ಮಂಡ್ಯದ ರಾಜಕೀಯಕ್ಕೆ ಹೊಸ ತಿರುವು, ಸ್ಫೋಟಕ ಆಡಿಯೋ ರಿಲೀಸ್..!

ಮಂಡ್ಯದ ರಾಜಕೀಯಕ್ಕೆ ಹೊಸ ತಿರುವು, ಸ್ಫೋಟಕ ಆಡಿಯೋ ರಿಲೀಸ್..!

ಮಂಡ್ಯ, ಏ. 13, ನ್ಯೂಸ್ ಎಕ್ಸ್ ಪ್ರೆಸ್: ಇಡಿ ಭಾರತದ ಗಮನ ಸೆಳೆದ ಮಂಡ್ಯ ರಾಜಕೀಯಕ್ಕೆ ಇದೀಗ ಮತ್ತೊಂದು ಹೊಸ ತಿರುವು ಸಿಕ್ಕಿದೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸುಮಾರು 150 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂಬ ಮಾಹಿತಿಯುಳ್ಳ ಸ್ಫೋಟಕ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತು ಕನ್ನಡ ವಾಹಿನಿಗಳು ಸುದ್ದಿ ಮಾಡಿವೆ. ಆದರೆ ಆಡಿಯೋದ ಸತಾಸತ್ಯತೆ ಬಗ್ಗೆ ಖಚಿತ ಮಾಹಿತಿ ಇದುವರೆಗೆ ಲಭ್ಯವಿಲ್ಲ. ಮಂಡ್ಯ ಕ್ಷೇತ್ರದ ಹಾಲಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರ ಪುತ್ರ ಚೇತನ್ ಮತ್ತು ಜೆಡಿಎಸ್ ಕಾರ್ಯಕರ್ತ ಪಿ ರಮೇಶ್ ಎಂಬುವವರ ನಡುವಿನ ಸಂಭಾಷಣೆಯ ಆಡಿಯೋ ಇದು ಎನ್ನಲಾಗುತ್ತಿದ್ದು, ಈ ಆರೋಪವನ್ನು ಚೇತನ್ ಗೌಡ ತಳ್ಳಿಹಾಕಿದ್ದಾರೆ. ಆಡಿಯೋದಲ್ಲಿ, ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿ ಬೂತ್ ಗೆ 5 ಲಕ್ಷ ರೂ.ವರೆಗೆ ಖರ್ಚು ಮಾಡಲು ಈ ಆಡಿಯೋದಲ್ಲಿ ಸಂಭಾಷಣೆ ನಡೆದಿದೆ.

ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ಶಿವರಾಮೇಗೌಡರು, ಇದರಲ್ಲಿರುವುದು ನನ್ನ ಮಗನ ಧ್ವನಿಯಲ್ಲ, ಇದು ವಿರೋಧಿಗಳ ಕುತಂತ್ರ ಎಂದಿದ್ದಾರೆ. “ಸ್ವತಂತ್ರ ಅಭ್ಯರ್ಥಿ ಸಿನಿಮಾ ಕ್ಷೇತ್ರದಿಂದ ಬಂದವರು. ಅವರಿಗೆ ಮಿಮಿಕ್ರಿ ಮಾಡಿಸಿ ಆಡಿಯೋ ಮಾಡಿಸೋದೇನು ಕಷ್ಟದ ಕೆಲಸವಲ್ಲ. ಆದರೆ ನಾನು ನೇರವಾಗಿ ಯಾರ ಮೇಲೂ ಆರೋಪ ಮಾಡಲ್ಲ. ಚುನಾವಣೆಯೊಳಗೆ ಇನ್ನೂ ಎಷ್ಟು ಆಡಿಯೋ ಹೊರಬರಬೇಕೋ! ಈ ಆಡಿಯೋದಲ್ಲಿರುವುದು ಖಂಡಿತ ನನ್ನ ಮಗನ ಧ್ವನಿಯಲ್ಲ. ಬೇಕೆಂದೇ ನನ್ನ ಮಗನ ಮೇಲೆ ಆರೋಪ ಹೊರಿಸಿ ಆತನಿಗೂ, ನನಗೂ ಅವಮಾನ ಮಾಡಲಾಗುತ್ತಿದೆ” ಎಂದು ಶಿವರಾಮೇಗೌಡರು ಆರೋಪಿಸಿದ್ದಾರೆ.

ಈ ಆಡಿಯೋಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸ್ವತಂತ್ರ ಅಭ್ಯರ್ಥಿ, ನಟಿ ಸುಮಲತಾ ಅಂಬರೀಶ್, “ಚುನಾವಣೆಗೂ ಮುನ್ನ ಇಂಥವೆಲ್ಲ (150 ಕೋಟಿ ರೂ. ಖರಚು ಮಾಡುವ ವಿಚಾರ) ನಡೆಯುತ್ತದೆ ಎಂಬ ಬಗ್ಗೆ ನನಗೆ ಮೊದಲೇ ಅನುಮಾನವಿತ್ತು. ಈ ಬಗ್ಗೆ ನಾನು ಚುನಾವಣಾ ಆಯೋಗದ ಬಳಿಯೂ ಪ್ರಸ್ತಾಪಿಸಿದ್ದೆ” ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos