ಸಾಹಿತ್ಯ ಪರಿಷತ್‌ನಿಂದ ಮಕ್ಕಳ ದಿನಾಚರಣೆ

ಸಾಹಿತ್ಯ ಪರಿಷತ್‌ನಿಂದ ಮಕ್ಕಳ ದಿನಾಚರಣೆ

ಕೋಲಾರ: ಆಧುನಿಕ ಯುಗದಲ್ಲಿ ಸ್ಪರ್ಧೆಗಿಳಿಯಬೇಕಾದರೆ ಮಕ್ಕಳಲ್ಲಿ ಧೈರ್ಯ ಮತ್ತು ಪ್ರಮಾಣಿಕತೆ ಬೆಳೆಯಬೇಕು ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಉಪಾಧ್ಯಕ್ಷ ಬಂಗವಾದಿ ನಾಗರಾಜ ಅಭಿಪ್ರಾಯ ಪಟ್ಟರು.
ನಗರದ ಕೀಲುಕೋಟೆಯ ಕಾಳಿದಾಸ ಬಡಾವಣೆಯಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಇತಿಹಾಸದ ಪರಿಚಯ ಆಗಬೇಕು. ಮಹಾನ್ ವ್ಯಕ್ತಿಗಳ ಆದರ್ಶಗಳು ಮೈಗೂಡಿಸಿಕೊಳ್ಳಲು ಶಿಕ್ಷಕರು ಹಾಗೂ ಪೋಷಕರು ಉತ್ತಮ ಉದಾತ್ತ ಗುಣಗಳ ಚಿಂತನಾ ಮಂಥನ ನಡೆಸುವುದು ಇಂದಿನ ಅಗತ್ಯ. ನಾವು ವಾಸಿಸುವ ಪ್ರದೇಶದಲ್ಲಿ ತಮ್ಮಿಂದ ಆಗುವ ಸಹಾಯವನ್ನು ಪ್ರಾಮಾಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲಾ ಭಾರತ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ವಿ ಬಾಬು ಮಾತಾನಾಡಿ ಇಂದಿನ ಪರಿಸರ ಕಲುಷಿತವಾಗಿದೆ. ಮೊದಲು ಹಸಿರು ಕ್ರಾಂತಿ ಆಗಬೇಕು. ಹಸಿರೇ ಉಸಿರು ಎಂಬುದು ಸಾರ್ಥಕ ಆಗಬೇಕಾದರೆ, ಊರಿಗೊಂದು ವನ, ಮನೆಗೆ ಎರಡು ಗಿಡ ನೆಡುವ ಕಾರ್ಯ ನಿರಂತರ ಆಗಬೇಕು ಎಂದರು.
ಕವಿ ಡಾ. ಶರಣಪ್ಪ ಗಬ್ಬೂರ್ ಮಾತಾನಾಡಿ ಮಕ್ಕಳಲ್ಲಿ ಓದುವುದು ಬರೆಯುವುದು ಹವ್ಯಾಸವನ್ನು ಉಂಟು ಮಾಡಲು ಹಿರಿಯರು ಶ್ರಮಿಸಬೇಕು. ದೂರದರ್ಶನ, ಮೊಬೈಲ್ ಹೆಚ್ಚು ಬಳಸದೆ ಗ್ರಂಥಾಲಯದತ್ತ ಮುಖ ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ. ನಾರಾಯಣಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಗ್ರ ಶಿಕ್ಷಣ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸವಿತಾ, ಜಿಲ್ಲಾ ಸಿರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ ಸುಬ್ಬರಾಮಯ್ಯ, ಅತಿಥಿ ಉಪನ್ಯಾಸಕ ವೆಂಕಟೇಶ್, ನಾರಾಯಣಸ್ವಾಮಿ, ಸ್ಕೌಟ್ ವಿಶ್ವನಾಥ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos