‘ಚಂದನವನ’ದ ನಿಜವಾದ ಚೌಕಿದಾರ್… ಈ ಮುಧೋಳ ಶ್ವಾನಗಳು…

‘ಚಂದನವನ’ದ ನಿಜವಾದ ಚೌಕಿದಾರ್… ಈ ಮುಧೋಳ ಶ್ವಾನಗಳು…

ಬೆಂಗಳೂರು, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಮೊದಲಿನಿಂದಲೂ ಧಾರವಾಡ ಶ್ರೀಗಂಧ ಬೆಳೆಗೆ ಪ್ರಸಿದ್ಧಿ. ಇಲ್ಲಿನ ಕಾಡುಗಳಲ್ಲಿ ಬೆಳೆಯೋ ಶ್ರೀಗಂಧ ತುಂಬಾನೇ ಉತ್ತಮ ಗುಣಮಟ್ಟದ್ದಾಗಿದ್ದು, ಎಲ್ಲೆಡೆ ಭಾರೀ ಬೇಡಿಕೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಶ್ರೀಗಂಧ ಬೆಳೆಯುವುದಕ್ಕೆ ಮುಂಚೆಯೇ ಕಳ್ಳರು ಕತ್ತರಿಸಿ ಒಯ್ದು ಬಿಡುತ್ತಿದ್ದಾರೆ. ಇದನ್ನು ತಪ್ಪಿಸಲು ಈಗ ಅರಣ್ಯ ಅಧಿಕಾರಿಗಳು ಭರ್ಜರಿ ಫ್ಲಾನ್​ ಮಾಡಿದ್ದಾರೆ. ಎತ್ತರಕ್ಕೆ ಬೆಳೆದು ನಿಂತ ದೊಡ್ಡ ಮರಗಳು ಅವುಗಳ ಮಧ್ಯೆ ಹಚ್ಚಹಸಿರಿನಿಂದ ಕಾಣುತ್ತಿರುವ ಶ್ರೀಗಂಧದ ಗಿಡಗಳು, ಈ ಅರಣ್ಯ ಸಿರಿಯ ಸುತ್ತಲೂ ನಿರ್ಮಿಸಲಾದ ತಂತಿ ಬೇಲಿ ಇದು ಧಾರವಾಡ ತಾಲೂಕಿನ ಗುಂಗರಗಟ್ಟಿ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ದೃಶ್ಯ. ಈ ಪ್ರದೇಶದಲ್ಲಿ ಅರಣ್ಯ ಇಲಾಖೆ 1998 ರಿಂದಲೂ ಶ್ರೀಗಂಧ ಗಿಡಗಳನ್ನು ಬೆಳೆಸುತ್ತಾ ಬಂದಿದೆ. ಆದರೆ ಕಳ್ಳರ ಕೈಚಳಕದಿಂದ ಅರಣ್ಯ ಇಲಾಖೆ ಫಸಲು ನೋಡಲು ಆಗುತ್ತಿಲ್ಲ. ಈ ಶ್ರೀಗಂಧದ ರಕ್ಷಣೆಗೆ ಇಲಾಖೆ ಏನೆಲ್ಲ ಕಸರತ್ತು ಮಾಡುತ್ತಲೇ ಇತ್ತು. ಸುತ್ತಲೂ ಹತ್ತಾರು ಅಡಿ ಎತ್ತರಕ್ಕೆ ತಂತಿ ಬೇಲಿ ಹಾಕಲಾಯಿತು. ಆಗಲೂ ಅದನ್ನು ಕತ್ತರಿಸಿ ಬರುವ ಕಳ್ಳರು ಶ್ರೀಗಂಧ ಕದ್ದೊಯ್ಯೋದು ನಿಲ್ಲಿಸಲಿಲ್ಲ. ಬಳಿಕ ಆ ತಂತಿ ಬೇಲಿಗೆ ವಿದ್ಯುತ್ ನೀಡಿದರೂ ಪ್ರಯೋಜನವಾಗಲಿಲ್ಲ. ರಾತ್ರಿ ಗಸ್ತಿನಲ್ಲಿನ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಯಿತು. ಸಿಬ್ಬಂದಿ ಕೈಗೆ ಡಬಲ್ ಬ್ಯಾರೆಲ್ ಗನ್ ಕೊಟ್ಟರೂ ಕಳ್ಳತನ ಮಾತ್ರ ನಿಲ್ಲಲಿಲ್ಲ. ಹೀಗಾಗಿ ಅಧಿಕಾರಿಗಳು ಮುಧೋಳ ನಾಯಿಗಳಿಗೆ ಮೊರೆ ಹೋಗ ಬೇಕಾಯ್ತು.

ಈಗ 28 ಹೆಕ್ಟೇರ್ ಪ್ರದೇಶದಲ್ಲಿರೋ ಗಂಧದ ಮರಗಳ ರಕ್ಷಣೆಗೋಸ್ಕರ ಎರಡು ಮುಧೋಳ ನಾಯಿಗಳಿಗೆ ತರಬೇತಿ ನೀಡಿ, ಈ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಈ ನಾಯಿಗಳು ಹಗಲು – ರಾತ್ರಿ ಗಂಧದ ಗಿಡಗಳನ್ನು ಕಾಯುತ್ತವೆ. ಒಂದೂವರೆ ವರ್ಷದ ಒಂದು ಗಂಡು ಹಾಗೂ ಒಂದು ಹೆಣ್ಣು ನಾಯಿಗೆ ಇದೀಗ ಸಂಪೂರ್ಣ ತರಬೇತಿ ನೀಡಲಾಗಿದ್ದು, ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಬೇಟೆಯಾಡೋದರಲ್ಲಿ ನಿಸ್ಸೀಮತೆ ಹೊಂದಿರುವ ಈ ಶ್ವಾನಗಳು ರಾತ್ರಿ ಹೊತ್ತಿನಲ್ಲಿ ತುಂಬಾನೇ ಆಕ್ಟಿವ್ ಆಗಿ ಇರುತ್ತವೆ. ಸಣ್ಣ ಶಬ್ದವನ್ನೂ ಆಲಿಸೋ ಶಕ್ತಿ ಹೊಂದಿರುವ ಶ್ವಾನಗಳು ಅಪರಿಚಿತರ ಮೇಲೆ ಎರಗಿ ಅವರನ್ನು ನೆಲಕ್ಕುರುಳಿಸೋ ತಾಕತ್ತೂ ಹೊಂದಿವೆ. ಇದೇ ಕಾರಣಕ್ಕೆ ಇವುಗಳು ಇತ್ತೀಚಿಗಷ್ಟೇ ಭಾರತೀಯ ಸೇನೆ ಸೇರಿದ್ದವು. ಇಂಥ ಮುಧೋಳ ನಾಯಿಗಳು ಇದೀಗ ಈ ಶ್ರೀಗಂಧ ರಕ್ಷಣೆಯ ಹೊಣೆ ಹೊತ್ತಿವೆ. ಈ ನಾಯಿಗಳು ಬಂದಾಗಿನಿಂದ ರಾತ್ರಿ ಹೊತ್ತು ಕೆಲಸ ಮಾಡೋದು ತುಂಬಾನೇ ಸರಳವಾಗಿದೆ ಅನ್ನೋದು ಅರಣ್ಯ ಇಲಾಖೆ ಸಿಬ್ಬಂದಿ ಅಭಿಪ್ರಾಯ. ಒಟ್ಟಿನಲ್ಲಿ ರಾತ್ರೋ ರಾತ್ರಿ ಗಿಡಗಳನ್ನು ಕತ್ತರಿಸಿಕೊಂಡು ಪರಾರಿಯಾಗುತ್ತಿದ್ದ ಕಳ್ಳರಿಗೆ ಈ ನಾಯಿಗಳು ಬ್ರೇಕ್ ಹಾಕಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ಮೊಗದಲ್ಲಿ ಸಂತಸ ಮೂಡಿಸಿದೆ. ಸದ್ಯ ಮುಧೋಳ ಶ್ವಾನಗಳ ಕೆಲಸಕ್ಕೆ ಫಿದಾ ಆಗಿರುವ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ನಾಯಿಗಳನ್ನು ಬಳಸಿಕೊಳ್ಳುವ ಯೋಜನೆ ಹಾಕಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos