ಪೌರತ್ವ ತಿದ್ದುಪಡಿ ಕಾಯ್ದೆ: ಬಾಗೇಪಲ್ಲಿ ಸಿಪಿಐಎಂ ಪಕ್ಷದ ವತಿಯಿಂದ ಪ್ರತಿಭಟನೆ

ಪೌರತ್ವ ತಿದ್ದುಪಡಿ ಕಾಯ್ದೆ: ಬಾಗೇಪಲ್ಲಿ ಸಿಪಿಐಎಂ ಪಕ್ಷದ ವತಿಯಿಂದ ಪ್ರತಿಭಟನೆ

ಬಾಗೇಪಲ್ಲಿ, ಡಿ. 23:ಅಸಂವಿಧಾನಿಕವಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಬಾಗೇಪಲ್ಲಿ ಸಿಪಿಐಎಂ ಪಕ್ಷದ ತಾಲ್ಲೂಕು ಘಟಕದ ಕಾರ್ಯಕರ್ತರು ಹಾಗೂ ಮುಖಂಡರು ಗೂಳೂರು ವೃತ್ತದಿಂದ ಸಾವಿರಾರು ಸಿಪಿಐಎಂ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು ನಂತರ ಬಾಗೇಪಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ಮಾಡಿದರು.

ಈ ವೇಳೆ  ಬಾಗೇಪಲ್ಲಿ ತಾಲ್ಲೂಕು ಘಟಕದ ಕಾರ್ಯದರ್ಶಿ ಹಾಗು ಸಿಪಿಐಎಂ ಮುಖಂಡರಾದ ಚನ್ನರಾಯಪ್ಪ ಮಾತನಾಡಿ, ‘ದೇಶದ ನಾಗರಿಕರನ್ನು ಧರ್ಮದ ಆಧಾರದಲ್ಲಿ ವಿಭಜಿಸುವುದು ಖಂಡನೀಯ. ಇದು ದೇಶದ ಜನರ ಮೇಲೆ ಕೇಂದ್ರ ಸರ್ಕಾರ ನಡೆಸಿರುವ ಕ್ರೌರ್ಯ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ ಮತ್ತು ಎನ್‌ಆರ್‌ಸಿ ಮೂಲಕ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿ ಹಿಂದೂರಾಷ್ಟ್ರ ಮಾಡಲು ಯತ್ನಿಸುತ್ತಿದೆ’ಎಂದು ಆರೋಪಿಸಿದರು.

‘ನಾವು ಭಾರತೀಯರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಪೌರತ್ವ ಸಾಬೀತುಪಡಿಸಬೇಕು ಎನ್ನುವುದರಲ್ಲಿ ಅರ್ಥವಿಲ್ಲ. ಇದಕ್ಕೆ ನನ್ನ ವಿರೋಧವಿದೆ. ಇಂತಹ ಕಾಯ್ದೆ ಹೇರಿರುವುದು ದುರದೃಷ್ಟಕರ. ಜಾತ್ಯತೀತ ನಿಲುವಿನ ಈ ರಾಷ್ಟ್ರದಲ್ಲಿ ಮೋದಿ ಸರ್ಕಾರ ಸಿಎಎ ಎಂಬ ಕರಾಳ ಕಾನೂನನ್ನು ಜಾರಿಗೆ ತಂದಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದ ಮುಸ್ಲಿಮರನ್ನು ಬಿಟ್ಟು ಉಳಿದ ಎಲ್ಲ ಧರ್ಮಗಳ ಜನರಿಗೆ ಭಾರತದ ಪೌರತ್ವ ನೀಡಲು ಮುಂದಾಗಿರುವುದು ಖಂಡನೀಯ’ ಎಂದು ತಿಳಿಸಿದರು.

ಸಿಪಿಐಎಂ ಮುಖಂಡರಾದ ಮಂಜುನಾಥ್ ರೆಡ್ಡಿ ಮಾತನಾಡಿ,‘ಎನ್‌ಆರ್‌ಸಿಯಿಂದ ಅಸ್ಸಾಂನಲ್ಲಿ ಲಕ್ಷಾಂತರ ಮಂದಿ ತಮ್ಮ ಪೌರತ್ವ ಸಾಬೀತುಪಡಿಸಲು ಅಪಾರ ಹಣ ಹಾಗೂ ಸಮಯ ವ್ಯಯಿಸಿದ್ದಾರೆ. ಕಳೆದ 4 ವರ್ಷಗಳಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಆ ಕಷ್ಟವನ್ನು ದೇಶದ ಎಲ್ಲರ ಜನರ ಮೇಲೆ ಹೇರಲು ಸರ್ಕಾರ ಮುಂದಾಗಿರುವುದು ಖೇದಕರ. ಮೋದಿ ಮತ್ತು ಅಮಿತ್‌ ಶಾ ಅವರು ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಬಗ್ಗೆ ಒತ್ತು ಕೊಡದೆ ಧರ್ಮ ಆಧರಿತ ಕಾರ್ಯಕ್ರಮಗಳಿಗೆ ಗಮನಕೊಟ್ಟು ದೇಶನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ. ಜಾತ್ಯತೀತ ಮೌಲ್ಯಗಳಿಗೆ ಪೆಟ್ಟು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ತದನಂತರ ಮಹಮದ್ ಅಕ್ರಂ, ಆಂಜನೇಯ ರೆಡ್ಡಿ, ಎಡಿಟಿಎಸ್ ರಾಮು, ಹೇಮಚಂದ್ರ ಮುಂತಾದವರು ಪ್ರಮುಖರು ಮಾತನಾಡಿದರು. ಪ್ರತಿಭಟನೆ ಶಾಂತಿ ರೀತಿಯಲ್ಲಿ ನಡೆಸಲು ಬಾಗೇಪಲ್ಲಿ ಪಟ್ಟಣದ ಪೋಲಿಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಿಪಿಐಎಂ ತಾಲ್ಲೂಕು ಮುಖಂಡರಾದ ಆಶ್ವತ್ಥಪ್ಪ,ಮುಸ್ತಫಾ, ಜಿ.ಎಂ.ರಾಮಕೃಷ್ಣಪ್ಪ, ಮುನಿವೆಂಕಟಪ್ಪ, ಮದ್ದಲಖಾನೆ ರಘರಾಮರೆಡ್ಡಿ ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos