ಸಿಎಂ ಹೆಚ್ಡಿಕೆಯಿಂದ ಕಿರಿಕಿರಿ: ಕಾಂಗ್ರೆಸ್ ಶಾಸಕರ ಅಸಮಾಧಾನ!

ಸಿಎಂ ಹೆಚ್ಡಿಕೆಯಿಂದ ಕಿರಿಕಿರಿ: ಕಾಂಗ್ರೆಸ್ ಶಾಸಕರ ಅಸಮಾಧಾನ!

ಬೆಂಗಳೂರು, ಮೇ.8, ನ್ಯೂಸ್ ಎಕ್ಸ್ ಪ್ರೆಸ್: ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಶಾಸಕರ ಜೊತೆ ವೈಯಕ್ತಿಕವಾಗಿ ಚರ್ಚೆ ಮಾಡದಿದ್ದರೆ ಮುಂದಿನ ಬೆಳವಣಿಗೆಗಳಿಗೆ ನಾವು ಹೊಣೆಯಲ್ಲ ಎಂದು ಕಾಂಗ್ರೆಸ್ ಶಾಸಕರು ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಅವರ ಜೊತೆ ಈಗಾಗಲೇ ಎರಡು ಬಾರಿ ಸಭೆ ನಿಗದಿಯಾಗಿ ರದ್ದುಗೊಂಡಿದೆ. ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಕುಮಾರಸ್ವಾಮಿ ಇತ್ತ ಕಾಂಗ್ರೆಸ್ ಶಾಸಕರ ಅತೃಪ್ತಿಗೂ ಸಮಾಧಾನ ನೀಡಬೇಕಿದೆ. ಅತ್ತ ಜೆಡಿಎಸ್ ನಾಯಕರ ಒತ್ತಡವನ್ನೂ ಸಹಿಸಿಕೊಳ್ಳಬೇಕಿದೆ. ಇತ್ತೀಚೆಗೆ ನಡೆದ ಕೆಲವು ನಿಗಮ ಮಂಡಳಿಗಳ ನೇಮಕಾತಿಗಳಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟ ನಡೆದಿತ್ತು.  ಜೆಡಿಎಸ್‍ನ ಸಚಿವರುಗಳು ಕಾಂಗ್ರೆಸ್ ಶಾಸಕರನ್ನು ತಮ್ಮ ವ್ಯಾಪ್ತಿಗೆ ಒಳಪಡುವ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಲು ಒಪ್ಪಿರಲಿಲ್ಲ. ಹಾಗಾಗಿ ರೆಸಾರ್ಟ್ ರಾಜಕಾರಣ ಆರಂಭಗೊಂಡಿತ್ತು. ಅದನ್ನು ತಣಿಸುವ ಸಲುವಾಗಿ ಒಮ್ಮೆಲೆ ಕುಮಾರಸ್ವಾಮಿ ಅವರು ಪ್ರಸ್ತಾವಿತ ಎಲ್ಲಾ ನಿಗಮ ಮಂಡಳಿ ಅಧ್ಯಕ್ಷರ ಹೆಸರಿಗೂ ಸಹಿ ಹಾಕಿದ್ದರು. ಸಚಿವ ಸ್ಥಾನ ಸಿಗದೆ ನಿಗಮ ಮಂಡಳಿ ಸ್ಥಾನ ಸಿಕ್ಕಾಗ ಪಾಲಿಗೆ ಬಂದದ್ದು ಪಂಚಾಮೃತ ಎಂದು ಅಧಿಕಾರ ವಹಿಸಿಕೊಂಡರು. ಆದರೆ ಸಮಸ್ಯೆ ಶುರುವಾಗಿದ್ದು ಆನಂತರ. ನಿಗಮ ಮಂಡಳಿಗಳ ಅಧ್ಯಕ್ಷರಾದವರಿಗೆ ಪೂರ್ಣಪ್ರಮಾಣದ ಅಧಿಕಾರ ಚಲಾಯಿಸಲು ಅವಕಾಶ ನೀಡದೆ ನಿವೃತ್ತ ಅಧಿಕಾರಿಗಳನ್ನೋ, ಅಥವಾ ಮತ್ಯಾರನ್ನೋ ಅದೇ ನಿಗಮಕ್ಕೆ ನೇಮಿಸಿ ಕಿರಿಕಿರಿ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ಕ್ಷೇತ್ರಗಳಿಗೆ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ ನಮ್ಮೆಲ್ಲ ವೈಯಕ್ತಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಖ್ಯಮಂತ್ರಿಗಳು ಸಭೆ ನಡೆಸಬೇಕು. ಅದರಲ್ಲೂ ಪ್ರತಿಯೊಬ್ಬ ಶಾಸಕರನ್ನು ವೈಯಕ್ತಿಕವಾಗಿ ಕರೆದು ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಕುಮಾರಸ್ವಾಮಿಯವರು ಸಭೆ ಕರೆಯಲು ಹಿಂದೇಟು ಹಾಕಿದರೆ ಎಲ್ಲಾ ಶಾಸಕರು ತಮ್ಮ ಸಮಸ್ಯೆಗಳನ್ನು ಲಿಖಿತರೂಪದಲ್ಲಿ ನೀಡಲು ತಯಾರಿ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಕುಮಾರಸ್ವಾಮಿಯವರು ನಾಯಕರೇ ಆಗಿದ್ದರೂ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಹಿಡಿತದಲ್ಲಿದ್ದಾರೆ. ಕಾಂಗ್ರೆಸ್ ಶಾಸಕರ ಸಮಸ್ಯೆಗಳು ಸಮನ್ವಯ ಸಮಿತಿಯಲ್ಲಿ ಚರ್ಚೆಯಾಗಿ ಕುಮಾರಸ್ವಾಮಿಯವರ ಗಮನಕ್ಕೆ ಹೋದರೂ ಅದು ಬಗೆಹರಿದಿಲ್ಲ. ಹೀಗಾಗಿ ಶಾಸಕರು ನೇರವಾಗಿ ಮುಖ್ಯಮಂತ್ರಿಯವರ ಜೊತೆ ಸಭೆ ನಡೆಸಬೇಕು ಎಂದು ಹೇಳುತ್ತಿದ್ದಾರೆ. ಆದರೆ ಈ ಸಭೆಗೆ ಸಿದ್ದರಾಮಯ್ಯ ಅವಕಾಶ ನೀಡುತ್ತಿಲ್ಲ ಎಂದೂ ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos