨೮ರಲ್ಲಿ ಸುಮಾರು ೧೮ ಎಕರೆ ಜಮೀನನ್ನು ಗ್ರಾಮದ ೬೦ ಬಡ ಕುಟುಂಬಗಳು ಹಲವು ವರ್ಷದಿಂದ ಸಾಗುವಳಿ ಮಾಡುತ್ತಿವೆ ಮತ್ತು ಬಗರ್ಹುಕುಂ ಯೋಜನೆ ಅಡಿ ರೈತರು ಅರ್ಜಿ ಸಲ್ಲಿಸಿದ್ದರು’.

ಇದರಲ್ಲಿ ಇಬ್ಬರಿಗೆ ನನ್ನ ಅವಧಿಯಲ್ಲೇ ತಲಾ ೩ ಎಕರೆ ಜಮೀನನ್ನು ಮಂಜೂರು ಮಾಡಿ ಕೊಟ್ಟಿದೆ. ಉಳಿದವರು ಇಲ್ಲಿ ತಲಾ ೨೦ ಗುಂಟೆ ಉಳುಮೆ ಮಾಡುತ್ತಿದ್ದರು. ಕೆಲ ರೈತರು ಈಚೆಗೆ ಸುಮಾರು ೮೦೦ ತೆಂಗಿನ ಸಸಿಗಳನ್ನು ನೆಟ್ಟಿದ್ದರು’ ಎಂದರು.

ಗೋಮಾಳಗಳನ್ನು ಉಳುಮೆ ಮಾಡಿಕೊಳ್ಳಲು ಸರ್ಕಾರದ ಅನುಮತಿ ಇದೆ ಹಾಗೂ ಬಿ. ಫಾರೆಸ್ಟ್ ಇದ್ದು, ವ್ಯವಸಾಯ ಮಾಡುತ್ತಾ ಬಗರ್ಹುಕುಂಗೆ ಅರ್ಜಿ ಹಾಕಿದ್ದರೆ ಅದನ್ನು ಖಾಲಿ ಮಾಡಿಸಲು ಯಾರಿಗೂ ಅನುಮತಿ ಇಲ್ಲ.

ಹೀಗಿದ್ದರೂ ಶಾಸಕ ಮಸಾಲ ಜಯರಾಂ ಗ್ರೇಡ್– ೨ ತಹಶೀಲ್ದಾರ್ ಸಿದ್ದಗಂಗಯ್ಯ, ಕಂದಾಯ ಅಧಿಕಾರಿ ಪುಟ್ಟಣ್ಣಶೆಟ್ಟಿ ಹಾಗೂ ಪಟ್ಟಣದ ಪೊಲೀಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಗುಡ್ಡೇನಹಳ್ಳಿ ಬಗರ್ಹುಕುಂ ಜಮೀನಿನಲ್ಲಿ ನೆಟ್ಟಿದ್ದ ಸಾವಿರಾರು ರೂಪಾಯಿ ಮೌಲ್ಯದ ತೆಂಗಿನ ಸಸಿಗಳನ್ನು ಕೀಳಿಸಿದ್ದಾರೆ. ಆ ಮೂಲಕ ಬಡ, ಕೂಲಿಕಾರ ರೈತರ ಭೂಮಿಯನ್ನು ತಮ್ಮ ಹಿಂಬಾಲಕರಿಗೆ ನೀಡಿ ಆನಂತರ ತಮ್ಮ ಹೆಸರಿಗೆ ಮಂಜೂರು ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

‘ರಕ್ಕಸ ಶಾಸಕ ಮಸಾಲ ಜಯರಾಂ ದುರಾಡಳಿತ ಖಂಡಿಸಿ ಆ. ೩೦ರಿಂದ ೩೧ರವರೆಗೆ ಗುಡ್ಡೇನಹಳ್ಳಿ ಗ್ರಾಮಸ್ಥರೊಟ್ಟಿಗೆ ಪಾದಯಾತ್ರೆ ಕೈಗೊಂಡು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಗುವುದು’ ಎಂದರು. ಕೊಳಾಲ ಗಂಗಾಧರ್, ಬಸವ ರಾಜು, ಕೆಂಚಯ್ಯ, ಮುಕುಂದ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos