ಚಿಕಿತ್ಸೆ ಮೊಟಕು ಬೆಂಗಳೂರಿನತ್ತ ಸಿಎಂ ಎಚ್.ಡಿ.ಕುಮಾರಸ್ವಾಮಿ!?

ಚಿಕಿತ್ಸೆ ಮೊಟಕು ಬೆಂಗಳೂರಿನತ್ತ ಸಿಎಂ ಎಚ್.ಡಿ.ಕುಮಾರಸ್ವಾಮಿ!?

ಉಡುಪಿ, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎರಡೇ ದಿನಕ್ಕೆ ಆಯುರ್ವೇದಿಕ್ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ಹೊರಟಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಆರೋಗ್ಯ ಸುಧಾರಿಸಲು ನಾನು ಉಡುಪಿಗೆ ಬಂದಿದ್ದೆ. ಆದರೆ ಶ್ರೀಲಂಕಾದ ಸ್ಫೋಟ ಪ್ರಕರಣ ನನ್ನನ್ನು ಘಾಸಿಗೊಳಿಸಿದೆ. ಸೋಮವಾರದಿಂದ ನನಗೆ ಇದೇ ತಲೆಯಲ್ಲಿ ಕಾಡುತ್ತಿದೆ. ಬಾಂಬ್ ಪ್ರಕರಣದಲ್ಲಿ ನನ್ನ ಆತ್ಮೀಯರು ಮರಣ ಹೊಂದಿದ್ದಾರೆ. ಮೂರು ನಾಲ್ಕು ದಿನ ಕಾಪುವಿನಲ್ಲಿ ಆಯುರ್ವೇದಿಕ್ ಚಿಕಿತ್ಸೆಗೆಂದು ಉಳಿದುಕೊಳ್ಳಬೇಕೆಂದಿದ್ದೆ. ಆದರೆ ನಿನ್ನೆಯಿಂದ ನನಗೆ ನೋವನ್ನು ತಡೆದುಕೊಳ್ಳಲಾಗುತ್ತಿಲ್ಲ. ಹೀಗಾಗಿ ವೈದ್ಯರ ಜೊತೆ ಚರ್ಚೆ ಮಾಡಿದ್ದೇನೆ. ಅವರು 27 ರ ನಂತರ ಮತ್ತೆ ಉಡುಪಿಗೆ ಬರಲು ಸೂಚಿಸಿದ್ದಾರೆ. ಚಿಕಿತ್ಸೆ ಮುಂದೂಡಿ ಕರ್ತವ್ಯ ಮಾಡಲು ಹೊರಟಿದ್ದೇನೆ ಎಂದು ಹೇಳಿದರು. ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‍ಸ್ಫೋಟ ಅತ್ಯಂತ ಮೃಗೀಯವಾದ ಘಟನೆಯಾಗಿದೆ. ಈ ಘಟನೆಯಲ್ಲಿ ಅಲ್ಲಿನ ಜನರು ಮತ್ತು ಪ್ರವಾಸಿಗರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ. ಇದು ನಿಜಕ್ಕೂ ಖಂಡನೀಯ. ನಮ್ಮ ರಾಜ್ಯದಿಂದ ಅನೇಕರು ಶ್ರೀಲಂಕಾಗೆ ಪ್ರವಾಸಹೋಗಿದ್ದರು. ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಮೊದಲು ನಾನು ನೊಂದ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು. ಅದರಲ್ಲೂ ನನ್ನ ಪಕ್ಷದ ಐದು ಜನ ನಾಯಕರು ಮೃತಪಟ್ಟಿದ್ದಾರೆ. ಅವರು ಪಕ್ಷದ ಆಧಾರ ಸ್ತಂಭಗಳಾಗಿದ್ದರು. ಇದರಿಂದ ಪಕ್ಷಕ್ಕೆ ಮತ್ತು ಅವರ ಕುಟುಂಬಕ್ಕೆ ಆಘಾತ ತಂದಿದೆ. ಈ ರೀತಿ ನನ್ನ ಪಕ್ಷದ ನಾಯಕರು ಮೃತಪಡುತ್ತಾರೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಹನುಮಂತರಾಯಪ್ಪ, ರಂಗಣ್ಣ, ಶಿವಣ್ಣ, ಲಕ್ಷ್ಮೀನಾರಾಯಣ, ರಮೇಶ್ ನನ್ನ ಜೊತೆ ಬಹಳ ಆತ್ಮೀಯರಾಗಿದ್ದರು. ಈ ಐವರು ನಮ್ಮ ಪಕ್ಷದ ಶಕ್ತಿಯಾಗಿದ್ದು, ಅವರ ಅಗಲಿಕೆಯಿಂದ ನೆಲಮಂಗಲದಲ್ಲಿ 50% ಶಕ್ತಿ ಕುಸಿತವಾಗಿದೆ. ಪ್ರಾಮಾಣಿಕ, ಸಾಮಾಜಿಕ ಸೇವೆ ಮಾಡುವವರನ್ನು ಕಳೆದುಕೊಂಡಿದ್ದೇವೆ ಎಂದು ದುಃಖದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos